ಕನ್ನಡಪ್ರಭ ವಾರ್ತೆ ಹಾಸನ
ರೈತರ ಸಾಲಮನ್ನಾ ಮತ್ತು ಜಿಲ್ಲೆಯ ರೈತರ ಸಮಸ್ಯೆಯನ್ನು ಏಳು ದಿನಗಳ ಒಳಗೆ ಬಗೆಹರಿಸದಿದ್ದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮುಂದುವರಿಸುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಐದಾರು ವರ್ಷಗಳ ಹಿಂದೆ ಕೃಷಿ ಚಟುವಟಿಕೆಗಾಗಿ ಸಾಲವನ್ನು ಪಡೆದಿದ್ದರು. ಆದರೆ ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿ ವಿಕೋಪ, ಕೋವಿಡ್‌ನಂತಹ ಮಹಾಮಾರಿ ಕಾಯಿಲೆ ಹರಡಿದ ಪರಿಣಾಮವಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗುವುದರ ಜೊತೆಗೆ ಅಲ್ಪಸ್ವಲ್ಪ ಉಳಿದ ಬೆಳೆಯು ಕೈಗೆ ಸಿಗದಂತಾಯಿತು. ನಂತರ ಬಂದಂತಹ ಸರ್ಕಾರಗಳು ರೈತರ ಸಾಲಗಳನ್ನು ಅಲ್ಪಸ್ವಲ್ಪ ಮನ್ನಾ ಮಾಡಿ, ಸಾಲಮನ್ನಾ ಮಾಡುತ್ತೇವೆಂದು ಅಶ್ವಾಸನೆ ಕೊಟ್ಟು ಜನರನ್ನು ಕಂಗೆಡಿಸಿ, ಇತ್ತೀಚಿನ ವರ್ಷಗಳಿಂದ ಬರದ ಛಾಯೆ ಮುಗಿಲು ಮುಟ್ಟಿದ್ದು, ರೈತರಿಗೆ ಮಳೆಯಿಲ್ಲದ ಕಾರಣ ಬೆಳೆಯನ್ನು ಕಳೆದುಕೊಂಡಿದ್ದಾರೆ.ರೈತರನ್ನು ಇತ್ತೀಚಿನ ವರ್ಷಗಳಿಂದ ಬ್ಯಾಂಕ್‌ನವರು ಒಂದು ಲಕ್ಷಕ್ಕೆ ೨ ಲಕ್ಷ, ೩ಲಕ್ಷಕ್ಕೆ ೬ ಲಕ್ಷ ಬಡ್ಡಿ ಸಮೇತ ಸೇರಿಸಿ ಕೋರ್ಟ್‌ಗೆ ಅಲೆಸುತ್ತಿದ್ದಾರೆ. ಇದರ ಪರಿಣಾಮವಾಗಿ ರೈತರು ಆತ್ಮಹತ್ಯೆಯ ದಾರಿಯನ್ನು ಹಿಡಿಯುವುದು ಅನಿವಾರ್ಯವಾಗಿದೆ ಎಂದರು. ನಾಡಿನ ರೈತರು ಪಂಪ್‌ಸೆಟ್‌ಗಳಿಗೆ ಸರ್ಕಾರದ ನಿಯಮದಂತೆ ೧೦ ಗಂಟೆ ವಿದ್ಯುತ್ ಕೊಡುವುದಾಗಿ ಹೇಳಿ, ಇಂದು ಅನ್ನ ನೀಡುವ ರೈತನಿಗೆ ರಾತ್ರಿ ಎರಡು ಗಂಟೆ, ಬೆಳಗ್ಗೆ ೨ ಗಂಟೆ ವಿದ್ಯುತ್ ಕೊಡುವುದರ ಮೂಲಕ ಆಹಾರ ಬೆಳೆಗಳನ್ನು ಉತ್ಪಾದನೆ ಮಾಡದಂತೆ ತೊಂದರೆ ಕೊಡುತ್ತಿದ್ದಾರೆ. ಇಂತಹ ಸಮಸ್ಯೆಯನ್ನು ವಿದ್ಯುತ ಇಲಾಖೆ ಮಾಡುತ್ತಿದ್ದರೂ ಸಹ ಸಂಬಂಧಪಟ್ಟ ಸರ್ಕಾರವಾಗಲೀ, ಅಧಿಕಾರಿಗಳಾಗಲೀ, ಕೂಡಲೇ ರೈತರ ಪರ ಬಂದು ಹಗಲಿನಲ್ಲಿ ೧೦ ಗಂಟೆ ವಿದ್ಯುತ್ ಕಡ್ಡಾಯವಾಗಿ ಕೊಡುವಂತಾಗಬೇಕು ಎಂದು ಒತ್ತಾಯಿಸಿದರು.
ದಶಕಗಳಿಂದ ಆನೆ ಹಾವಳಿ, ರೈತರ ಮೇಲೆ ನಿರಂತರವಾಗಿ ನಡೆಯುತ್ತಿದ್ದರೂ, ಪ್ರಾಣಹಾನಿಯಾಗುತ್ತಿದ್ದರೂ ಪ್ರಾಣಿ-ಪಕ್ಷಿಗಳ ಬಗ್ಗೆ ಕಟ್ಟುನಿಟ್ಟಿನ ಕಾನೂನು ಇದ್ದರು ರೈತನ ಪ್ರಾಣಕ್ಕೆ ಯಾವುದೇ ಬೆಲೆಯಿಲ್ಲದಂತಾಗಿದೆ. ಆದುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರ ಮೇಲೆ ಒಬ್ಬರು ದೂರಿ ಕೈ ಚೆಲ್ಲಿ ಕುಳಿತಿರುವುದನ್ನು ಬಿಟ್ಟರೆ ಸಮಂಜಸವಾದ ಕ್ರಮ ತೆಗೆದುಕೊಂಡು ರೈತರನ್ನು ಆನೆ ಹಾವಳಿಯಿಂದ ಮುಕ್ತಿಗೊಳಿಸಬೇಕು. ತಾಲೂಕು ಕಚೇರಿಯಲ್ಲಿ ರೆವಿನ್ಯೂ ಅಧಿಕಾರಿಯಾಗಲಿ, ಗ್ರಾಮ ಲೆಕ್ಕಿಗರಾಗಲೀ, ಮಧ್ಯವರ್ತಿಗಳ ಮೂಲಕವೇ ರೈತರ ದಾಖಲೆಗಳನ್ನು ಮಾಡುತ್ತಿದ್ದಾರೆಯೇ ಹೊರತು ನೇರವಾಗಿ ಬಂದ ರೈತರಿಗೆ ತಿಂಗಳುಗಟ್ಟಲೆ ಅಲೆಸುತ್ತಿದ್ದು ಅವರ ದಾಖಲೆಗಳನ್ನು ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ರೈತರು ಕೃಷಿ ಕೆಲಸ ಬಿಟ್ಟು ತಾಲೂಕು ಕಚೇರಿಯ ಬಾಗಿಲಲ್ಲಿ ಕಾಯುವಂತಾಗಿದೆ. ಕೃಷಿ ಬೆಳೆಗಳನ್ನು ಬೆಳೆಯುವ ಸಲುವಾಗಿ ಸರ್ಕಾರಿ ಬ್ಯಾಂಕ್‌ಗಳ ಜೊತೆಗೆ ಖಾಸಗಿ ಫೈನಾನ್ಸ್‌ಗಳ ಮೊರೆ ಹೋಗಿದ್ದು, ಅಧಿಕ ಬಡ್ಡಿ ದರದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಯ ಬಗ್ಗೆ ಸರಿಪಡಿಸಿಕೊಡುವ ಬಗ್ಗೆ. ಸರ್ಕಾರದಿಂದ ರೋಗಿಗಳಿಗೆ ಉಚಿತ ಔಷಧೋಪಚಾರಗಳಿದ್ದರೂ ಅವರಿಗೆ ಸಿಗದೇ ಖಾಸಗಿ ಆಸ್ಪತ್ರೆ ಅವಲಂಬಿಸುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.ಎಲ್ಲಾ ಸಮಸ್ಯೆಗಳನ್ನು ಒಂದು ವಾರದೊಳಗೆ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ತೆಗೆದುಕೊಳ್ಳಬೇಕಾಗಿ ಕೋರುತ್ತೇವೆ. ಇಲ್ಲವಾದಲ್ಲಿ ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ರೈತಪರ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಬಿ. ಧರ್ಮರಾಜು, ಗೌರವಾಧ್ಯಕ್ಷ ನಾಗರಾಜು, ಮಹಿಳಾ ಅಧ್ಯಕ್ಷೆ ಲತಾ, ಎಸ್.ಎಂ. ಲತಾ, ಪ್ರಧಾನ ಕಾರ್ಯದರ್ಶಿ ತೀರ್ಥ, ಉಪಾಧ್ಯಕ್ಷ, ಕೃಷ್ಣಮೂರ್ತಿ, ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ವಿರೇಶ್, ಇತರರು ಉಪಸ್ಥಿತರಿದ್ದರು.