ಕಾಡಾನೆಗಳ ಸ್ಥಳಾಂತರಕ್ಕೆ ಆಗ್ರಹ: ರೈತರ ಪ್ರತಿಭಟನೆ

KannadaprabhaNewsNetwork |  
Published : Nov 28, 2024, 12:30 AM IST
ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬುಧವಾರ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಕಾಡಾನೆಗಳನ್ನು ಸ್ಥಳಾಂತರಿಸಿ ರೈತರ ಬೆಳೆ ರಕ್ಷಿಸಿ, ಜೀವ ಹಾನಿ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಆಜಾದ್‌ ಪಾರ್ಕ್‌ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ರೈತರು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಡಾನೆಗಳನ್ನು ಸ್ಥಳಾಂತರಿಸಿ ರೈತರ ಬೆಳೆ ರಕ್ಷಿಸಿ, ಜೀವ ಹಾನಿ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್‌ ವೃತ್ತದವರೆಗೆ ನೂರಾರು ಸಂಖ್ಯೆಯ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಆನೆಗಳನ್ನು ಓಡಿಸುವಲ್ಲಿ ಅರಣ್ಯ ಇಲಾಖೆ ಮತ್ತು ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಘೊಷಣೆಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಆಜಾದ್‌ ಪಾರ್ಕ್‌ ವೃತ್ತದಲ್ಲಿ ಸಮಾವೇಶಗೊಂಡ ಮಾನವ ಸರಪಳಿ ರಚಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ನಗರದ ಪಕ್ಕದಲ್ಲೇ ಇರುವ ಸುಮಾರು 10 ಗ್ರಾಮಗಳಲ್ಲಿ ಕಳೆದ 20 ದಿನಗಳಿಂದ 27 ಕಾಡಾನೆಗಳ ಹಿಂಡು ಭಾರಿ ಅವಾಂತರ ಸೃಷ್ಟಿಸುತ್ತಿವೆ.ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ, ಅರಣ್ಯಾಧಿಕಾರಿಗಳ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದ್ದು ಇನ್ನು ಮೂರು ದಿನಗಳೊಳಗೆ ಪರಿಣಿತರ ತಂಡ ಕರೆಸಿ ಆನೆಗಳನ್ನು ಸ್ಥಳಾಂತರಿಸದಿದ್ದರೆ ಹೋರಾಟ ಪ್ರಖರಗೊಳಿಸಲಾಗುವುದೆಂದು ಎಚ್ಚರಿಸಿದರು.ಕಾಡಾನೆ, ಕಾಡು ಹಂದಿ, ನವಿಲುಗಳ ಹಾವಳಿಯಿಂದ ರೈತರು ಬೆಳೆಗಳನ್ನು ಕಾಪಾಡುವುದೇ ದುಸ್ಥರವಾಗಿದೆ. ಜಿಲ್ಲೆಯಲ್ಲಿ ಲಕ್ಷಾಂತರ ಎಕರೆ ಅರಣ್ಯ ಪ್ರದೇಶವಿದ್ದು, ಆನೆಗಳನ್ನು ಅರಣ್ಯಕ್ಕೆ ಸೇರಿಸಿ ಆನೆಗಳು ಹೊರ ಬಾರದಂತೆ ರೈಲ್ವೇ ಹಳಿಗಳನ್ನು ಬಳಸಿ ಬೇಲಿ ನಿರ್ಮಿಸಲಿ ಎಂದು ಒತ್ತಾಯಿಸಿದರು.

25-30 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿ ಫಸಲು ಕಟಾವಿಗೆ ಬಂದಿದ್ದು ಕಾಡಾನೆಗಳ ಹಾವಳಿಯಿಂದ ಸಾವಿರಾರು ಕಾಫಿ ಗಿಡ ಗಳು ನಾಶವಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಸ್ವಸ್ಥಾನಕ್ಕೆ ಸೇರಿಸುವ ಕೆಲಸ ಮಾಡುತ್ತಿಲ್ಲ. ಹಲವು ಬಾರಿ ಕಾಡಾನೆಗಳ ಹಾವಳಿ ಬಗ್ಗೆ ಮಾಹಿತಿಯನ್ನು ಅರಣ್ಯ ಇಲಾಖೆ ಗಮನಕ್ಕೆ ತಂದರೂ ಅರಣ್ಯ ಇಲಾಖೆ ಸಿಬ್ಬಂದಿ ಬರೀ ಸಿದ್ಧ ಉತ್ತರ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಹಿಂಡಾಗಿ ಬರುತ್ತಿದ್ದ ಆನೆಗಳು ಈಗ ಒಂಟಿಯಾಗಿ ಸುತ್ತುತ್ತಿರುವುದಾಗಿ ಗ್ರಾಮಸ್ಥರು ಹೇಳುತ್ತಿದ್ದು, ನಮಗೆ ಯಾವಾಗ ಆನೆಗಳು ಅಪಾಯ ತಂದೊಡ್ಡುತ್ತವೋ ಎಂಬ ಭಯ ಕಾಡುತ್ತಿರುವುದಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ. ರೈತರ ಜಮೀನು ಗಳಿಗೆ ನುಗ್ಗಿ ಹಾನಿ ಮಾಡುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಸ್ವ ಸ್ಥಾನಕ್ಕೆ ಆನೆಗಳನ್ನು ಓಡಿಸಬೇಕೆಂದು ಆಗ್ರಹಿಸಿದರು.ಬೆಳೆ ನಷ್ಟ ಗೊಂಡಿರುವ ರೈತರಿಗೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರದ ಮೊತ್ತ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಯಂತಾಗಿದ್ದು ಪ್ರಸ್ತುತ ನೀಡುತ್ತಿರುವ ಪರಿಹಾರದ ಮೊತ್ತವನ್ನು ದ್ವಿಗುಣಗೊಳಿಸಬೇಕು. ಜಿಲ್ಲಾಧಿಕಾರಿ ಕೂಡಲೇ ರೈತರು, ಬೆಳೆಗಾರರು, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬರುವ ಸಲಹೆಗಳನ್ನಾಧರಿಸಿ ಸರ್ಕಾರಕ್ಕೆ ವಾಸ್ತವ್ಯ ವರದಿ ಸಲ್ಲಿಸುವಂತೆ ಆಗ್ರಹಿಸಿದರು.ಸಂಘಟನೆ ರಾಜ್ಯ ಸಮಿತಿ ಸದಸ್ಯ ಕೆ.ಕೆ. ಕೃಷ್ಣೇಗೌಡ ಮಾತನಾಡಿ, ಕಾಫಿ ಕೊಯ್ಲಿನ ಸಮಯವಾದ್ದರಿಂದ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ವಲಸೆ ಕಾರ್ಮಿಕರು ಊರಿನ ಹೊರವಲಯದಲ್ಲಿ ಸಂಸಾರ ಸಮೇತ ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಿಸಿಕೊಂಡು ಕೂಲಿ ಕೆಲಸ ಮಾಡುತ್ತಿದ್ದು ಕಾಡಾನೆಗಳ ಭಯದಲ್ಲಿ ಇವರೆಲ್ಲರೂ ಜೀವ ಕೈಯಲ್ಲಿಹಿಡಿದು ಬದುಕುತ್ತಿದ್ದಾರೆ ಎಂದು ಹೇಳಿದರು.ಚಿಕ್ಕಮಗಳೂರು ತಾಲೂಕು ಘಟಕದ ಅಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಭತ್ತ, ಶುಂಠಿ, ಮೆಕ್ಕೆಜೋಳ, ಕಾಫಿ ಬೆಳೆಗಳ ಜಮೀನಿಗೆ ನುಗ್ಗಿ ಲೂಟಿ ಮಾಡುತ್ತಿವೆ. ಕಾಫಿ ತೋಟಕ್ಕೆ ದಿಗ್ಬಂಧನ ಹಾಕಿ ಸೈರನ್ ವಾಹನ ಗಳ ಓಡಾಟ ನಡೆಸಿ ಪಟಾಕಿಗಳನ್ನು ಸಿಡಿಸಿದ ಪರಿಣಾಮದಿಂದ ಕಾಫಿ ತೋಟದಲ್ಲಿದ್ದ ಆನೆಗಳು ಬೆದರಿ ಇಡಿ ತೋಟ ದೊಳಗೆಲ್ಲ ಓಡಾಡಿ ಕಾಫಿ ಗಿಡಗಳನ್ನು ಬೇರು ಸಮೇತ ಕಿತ್ತು ತುಳಿದು ಹಾಕುತ್ತಿವೆ ಎಂದು ಹೇಳಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಮಹೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಉಮೇಶ್, ತಾಲೂಕು ಖಜಾಂಚಿ ಪರ್ವತೇ ಗೌಡ, ಮುಖಂಡರಾದ ಅಣ್ಣೇಗೌಡ, ಲೋಕೇಗೌಡ, ಅಜಿತ್, ಯಶ್ವಂತ್, ಆದರ್ಶ ಹಾಗೂ ಆನೆಗಳ ಹಾವಳಿಯಿಂದ ಬೆಳೆ ಕಳೆದುಕೊಂಡಿರುವ ರೈತ ಕುಟುಂಬಗಳು ಭಾಗವಹಿಸಿದ್ದರು. 27 ಕೆಸಿಕೆಎಂ 5ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬುಧವಾರ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ