ಈರುಳ್ಳಿ ಮೂಟೆ ರಸ್ತೆಯಲ್ಲಿಟ್ಟು ರೈತರಿಂದ ಪ್ರತಿಭಟನೆ

KannadaprabhaNewsNetwork | Published : Oct 2, 2024 1:06 AM

ಸಾರಾಂಶ

ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯೊಳಗೆ ಈರುಳ್ಳಿ ಹೊತ್ತು ತರುವ ವಾಹನಗಳು ಯಾರ್ಡ್‌ ಒಳಗೆ ಬರಲು ಸಾಧ್ಯವಾಗದೆ ವ್ಯಾಪಾರಕ್ಕೆ ಹಿನ್ನಡೆಯಾಗುತ್ತಿದೆ ಎಂದು ರೈತರು ಎಪಿಎಂಸಿ ರಸ್ತೆಯಲ್ಲಿ ಈರುಳ್ಳಿ ಮೂಟೆಗಳನ್ನಿಟ್ಟು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೇಕಾಬಿಟ್ಟಿ ಲಾರಿಗಳ ನಿಲುಗಡೆಯಿಂದ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯೊಳಗೆ ಈರುಳ್ಳಿ ಹೊತ್ತು ತರುವ ವಾಹನಗಳು ಯಾರ್ಡ್‌ ಒಳಗೆ ಬರಲು ಸಾಧ್ಯವಾಗದೆ ವ್ಯಾಪಾರಕ್ಕೆ ಹಿನ್ನಡೆಯಾಗುತ್ತಿದೆ ಎಂದು ರೈತರು ಎಪಿಎಂಸಿ ರಸ್ತೆಯಲ್ಲಿ ಈರುಳ್ಳಿ ಮೂಟೆಗಳನ್ನಿಟ್ಟು ಪ್ರತಿಭಟನೆ ನಡೆಸಿದರು.

ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 75 ರು. ದರ ಇದ್ದುದರಿಂದ ಸಹಜವಾಗಿ ಸಗಟು ಸರಕಿಗೂ ಹೆಚ್ಚಿನ ಬೆಲೆ ಇದ್ದ ಹಿನ್ನೆಲೆ ಮಂಗಳವಾರ ಬೆಳಗ್ಗೆ 606 ಈರುಳ್ಳಿ ವಾಹನಗಳು ಎಪಿಎಂಸಿಗೆ ಬಂದಿದ್ದವು. ಈ ಹಿನ್ನೆಲೆ ವಿಪರೀತ ದಟ್ಟಣೆ ಉಂಟಾಗಿ ರೈತರು, ಈರುಳ್ಳಿ ತಂದಿದ್ದ ವರ್ತಕರು ಸಮಸ್ಯೆಗೀಡಾದರು. ಲಾರಿಗಳು ಈರುಳ್ಳಿ ವಿಭಾಗಕ್ಕೆ ಬರಲಾಗದೆ ಯಾರ್ಡ್‌ ನಲ್ಲಿ ಸಿಲುಕಿದ್ದವು. ಇದರಿಂದ ಮಂಡಿಗಳ ಬಳಿ ಹೋಗಲಾಗದೆ ವ್ಯಾಪಾರಕ್ಕೆ ಹಿನ್ನಡೆ ಆಗುತ್ತಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಈರುಳ್ಳಿ ಮೂಟೆಗಳನ್ನು ರಸ್ತೆಗೆ ಇಳಿಸಿ ಪ್ರತಿಭಟಿಸಿದರು. ಈ ಹಿಂದೆಯೂ ಲಾರಿಗಳ ಓಡಾಟವನ್ನು ವ್ಯವಸ್ಥಿತವಾಗಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದರು. ಭರವಸೆ ನೀಡಿದ ಬಳಿಕ ಮೂಟೆಗಳನ್ನು ಲಾರಿಗಳಿಗೆ ತುಂಬಿಸಿದರು.

ಭರ್ಜರಿ ಉತ್ಪನ್ನ: ಸೋಮವಾರ ಯಶವಂತಪುರಕ್ಕೆ ಬರೋಬ್ಬರಿ 606 ಲಾರಿಗಳಲ್ಲಿ 106234 ಚೀಲ ಈರುಳ್ಳಿ ಬಂದಿತ್ತು. ಮಹಾರಾಷ್ಟ್ರದ ಈರುಳ್ಳಿಗೆ ಸಗಟು ದರ ಕ್ವಿಂಟಲ್‌ಗೆ 4300 ರಿಂದ 4500 ರು. ವರೆಗಿತ್ತು. ರಾಜ್ಯದ ಈರುಳ್ಳಿ 3500-3600 ರು.ಇತ್ತು. ಅತ್ಯಧಿಕ ಪ್ರಮಾಣದಲ್ಲಿ ಉತ್ಪನ್ನ ಬಂದ ಹಿನ್ನೆಲೆ ವ್ಯಾಪಾರಸ್ಥರು ಪೂರ್ಣ ವಹಿವಾಟು ನಡೆಸಲು ಪರದಾಡಬೇಕಾಯಿತು.

ಇಂದು ರಜೆ: ಗಾಂಧಿ ಜಯಂತಿ ಪ್ರಯುಕ್ತ ಇಂದು ಎಪಿಎಂಸಿಗೆ ರಜೆಯಿದೆ. ಸೋಮವಾರ ಈರುಳ್ಳಿ ಸರಕು ಹೆಚ್ಚಿಗೆ ಬಂದಿರುವುದರಿಂದ ಬುಧವಾರದಂದು ಡೆಲಿವರಿ ಮೂಟೆಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ನಾಳೆ ಯಾರೂ ಕೂಡ ಹೊಸದಾಗಿ ಬಂದಿರುವ ಈರುಳ್ಳಿ ತೆಗೆದುಕೊಳ್ಳುವುದಿಲ್ಲ. ಹೊಸ ಲೋಡಿನ ವ್ಯಾಪಾರ ನಡೆಯುವುದಿಲ್ಲ ಎಂದು ಈರುಳ್ಳಿ ವರ್ತಕರ ಸಂಘ ತಿಳಿಸಿದೆ. ಬೆಳ್ಳುಳ್ಳಿ ತಪಾಸಣೆ: ರಾಜ್ಯದಲ್ಲಿ ಚೀನಾ ಬೆಳ್ಳುಳ್ಳಿ ಹಾವಳಿ ಹಿನ್ನೆಲೆಯಲ್ಲಿ ಮಂಗಳವಾರ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಯಶವಂತಪುರ ಎಪಿಎಂಸಿಗೆ ಬಂದು ತಪಾಸಣೆ ನಡೆಸಿದ್ದಾರೆ. ಕೆಲವು ಬೆಳ್ಳುಳ್ಳಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಎಪಿಎಂಸಿಗೆ ಅಫ್ಘಾನಿಸ್ತಾನದ ಬೆಳ್ಳುಳ್ಳಿ ಬಂದಿದೆ. ವರ್ತಕರಿಗೆ ಚೀನಾ ಬೆಳ್ಳುಳ್ಳಿ ತರಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ ತಿಳಿಸಿದರು.

ಈರುಳ್ಳಿ ವರ್ತಕರು ಎಪಿಎಂಸಿ ಯಾರ್ಡ್‌ನಲ್ಲಿ ಈರುಳ್ಳಿ ಮೂಟೆಗಳನ್ನಿಟ್ಟು ಪ್ರತಿಭಟನೆ ನಡೆಸಿದರು.

Share this article