ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರತಿ ಟನ್ ಕಬ್ಬಿಗೆ 5500 ಘೋಷಣೆ ಮಾಡಬೇಕು. ಎಫ್‌ಆರ್‌ಪಿ ದರ ಹೆಚ್ಚಳ ಆಗಬೇಕು. ಎಂಎಸ್ಪಿ ದರ ₹60 ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ರೈತರು, ರಸ್ತೆ ಪಕ್ಕದಲ್ಲಿ ಅಡುಗೆ ಮಾಡಿ ಅಲ್ಲಿಯೇ ಊಟ ಮಾಡಿದರು. ಸೋಮವಾರ ದೆಹಲಿಯಲ್ಲಿ ರೈತರು ಹಾಗೂ ಕೇಂದ್ರ ಮಂತ್ರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಬ್ಬಿಗೆ ಒಮ್ಮತದ ಬೆಲೆ ನೀಡಲು ವಿಫಲವಾದ ಬೆನ್ನಲ್ಲೇ ಪ್ರತಿಭಟನೆ ಆರಂಭಗೊಂಡಿದೆ.ಮಂಗಳವಾರ ಬೆಳಗ್ಗೆಯಿಂದ ಗದ್ದನಕೇರಿ ಕ್ರಾಸ್‌ಗೆ ಆಗಮಿಸಿದ ರೈತರು, ಮೊದಲು ರಸ್ತೆ ತಡೆದರು. ಅದಕ್ಕೆ ಸಹಕಾರ ನೀಡಿದ ಪೊಲೀಸರು ವಾಹನ ಸಂಚಾರದ ಮಾರ್ಗಗಳನ್ನು ಬದಲಿಸಿದರು. ಬೆಳಗಾವಿಯಿಂದ ಬರುವ ಬಸ್ ಹಾಗೂ ಇತರೆ ವಾಹನಗಳನ್ನು ಛಬ್ಬಿ ಕ್ರಾಸ್ ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕಳುಹಿಸಿದರು. ಆದರೆ ಅಲ್ಲಿಂದಲೂ ಬಸ್ ಹಾಗೂ ಇತರೆ ವಾಹನಗಳು ಹೋಗದಂತೆ ಪೊಲೀಸರು ತಡೆಯಬೇಕು ಎಂದು ರೈತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲ ವೀರಣ್ಣ ಹಳೇಗೌಡರ ಮಾತನಾಡಿ, ಆ ಪಕ್ಷ ಈ ಪಕ್ಷ ಬಿಡಿ. ರೈತರ ಪಕ್ಷ ಕಟ್ಟಿ ಅವರಿಗೆ ತಕ್ಕ ಪಾಠ ಕಲಿಸಿ. ಎಲ್ಲ ಪಕ್ಷ ನಾಯಕರು ಒಂದೇ ಇದ್ದಾರೆ. ಇಲ್ಲಿ ನಿಮ್ಮಲ್ಲಿ ಜಗಳ ಹಚ್ಚಿ ಅವರೆಲ್ಲ ದೊಡ್ಡ ದೊಡ್ಡ ಹೋಟೆಲ್‌ನಲ್ಲಿ ಕೂಡಿ ಊಟ ಮಾಡುತ್ತಾರೆ. ಹೀಗಿರುವಾಗ ರೈತರೆಲ್ಲ ಒಂದಾಗಿ ಎಂದು ಮನವಿ ಮಾಡಿದರು.ರೈತ ಮುಖಂಡ ಶಿವನಗೌಡ ಪಾಟೀಲ ಮಾತನಾಡಿ, ನಮಗೆ ಸರ್ಕಾರಗಳು ಕೂಡಲೇ ಸೂಕ್ತ ಬೆಂಬಲ ಬೆಲೆ ಕೊಡಬೇಕು. ರೈತರನ್ನು ಸಚಿವ ಪ್ರಹ್ಲಾದ ಜೋಶಿ ದೆಹಲಿಗೆ ಕರೆಸಿ ನಮಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಹುನಗುಂದ ಪಟ್ಟಣದ ಸಮೀಪ ರಾಯಚೂರು- ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ತಡೆದ ಕಾರಣ ವಾಹನಗಳು ಸಾಲು ಸಾಲಾಗಿ ನಿಂತಿದ್ದವು. ಸ್ಥಳದಲ್ಲಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು.ಕನ್ನಡಪ್ರಭ ವಾರ್ತೆ ಬಾಗಲಕೋಟೆಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಳ, ಎಂಎಸ್ಪಿ ಬೆಲೆ ಹೆಚ್ಚಳ ಹಾಗೂ ವಿವಿಧ ಬೇಡಿಕೆಗೆ ಆಗ್ರಹಿಸಿ ಗದ್ದನಕೇರಿ ಕ್ರಾಸ್ ನಲ್ಲಿ ಎತ್ತು ಚಕ್ಕಡಿ ಸಮೇತ ಆಗಮಿಸಿದ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಭಾರೀ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ, ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಗೆ ಸಂಪರ್ಕವಾಗಿರುವ ಗದ್ದನಕೇರಿ ಕ್ರಾಸ್‌ನಲ್ಲಿ ರೈತರು ಪ್ರತಿಭಟನೆ ನಡೆಸಿದ್ದರಿಂದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿತ್ತು.