ಕನ್ನಡಪ್ರಭ ವಾರ್ತೆ ರಾಮನಗರ
ಚಿಕ್ಕಬೈರಮಂಗಲ, ಕೊಡಳ್ಳಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಧರಣಿ ನಡೆಸುತ್ತಿರುವ ನೂರಾರು ರೈತರು, ಪ್ರಾಣ ಕೊಟ್ಟರೂ ಭೂಮಿ ಕೊಡಲ್ಲ, ಜೆಎಂಸಿ ಕಾರ್ಯಾಚರಣೆ ನಿಲ್ಲಿಸಿ ಅಧಿಕಾರಿಗಳೇ ಗ್ರಾಮದಿಂದ ಹೊರ ನಡೆಯಿರಿ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ ಭೂ ಸ್ವಾಧೀನ ಪ್ರಕ್ರಿಯೆಗೆ ನೋಟಿಸ್ ನೀಡಿರುವುದು ಹಾಗೂ ಜೆಎಂಸಿ ಸರ್ವೆ ಕಾರ್ಯಾಚರಣೆ ಮಾಡುತ್ತಿರುವುದು ಅನ್ಯಾಯ. ಶಾಸಕರು, ಸಚಿವರು ಅಥವಾ ಜಿಲ್ಲಾಧಿಕಾರಿ, ಜಿಬಿಡಿಎ ಆಯುಕ್ತರಾದಿಯಾಗಿ ಸರ್ಕಾರದಿಂದ ಅಧಿಕೃತ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಜೊತೆ ಚರ್ಚೆ ನಡೆಸಬೇಕು. ಅಲ್ಲಿವರೆಗೆ ಜೆಎಂಸಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಎಂದು ಒತ್ತಾಯಿಸಿದರು.ಬೈರಮಂಗಲ ಮತ್ತು ಕುಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ವಿರೋಧಿ ಈಗಾಗಲೇ ರೈತರು ಹಲವು ಬಾರಿ ಸಭೆ ನಡೆಸಿದ್ದೇವೆ. ಆದರೆ, ಸರ್ಕಾರ ತನ್ನ ನಿಲುವಿಗೂ ಮುನ್ನ ರೈತರೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೆ ಏಕ ಪಕ್ಷಿಯ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.
ಸರ್ಕಾರಿ ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡು ತಮಗೆ ಬೇಕಾದಂತೆ ಕೆಲಸ ಮಾಡಿಸುತ್ತಿದ್ದಾರೆ. ಅಧಿಕಾರಿಗಳನ್ನು ಬಿಟ್ಟು ಜೆಎಂಸಿ ಸರ್ವೆ ಮಾಡಿಸಲು ಮುಂದಾಗಿದ್ದಾರೆ. ನಮ್ಮ ಜಮೀನುಗಳನ್ನು ಜೆಎಂಸಿ ಸರ್ವೆ ಮಾಡಲು ಅವಕಾಶ ನೀಡುವುದಿಲ್ಲ. ಪ್ರಾಣ ಬಿಟ್ಟರೂ ನಮ್ಮ ಕೃಷಿ ಭೂಮಿ ಕೊಡುವುದಿಲ್ಲ. ನ್ಯಾಯ ಸಿಗುವವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಒಂದು ಕೈಯಲ್ಲಿ ಪುಕ್ಸಟೆ ಯೋಜನೆಗಳನ್ನು ಕೊಟ್ಟು, ಮತ್ತೊಂದು ಕೈಯಿಂದ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ನಿಮ್ಮ ಪುಕ್ಸಟೆ ಯೋಜನೆಗಳು ನಮಗೆ ಬೇಕಾಗಿಲ್ಲ. ಈಗಿನಿಂದಲೇ ಅವೆಲ್ಲವನ್ನು ಸ್ಥಗಿತಗೊಳಿಸಿ. ನಿಮಗೆ ಮಾನ ಮರ್ಯಾದೆ ಎನ್ನುವುದಿದ್ದರೆ ರೈತರೊಂದಿಗೆ ಸಭೆ ನಡೆಸಿ ಅಹವಾಲು ಆಲಿಸುವ ಕೆಲಸ ಮಾಡಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
-----
ಬೈರಮಂಗಲ ವೃತ್ತದಲ್ಲಿ ರೈತರು 2ನೇ ದಿನವಾದ ಶನಿವಾರವೂ ಪ್ರತಿಭಟನಾ ಧರಣಿ ಮುಂದುವರೆಸಿದರು.