ಸಾಲಮನ್ನಾಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Oct 13, 2026, 03:45 AM IST
Rajya Raitha Vakkuta protest8 | Kannada Prabha

ಸಾರಾಂಶ

ರೈತರ ಕೃಷಿ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೈತರ ಕೃಷಿ ಸಾಲ ಮನ್ನಾ, ಎಕರೆಗೆ ಕನಿಷ್ಟ 25 ಸಾವಿರ ರು. ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ್ದ ಸಾವಿರಾರು ರೈತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ರಾಜ್ಯದ 217 ತಾಲೂಕು ಭೀಕರ ಬರಗಾಲಕ್ಕೆ ತುತ್ತಾಗಿ ಸುಮಾರು 20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿವೆ. ಸರ್ಕಾರ ಪ್ರತಿ ರೈತರಿಗೆ 2 ಸಾವಿರ ರು. ಪರಿಹಾರ ನೀಡಲು ಮುಂದಾಗಿದೆ. ಆದ್ದರಿಂದ ರೈತರಿಗೆ ‘ಸರ್ಕಾರದ ಭಿಕ್ಷೆ ಬೇಡ’ ಎಂದು ಧರಣಿ ನಿರತ ರೈತರಿಂದ ತಲಾ ಒಂದು ರು, ಐದು ರು. ಸೇರಿ ಒಟ್ಟಾರೆ 1,770 ರು. ಅನ್ನು ಭಿಕ್ಷೆ ಮೂಲಕ ಸಂಗ್ರಹಿಸಿ ಸರ್ಕಾರಕ್ಕೆ ಡಿಡಿ ತೆಗೆದು ಕಳುಹಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾ, ತ.ನಾಡಲ್ಲಿ ಮಾಡಿದ್ದಾರೆ:

ಮಹಾರಾಷ್ಟ್ರದಲ್ಲಿ ಎರಡು ಲಕ್ಷ ರುಪಾಯಿಯವರೆಗೂ ರೈತರ ಸಾಲ ಮನ್ನಾ ಮಾಡಿದ್ದಾರೆ. ತಮಿಳುನಾಡಿನಲ್ಲೂ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಅಲ್ಲಿನ ರೈತರಿಗೆ ಇಷ್ಟೊಂದು ಭೀಕರವಾದ ಕಷ್ಟ ಇರಲಿಲ್ಲ. ಆದ್ದರಿಂದ ತಕ್ಷಣ ಕರ್ನಾಟಕ ಸರ್ಕಾರ ರೈತರ ಎಲ್ಲ ರೀತಿಯ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಗ್ರಾಮೀಣ ಮಹಿಳೆಯರು ಖಾಸಗಿ ಫೈನಾನ್ಸ್‌ಗಳಿಂದ ಪಡೆದಿರುವ ಸಾಲಗಳ ವಸೂಲಾತಿಯನ್ನು ಎರಡು ವರ್ಷ ಸ್ಥಗಿತಗೊಳಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಗೆ ಆಗಮಿಸುತ್ತಿದ್ದ ಹಲವು ರೈತರಿಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲೇ ಬೆಳಗ್ಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಸಂಕಷ್ಟ ಕಾಲದಲ್ಲೂ ಮೋಜಿಗಾಗಿ ದಸರಾ ಹೆಸರಿನಲ್ಲಿ ಮೂರು ಕೋಟಿ ಯುನಿಟ್ ವಿದ್ಯುತ್ ಬಳಸಿ ದೀಪಾಲಂಕಾರ ಮಾಡುವುದನ್ನು ನಿಲ್ಲಿಸಿ. ಆಹಾರ ಉತ್ಪಾದಿಸುವ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಅಡಕೆ ಬೆಳೆಗಾರರಿಗೆ ಪ್ರೋತ್ಸಾಹದಾಯಕ ಯೋಜನೆ ಜಾರಿಗೆ ತರಬೇಕು. ಕೇಂದ್ರ ಸರ್ಕಾರವು ಕಬ್ಬಿನ ಎಫ್‌ಆರ್‌ಪಿ ದರ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಜೊತೆ ಸಭೆಗೆ ಸತೀಶ್‌ ಸಮ್ಮತಿ

ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರವಾಗಿ ಆಗಮಿಸಿ ಮನವಿ ಸ್ವೀಕರಿಸಿದ ಸಚಿವ ಸತೀಶ್‌ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ವಾರದೊಳಗೆ ಸಭೆ ಆಯೋಜಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಸಮಸ್ಯೆ ಪರಿಹಾರಕ್ಕೆ ಡಿಜಿಟಲ್‌ ಟ್ವಿನ್‌ ಚಿಂತನೆ
ವಿವಿಧ ಕಾಮಗಾರಿಗಳ ಕಡತಗಳು 2 ತಿಂಗ್ಳಿಂಧ ಸಚಿವರ ಬಳಿ ಇದೆ ಏಕೆ