ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಪಟ್ಟಣದ ಕಬಿನಿ ಕಚೇರಿ ಮುಂಭಾಗ ಗುಂಡಾಲ್ ಹಿತರಕ್ಷಣಾ ಸಮಿತಿಯ ರೈತರು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆ 29ನೇ ದಿನಕ್ಕೆ ಕಾಲಿಟ್ಟಿದ್ದು ಸೋಮವಾರವು ಮುಂದುವರೆದಿದೆ.
ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಮಟ್ಟದ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ದಿಟ್ಟತನ ತೋರದೆ ನಿರ್ಲಕ್ಷ್ಯ ತಾಳಿದ್ದಾರೆ, ಈ ಸಂಬಂಧ ಕ್ರಮಕೈಗೊಳ್ಳದ ತನಕ ಪ್ರತಿಭಟನೆ ಹಿಂಪಡೆಯಲ್ಲ ಎಂದು ರೈತರು ಎಚ್ಚರಿಸಿದರು. ಈ ಸಂಬಂಧ ಅಧಿಕಾರಿಗಳು ದಿಟ್ಟ ಕ್ರಮಕೈಗೊಳ್ಳದಿದ್ದರೆ ಪರಿಣಾಮ ನೆಟ್ಟಗಾಗಲ್ಲ ಎಂದು ಎಚ್ಚರಿಸಿದರು.ಪ್ರತಿಭಟನಾಕಾರರನ್ನು ಕಾಡಿದ ಚೇಳು:ಅಹೋರಾತ್ರಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಪ್ರತಿಭಟನಾಕಾರರನ್ನು ಚೇಳೊಂದು ಕಾಡಿದೆ. ರಾತ್ರಿಯ ವೇಳೆ ಕಬಿನಿ ಕಚೇರಿಯ ಮುಂಭಾಗ ಪ್ರತಿಭಟನಾ ನಿರತರು ಮಲಗಿದ್ದ ವೇಳೆ ಚೇಳೊಂದು ಕಚ್ಚಲು ಆಗಮಿಸಿದೆ. ತಕ್ಷಣ ಗಮನಿಸಿದ ಪ್ರತಿಭಟನಾಕಾರರೊಬ್ಬರು ಅಲ್ಲಿಂದ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಚೇಳಿನ ಕಡಿತಕ್ಕೆ ನಾವು ಒಳಗಾಗುತ್ತಿದ್ದೆವು, ಇಲ್ಲಿ ಹಾವುಗಳ ಸಂಖ್ಯೆಯೂ ಹೆಚ್ಚಿದ್ದು ಅಧಿಕಾರಿಗಳು ನಮ್ಮ ಪ್ರತಿಭಟನೆಗೆ ನ್ಯಾಯ ಒದಗಿಸಿದ ಪಕ್ಷದಲ್ಲಿ ನಮಗೆ ಏನಾದರೂ ಅವಘಡ ಸಂಭವಿಸಿದರೆ ಅವರೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಧಶರಥ್ ಹೇಳಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ವೀರಭದ್ರಸ್ವಾಮಿ ಸರಗೂರು, ಹಿತ್ತಲದೊಡ್ಡಿ ನಾಗರಾಜು, ಮಲ್ಲರಾಜು, ಮೋಳೆ ರಾಜಣ್ಣ, ಮೈಸೂರು ವಿಭಾಗದ ಸಮತ ಸೈನಿಕ ದಳ ಪ್ರಧಾನ ಕಾರ್ಯದರ್ಶಿ ಮುರಳೀಧರ ಇನ್ನಿತರಿದ್ದರು.