ಹೊಸಪೇಟೆಯಲ್ಲಿ ಈರುಳ್ಳಿ ರಸ್ತೆಗೆ ಸುರಿದು ರೈತರ ಪ್ರತಿಭಟನೆ

KannadaprabhaNewsNetwork | Published : Apr 26, 2024 12:46 AM

ಸಾರಾಂಶ

ಈರುಳ್ಳಿ ಬೆಳೆದ ರೈತರು ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ರೈತರ ಕಣ್ಣೀರು ಒರೆಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ.

ಹೊಸಪೇಟೆ: ಈರುಳ್ಳಿ ದರ ಕುಸಿದಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರ ನೆರವಿಗೆ ಧಾವಿಸಬೇಕಾದ ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ನಗರದ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಗುರುವಾರ ಈರುಳ್ಳಿಯನ್ನು ರಸ್ತೆಗೆ ಸುರಿದು ಉಚಿತವಾಗಿ ಜನರಿಗೆ ಹಂಚಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ಈರುಳ್ಳಿ ಬೆಳೆದ ರೈತರು ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ರೈತರ ಕಣ್ಣೀರು ಒರೆಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಈರುಳ್ಳಿ ಬೆಲೆ ಹೆಚ್ಚಾದಾಗ ಕೂಡಲೇ ಬೇರೆ ದೇಶಗಳಿಂದ ಈರುಳ್ಳಿ ತರಿಸುವ ಸರ್ಕಾರ, ಬೆಲೆ ಕುಸಿದಾಗ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈರುಳ್ಳಿ ಬೆಲೆ ದಿನೇದಿನೇ ಕುಸಿಯುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಪರ ನಿಲುವು ತಳೆಯುತ್ತಿಲ್ಲ. ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದರೂ ಸರ್ಕಾರ ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ. ಈ ಸರ್ಕಾರ ಕಾರ್ಪೊರೇಟ್‌ ವಲಯದ ಸರ್ಕಾರ ಆಗಿದೆ. ಆದರೆ, ಬಡ ರೈತರ ನೆರವಿಗೆ ಏಕೆ ಧಾವಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ, ಈರುಳ್ಳಿ ಬೆಳೆಗಾರ ಗೋಣಿಬಸಪ್ಪ ಮಾತನಾಡಿ, ಹೊಸಪೇಟೆ ಎಪಿಎಂಸಿಗೆ ಮೂರು ಚೀಲ ಈರುಳ್ಳಿ ತಂದರೂ ಖರೀದಿ ಆಗಿಲ್ಲ. ಒಂದು ಎಕರೆಗೆ ಈರುಳ್ಳಿ ಬೆಳೆಯಲು ₹80 ಸಾವಿರ ವೆಚ್ಚ ಆಗುತ್ತದೆ. ಆದರೆ, ಕ್ವಿಂಟಲ್‌ಗೆ ₹600 ಕೂಡ ಸಿಗುತ್ತಿಲ್ಲ. ಇದರಿಂದ ಈರುಳ್ಳಿಯನ್ನು ಚರಂಡಿಗೆ ಎಸೆದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೆ. ತಿನ್ನುವ ಈರುಳ್ಳಿಯನ್ನು ಎಸೆಯುವುದು ಬೇಡ ಎಂದು ಈಗ ಉಚಿತವಾಗಿ ಹಂಚುವ ಮೂಲಕ ಸರ್ಕಾರದ ಧೋರಣೆ ಖಂಡಿಸುತ್ತಿರುವೆ ಎಂದರು.

ನಗರದ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಮೂರು ಚೀಲ ಈರುಳ್ಳಿಯನ್ನು ಜನರಿಗೆ ಕೂಗಿ, ಕೂಗಿ ಕರೆದು ಉಚಿತವಾಗಿ ಹಂಚಲಾಯಿತು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದನಗೌಡ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್‌.ಕೆ. ನಾಯ್ಡು, ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ಗಂಟೆ ಸೋಮಶೇಖರ್, ಮುಖಂಡರಾದ ಎಸ್‌. ಬಾಷಾ, ಕಾಳಪ್ಪ, ಯಶೋದಾ ಮತ್ತಿತರರಿದ್ದರು.

Share this article