ಮೇವು ಬ್ಯಾಂಕ್‌, ವಿದ್ಯುತ್‌ಗಾಗಿ ರೈತರ ಪ್ರತಿಭಟನೆ

KannadaprabhaNewsNetwork |  
Published : Oct 06, 2026, 01:15 AM IST
9999 | Kannada Prabha

ಸಾರಾಂಶ

ಜಿಲ್ಲೆಯ ಪ್ರತಿ ಹೋಬಳಿಗೊಂದು ಮೇವು ಬ್ಯಾಂಕ್ ಸ್ಥಾಪನೆ, ಸಮರ್ಪಕ ವಿದ್ಯುತ್ ಸರಬರಾಜು ಸೇರಿ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ರಾಜ್ಯ ರೈತ ಸಂಘ, ರೈತ ಶಕ್ತಿ ಹಾಗೂ ತಿಪಟೂರು ತಾಲೂಕು ಹಳ್ಳಿಕಾರ್ ರೈತ ಸಂಘದ ನೇತೃತ್ವದಲ್ಲಿ ರೈತರು ಜಾನುವಾರು, ಎತ್ತಿನ ಗಾಡಿ, ಟ್ರಾಕ್ಟರ್‌ನೊಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ಪ್ರತಿ ಹೋಬಳಿಗೊಂದು ಮೇವು ಬ್ಯಾಂಕ್ ಸ್ಥಾಪನೆ, ಸಮರ್ಪಕ ವಿದ್ಯುತ್ ಸರಬರಾಜು ಸೇರಿ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ರಾಜ್ಯ ರೈತ ಸಂಘ, ರೈತ ಶಕ್ತಿ ಹಾಗೂ ತಿಪಟೂರು ತಾಲೂಕು ಹಳ್ಳಿಕಾರ್ ರೈತ ಸಂಘದ ನೇತೃತ್ವದಲ್ಲಿ ರೈತರು ಜಾನುವಾರು, ಎತ್ತಿನ ಗಾಡಿ, ಟ್ರಾಕ್ಟರ್‌ನೊಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ತಿಂಗಳ 1ರಂದು ತಿಪಟೂರಿನಿಂದ ಹೊರಟು ಜಿಲ್ಲಾಧಿಕಾರಿ ಕಚೇರಿವರೆಗೆ ಎತ್ತಿನ ಬಂಡಿ, ಟ್ರಾಕ್ಟರ್‌ನೊಂದಿಗೆ ಜಾಥಾದಲ್ಲಿ ಆಗಮಿಸಿದ ರೈತರು ಪ್ರತಿಭಟನೆ ಆರಂಭಿಸಿದರು. ರಾಜ್ಯ ರೈತ ಸಂಘ, ರೈತ ಶಕ್ತಿ ಸಂಘಟನೆ ಜಿಲ್ಲಾಧ್ಯಕ್ಷ ಎನ್. ಪದ್ಮನಾಭ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲವಿದೆ, ರೈತರು ಬೀಜ ಬಿತ್ತನೆ ಮಾಡಲಾಗಿಲ್ಲ, ಮಾಡಿದ್ದ ಅಲ್ಪಸ್ವಲ್ಪ ಬಿತ್ತನೆಯೂ ನಾಶವಾಗಿದೆ. ರೈತರ ಬೆನ್ನೆಲುಬಾಗಿರುವ ದನಕರುಗಳಿಗೆ ಮೇವಿಲ್ಲದೆ ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ನೆರವಾಗಬೇಕಾಗಿದ್ದ ಸರ್ಕಾರ ರೈತರಿಗೆ ಸ್ಪಂದಿಸದೆ ಕಡೆಗಣಿಸಿದೆ ಎಂದು ಆರೋಪಿಸಿದರು.

ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರು.. ಪರಿಹಾರ ನೀಡಬೇಕು. ದನಕರುಗಳನ್ನು ಉಳಿಸಿಕೊಳ್ಳಲು ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು. ಮೇವು ವಿತರಣೆ ಮಾಡಬೇಕು. ರೈತರು ತಮ್ಮ ತೋಟದ ಬೆಳೆ ಕಾಪಾಡಿಕೊಳ್ಳಲು ಕೊಳವೆಬಾವಿಗಳ ಮೂಲಕ ನೀರು ಪೂರೈಸಿಕೊಳ್ಳಲು ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಯಾವ ರೈತರೂ ಸಾಲ ಮರುಪಾವತಿ ಮಾಡಲಾಗುವುದಿಲ್ಲ, ಸರ್ಕಾರ ರೈತರ ಎಲ್ಲಾ ಮಾದರಿಯ ಸಾಲವನ್ನು ಮನ್ನಾ ಮಾಡಬೇಕು ಎಂದು ಎನ್. ಪದ್ಮನಾಭ ಒತ್ತಾಯಿಸಿದರು.ತಿಪಟೂರು ತಾಲೂಕು ಅಧ್ಯಕ್ಷ ಎ.ಎಸ್. ಈಶ್ವರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಅರಣ್ಯ ಪ್ರದೇಶದ ಸುತ್ತಲಿನ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಿಲ್ಲಿಸಬೇಕು, ಇಲ್ಲಿನ ರೈತರಿಗೆ ಅರಣ್ಯಾಧಿಕಾರಿಗಳು ನೀಡಿರುವ ನೋಟೀಸ್‌ಗಳನ್ನು ವಾಪಸ್ ಪಡೆಯಬೇಕು. ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರನ್ನು ಬೆಂಬಲಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್ ಮಾತನಾಡಿ, ಸರ್ಕಾರ ಹಾಗೂ ಜಿಲ್ಲಾಡಳಿತ ಕೆರೆಗಳಿಗೆ ಹೇಮಾವತಿ ನೀರು ಹರಿಸಿದ್ದರೆ ಅಂತರ್ಜಲಮಟ್ಟ ಸುಧಾರಣೆಯಾಗಿ ಕೊಳವೆಬಾವಿಗಳು ಜಲಾವೃತವಾಗಿರುತ್ತಿದ್ದವು. ಈಗ ಅಂತರ್ಜಲ ಕುಸಿದು ಬೋರ್‌ವೆಲ್‌ಗಳು ಬತ್ತಿಹೋಗುತ್ತಿವೆ. ಇರುವ ನೀರನ್ನು ತೋಟಕ್ಕೆ ಹರಿಸಲು ವಿದ್ಯುತ್ ಸಮಸ್ಯೆ ಇದೆ. ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ನೇಕ್ ನಂದೀಶ್ ಮಾತನಾಡಿ, ರಾಜ್ಯದಲ್ಲಿ ಭೀಕರ ಬರವಿದ್ದರೂ ಸರ್ಕಾರ ರೈತರ ನೆರವಿಗೆ ಬಂದಿಲ್ಲ, ಜಾನುವಾರುಗಳ ಮೇವಿನ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ ರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಶ್ರೀಧರ್, ಮುಖಂಡರಾದ ಮಡೆನೂರು ವಿನಯ್, ಹಾಲೇನಹಳ್ಳಿ ದಿಲೀಪ್, ಗುರುಮೂರ್ತಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಬಿ.ಎಲ್. ಮಂಜುನಾಥ್, ತ್ಯಾಗಟೂರು ವಸಂತ, ವಿಶ್ವಣ್ಣ, ಷಡಕ್ಷರಿ, ನಂದೀಶಪ್ಪ, ಸಿದ್ಧರಾಮಯ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜ ಸೇವೆ ಪ್ರತಿಯೊಬ್ಬರ ಜವಾಬ್ದಾರಿಯಾಗಲಿ
-ವಿದ್ಯುತ್ ಸಮಸ್ಯೆಗಳ ಕುರಿತು ಜೆಸ್ಕಾಂ ಎಂಡಿ ಜೊತೆ ಶಾಸಕರ ಚರ್ಚೆ