ರಾಣಿಬೆನ್ನೂರು: ಕಬ್ಬಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ಬಂದ್ ಕರೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು. ಕಬ್ಬು ಬೆಳೆಗಾರರ ಸಂಘದ ಮುಖಂಡರೊಂದಿಗೆ ಚರ್ಚಿಸಿ ಕಬ್ಬಿಗೆ ಪ್ರತಿ ಟನ್‌ಗೆ ರು.5500 ಬೆಂಬಲ ಬೆಲೆ ಘೋಷಿಸಬೇಕು. ರಾಣಿಬೆನ್ನೂರು ತಾಲೂಕನ್ನು ದಕ್ಷಿಣ ಕರ್ನಾಟಕ್ಕೆ ಸೇರಿಸಿ ಅನ್ಯಾಯ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಉತ್ತರ ಕರ್ನಾಟಕ ಜಿಲ್ಲೆಗೆ ಹಾವೇರಿಯನ್ನು ಸೇರ್ಪಡಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಿದ್ದರೆ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಲಿದೆ. ರೈತರ ಬೇಡಿಕೆಗಳನ್ನು ಸರ್ಕಾರಗಳು ನಿರ್ಲಕ್ಷಿಸದೆ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ರೈತರ ಈ ಪ್ರತಿಭಟನೆ ಕೇವಲ ರಾಣೆಬೆನ್ನೂರು ತಾಲೂಕಿಗೆ ಸೀಮಿತವಾಗಿಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂಬ ಎಚ್ಚರಿಕೆಯ ಸಂದೇಶವಾಗಿದೆ ಎಂದರು.
ಕೃಷ್ಣ ಸಾವಕಾರ, ನಾರಾಯಣ ಅರ್ಕಾಚಾರಿ, ಸುನೀಲ ಸಾವಕಾರ, ಪ್ರಕಾಶ ದೊಡ್ಡಮನಿ, ಸುಧಾಕರ ಸಾವಕಾರ, ಸತ್ಯಪ್ಪ ವೆಲ್ಲೂರಿ, ವೆಂಕಣ್ಣ ಸಾವಕಾರ, ಹನುಮಂತಪ್ಪ ಕೋಣೆ, ಸಿದ್ದಪ್ಪ ರೆಡ್ಡೇರ, ನಾಗಪ್ಪ ಮಲೇಬೆನ್ನೂರು, ರವಿ ಸಾವಕಾರ, ಬಸವರಾಜಪ್ಪ ಮೇಳಗೇರಿ, ಪುಟ್ನಂಜ ಅಂಗಡಿ, ಹಾಲೇಶ ದೊಡ್ಡಮನಿ, ಮಲ್ಲಪ್ಪ ಬಿಷ್ಟಣ್ಣನವರ, ಮಹೇಶ ಎರೇಸೀಮಿ ಮತ್ತಿತರರಿದ್ದರು.