ಇಂದಿನಿಂದ 2ನೇ ಏರ್‌ಪೋರ್ಟ್‌ ವಿರೋಧಿಸಿ ರೈತರ ಹೋರಾಟ

KannadaprabhaNewsNetwork |  
Published : Apr 27, 2025, 01:30 AM IST
ಪೋಟೋ 1 : ದಾಸೇಗೌಡನಪಾಳ್ಯದ ಕೆಂಪೇಗೌಡ ವೃತ್ತದಲ್ಲಿ ಏರ್ ಪೋರ್ಟ್ ಮಾಡದಂತೆ ವಿರೋಧ ಮಾಡಲು ಪೂರ್ವಭಾವಿಸಭೆ ನಡೆಸಿದ ರೈತಮುಖಂಡರು. | Kannada Prabha

ಸಾರಾಂಶ

ದಾಬಸ್‍ಪೇಟೆ: 2ನೇ ವಿಮಾನ ನಿಲ್ದಾಣಕ್ಕಾಗಿ ರೈತರನ್ನು ಒಕ್ಕಲೆಬ್ಬಿಸಬೇಡಿ, "ಪ್ರಾಣ ಬಿಟ್ಟೇವು ನಮ್ಮ ಜಾಗ ಬಿಡೆವು " ಎಂಬ ಘೋಷಣೆಯೊಂದಿಗೆ ಏ.27ರಿಂದ ಹಂತಹಂತವಾಗಿ ಪ್ರತಿ ಗ್ರಾಮಗಳಿಂದ ಬೈಕ್ ರ್ಯಾಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳವರೆಗೂ ಪ್ರತಿಭಟನೆ ಮಾಡಲಾಗುವುದು ಎಂದು ರೈತ ನಾಯಕಿ ಲಲಿತಾ ದಾಸ್ ಹೇಳಿದರು.

ದಾಬಸ್‍ಪೇಟೆ: 2ನೇ ವಿಮಾನ ನಿಲ್ದಾಣಕ್ಕಾಗಿ ರೈತರನ್ನು ಒಕ್ಕಲೆಬ್ಬಿಸಬೇಡಿ, "ಪ್ರಾಣ ಬಿಟ್ಟೇವು ನಮ್ಮ ಜಾಗ ಬಿಡೆವು " ಎಂಬ ಘೋಷಣೆಯೊಂದಿಗೆ ಏ.27ರಿಂದ ಹಂತಹಂತವಾಗಿ ಪ್ರತಿ ಗ್ರಾಮಗಳಿಂದ ಬೈಕ್ ರ್ಯಾಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳವರೆಗೂ ಪ್ರತಿಭಟನೆ ಮಾಡಲಾಗುವುದು ಎಂದು ರೈತ ನಾಯಕಿ ಲಲಿತಾ ದಾಸ್ ಹೇಳಿದರು.

ದಾಸೇಗೌಡನಪಾಳ್ಯದ ಕೆಂಪೇಗೌಡ ವೃತ್ತದಲ್ಲಿ ಭಾನುವಾರದಿಂದ ಹಮ್ಮಿಕೊಂಡಿರುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡರು ಹಾಗೂ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ಗೋಮಾಳದ ಜೊತೆ ಸರ್ಕಾರದ ಎಸ್‍ಆರ್ ಬೆಲೆ 15ರಿಂದ 18 ಲಕ್ಷ ಇರುವ ಕಾರಣ ಕಡಿಮೆ ಬೆಲೆಯಲ್ಲಿ ಭೂಮಿ ಕಬಳಿಸಲು ಅಧಿಕಾರಿಗಳು, ಸರ್ಕಾರಗಳು ಹುನ್ನಾರ ನಡೆಸುತ್ತಿವೆ. ವಿಮಾನ ನಿಲ್ದಾಣ ನಿರ್ಮಾಣವಾದರೆ, ನಮ್ಮ ಭೂಮಿಯೂ ಇಲ್ಲ, ಹಣವೂ ಇಲ್ಲ, ಜೀವನವೂ ಇಲ್ಲದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಸವನಹಳ್ಳಿ ಸುತ್ತಮುತ್ತಲ ಕೃಷಿಚಟುವಟಿಕೆ ಪ್ರದೇಶದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದಾರೆ. ಕೃಷಿ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರ ಸಂಪೂರ್ಣ ವಿರೋಧವಿದ್ದು ಈ ಯೋಜನೆಯನ್ನು ಕೈಬಿಡುವ ತನಕ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದರು.

ಬಸವನಹಳ್ಳಿಯ ಸುತ್ತಮುತ್ತಲ ಪ್ರದೇಶ ಫಲವತ್ತಾಗಿರುವ ಕೃಷಿ ಭೂಮಿಯಾಗಿದೆ. ಅಂತರ್ಜಲ ಮಟ್ಟವೂ ಉತ್ತಮವಾಗಿದ್ದು ಮಾವು, ತೆಂಗು, ಅಡಿಕೆ ಸೇರಿದಂತೆ ಕೃಷಿಯಿಂದ ಜೀವನ ಕಟ್ಟಿಕೊಂಡಿದ್ದಾರೆ. ಈಗ ಕನಕಪುರ ಹಾಗೂ ನೆಲಮಂಗಲ ಸಮೀಪದ ಸೋಲೂರು ಹೋಬಳಿಯ ಜಾಗಗಳು ಅಂತಿಮ ಹಂತದಲ್ಲಿದೆ ಎಂಬ ಮಾಹಿತಿಯಿದೆ. ಸಾವಿರಾರು ರೈತರನ್ನು ಒಕ್ಕಲೆಬ್ಬಿಸುವ ಕೆಲಸವಾಗಲಿದೆ. 2ನೇ ಏರ್‌ಪೋರ್ಟ್ ಈ ಭಾಗದಲ್ಲಿ ಬೇಡ ಎಂದು ನಿವೃತ್ತ ಸರ್ಕಾರಿ ಅಧಿಕಾರಿ ಪ್ರಕಾಶ್‍ಕುಮಾರ್ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಮೋಟಗಾನಹಳ್ಳಿ, ಲಕ್ಕೇನಹಳ್ಳಿ, ಗುಡೇಮಾರನಹಳ್ಳಿ ಗ್ರಾಪಂ ವ್ಯಾಪ್ತಿಯ 400ಕ್ಕೂ ಹೆಚ್ಚು ರೈತರು, ಗ್ರಾಮಸ್ಥರು, ಮಹಿಳೆಯರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಮುಖಂಡರಾದ ಬಸವರಾಜು, ಜಗದೀಶ್, ಆಂಜನಪ್ಪ, ಹರೀಶ್, ರಾಮಣ್ಣ, ವಿನೋದ್, ರಾಜಣ್ಣ, ಹಾಗೂ ವಿವಿಧ ಗ್ರಾ.ಪಂ. ವ್ಯಾಪ್ತಿಯ ಅಧ್ಯಕ್ಷರು, ಸದಸ್ಯರು, ಸ್ತ್ರೀಶಕ್ತಿ ಸಂಘದವರು, ರೈತ ಮುಖಂಡರು ಭಾಗವಹಿಸಿದ್ದರು.

(ಪೋಟೋ ಕ್ಯಾಪ್ಷನ್)

ದಾಸೇಗೌಡನಪಾಳ್ಯದ ಕೆಂಪೇಗೌಡ ವೃತ್ತದಲ್ಲಿ ತಾಲೂಕಿನ ಬಸವನಹಳ್ಳಿ ಸುತ್ತಮುತ್ತಲ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಹೋರಾಟದ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ರೈತ ನಾಯಕಿ ಲಲಿತಾ ದಾಸ್ ಮಾತನಾಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ