ಕನ್ನಡಪ್ರಭ ವಾರ್ತೆ ಚಾಮರಾಜನಗರರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಬಜೆಟ್‌ನಲ್ಲಿ ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು, ಜಿಲ್ಲಾಡಳಿತ ಭವನನದ ಆವರಣದಲ್ಲಿರುವ ರಸ್ತೆಯಲ್ಲೇ ಕುಳಿತು ಕೆಲಕಾಲ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತ ಭವನದ ದ್ವಾರಕ್ಕೆ ತೆರಳಲು ರೈತರು ಯತ್ನಿಸಿದರು. ಪೊಲೀಸರು ರೈತರನ್ನು ತಡೆದು ಬಂಧಿಸಲು ಯತ್ನಿಸಿದಾಗ ರೈತರು ಮತ್ತೇ ಪ್ರತಿಭಟನಾ ಸ್ಥಳಕ್ಕೆ ವಾಪಸ್ ತೆರಳಿ ಬಿಸಿಲಿನಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು.ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಸವರಾಜು ಜಿಲ್ಲಾಧಿಕಾರಿ ಸಭೆ ನಡೆಸುತ್ತಿದ್ದು, ಸಭೆ ಮದ್ಯದಲ್ಲೇ ಎದ್ದು ಬರುವುದಕ್ಕಾಗುವುದಿಲ್ಲ ಸಭೆ ನಡೆಯುವ ಸ್ಥಳಕ್ಕೆ ರೈತರು ನನ್ನೊಂದಿಗೆ ಆಗಮಿಸಿ ಅವರಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿ ಡೀಸಿ ಕಚೇರಿಗೆ ಆಹ್ವಾನಿಸಿದರು. ಪ್ರತಿಭಟನಾ ನಿರತ ರೈತರು ಮಾತನಾಡಿ, ಮೊದಲು ಮನವಿ ಸಲ್ಲಿಸಲು ಬಂದಿರುವ ರೈತರನ್ನು ಬಂಧಿಸಲು ಯತ್ನಿಸಿದ ಪೊಲೀಸರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಮಾತಿಗೆ ಒಪ್ಪಿ ಡೀಸಿ ಕಚೇರಿಗೆ ತೆರಳಿ ಅವರ ಮೂಲಕ ಮುಖ್ಯಮಂತ್ರಿಗಳು ಹಾಗೂ ಸಕ್ಕರೆ ಸಚಿವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಬರಗಾಲದಿಂದ ಮತ್ತು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಸಾಲವನ್ನು ರಾಜ್ಯ ಸರ್ಕಾರ ತೆಲಂಗಾಣ ಮತ್ತು ಪಂಜಾಬ್ ಮಾದರಿಯಲ್ಲಿ ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ 6040 ಕೃಷಿಪತ್ತಿನ ಸಹಕಾರ ಸಂಘಗಳ ಸರಿ ಸುಮಾರು 25000 ಕೋಟಿ ರು.ಗಳ ಬೆಳೆ ಸಾಲ ಮನ್ನಾ ಮಾಡಬೇಕು. ಸರ್ಕಾರದ ಬಜೆಟ್‌ನಲ್ಲಿ ಕಳೆದ ಸಾಲಿನ ಕಬ್ಬಿನ ಬಾಕಿ ಪ್ರತಿ ಟನ್‌ಗೆ 150ರಂತೆ ಸುಮಾರು 950ಕೋಟಿ ಬರಬೇಕಾಗಿದೆ ಕಾರ್ಖಾನೆಗಳಿಂದ ಕೊಡಿಸಲಾಗದಿದ್ದರೆ ಸರ್ಕಾರವೇ ಸ್ವಯಂ ಘೋಷಿತವಾಗಿ ಕೊಡಬೇಕು ಎಂದು ಆಗ್ರಹಿಸಿದರು. ಸದರಿ ವರ್ಷದ ಹಂಗಾಮು ಕಟಾವು ಮುಗಿಯುತ್ತಿರುವುದರಿಂದ ಎಫ್‌ಆರ್‌ಪಿಯನ್ನು ಸೇರಿ ರಾಜ್ಯ ಸರ್ಕಾರ ಪ್ರತಿ ಟನ್ನೊಂದಕ್ಕೆ 4000 ದಂತೆ ದರ ನಿಗದಿ ಮಾಡಬೇಕು ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಇಳುವರಿಯಲ್ಲಿ ಮೋಸ ತಿಳಿಯಲು ರಚಿಸಿರುವ ತಜ್ಞರ ಸಮಿತಿಗೆ ಸ್ಥಳೀಯ ರೈತರು ಹಾಗೂ ಸದರಿ ಸಂಘದ ಮುಖಂಡರನ್ನು ಸೇರಿಸಿಕೊಳ್ಳಬೇಕು, ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದಿಂದ ತೂಕದ ಯಂತ್ರವನ್ನು ಅಳವಡಿಸಬೇಕು ಎಂದರು.ಬಣ್ಣಾರಿ ಸಕ್ಕರೆ ಕಾರ್ಖಾನೆಯು ಮುಖ್ಯಮಂತ್ರಿಗಳ ತವರು ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದರು ಇಲ್ಲಿ ಮನ ಬಂದಂತೆ ಕಟಾವು ಸಾಗಾಣಿಕೆ ನಿಗದಿ ಮಾಡುತ್ತಿದೆ ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಗಮನಹರಿಸಿ ಉತ್ತರ-ದಕ್ಷಿಣ ಎಂಬ ಭೇದಭಾವವಿಲ್ಲದೆ ರೈತನ ಹೊಲದಲ್ಲಿನ ದರ ಎಂದು ನಿರ್ದೇಶನ ನೀಡಬೇಕು ಹಾಗೂ ಹೆಚ್ಚುವರಿ ವಸೂಲಿ ಮಾಡಿರುವ ಕಟಾವು ಸಾಗಾಣಿಕೆ ಕೂಲಿಯನ್ನು ರೈತರ ಖಾತೆಗೆ ಮರುಜಮೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕಬ್ಬು ಖರೀದಿ ಮತ್ತು ನಿಯಂತ್ರಣ ಮಂಡಳಿಯನ್ನು ಪುನರ್ ರಚಿಸಿ ತಕ್ಷಣ ಸಭೆ ಕರೆದು ರಾಜ್ಯರೈತ ಸಂಘಟನೆಗಳ ಒಕ್ಕೂಟ- ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದವರನ್ನು ವಿಶೇಷ ಆಹ್ವಾನಿತರಾಗಿ ಸೇರಿಸಿಕೊಳ್ಳಬೇಕು ಎಂದು ಆಗ್ರಸಿದರು.ರಾಜ್ಯದಲ್ಲಿ ನೂತನ ಕೃಷಿ ಪಂಪ್ ಸೆಟ್ ಮಾಡುವವರಿಗೆ ಹೊಸ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗೂ ಅಕ್ರಮ ಸಕ್ರಮ ಎಂಬ ನಿಯಮವನ್ನು ಕೈಬಿಟ್ಟಿದ್ದು ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ತಕ್ಷಣ ರಾಜ್ಯ ಸರ್ಕಾರ ಯಥಾ ಸ್ಥಿತಿಯನ್ನು ಮುಂದುವರಿಸಲು ಒತ್ತಾಯಿಸಿದರು.
ಕಾವೇರಿ ಕಬಿನಿ ನೀರನ್ನು ತಮಿಳುನಾಡಿಗೆ ಹರಿಸಿ ಅಚ್ಚುಕಟ್ಟು ಭಾಗದಲ್ಲಿ ಬರಗಾಲ ಸೃಷ್ಟಿಯಾಗಿದೆ ಆದ್ದರಿಂದ ಪ್ರತಿ ಎಕರೆಗೆ 25000 ನಷ್ಟ ಪರಿಹಾರಕೊಡಬೇಕು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ವಸ್ತುಗಳಿಗೆ ಅಡಮಾನ ಸಾಲದಲ್ಲಿ ಸರಳೀಕರಣ ಮಾಡಿ ತಕ್ಷಣ ರೈತನಿಗೆ ಸಾಲ ಸಿಗುವಂತೆ ಮಾಡಬೇಕು ಎಂದರು.ಕೃಷಿ ಉತ್ಪನ್ನಗಳು ಮತ್ತು ಕೃಷಿ ಬಳಕೆಯ ವಸ್ತುಗಳಿಗೆ ಜಿಎಸ್ಟಿಯನ್ನು ಕಡಿಮೆ ಮಾಡಬೇಕು, ರೈತರಿಗೆ ಉಚಿತ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನುರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರು ಉಗ್ರ ಹೋರಾಟ ನಡೆಸಲಾಗುವುದು ಹಾಗೂ ಡೀಸಿ ತಕ್ಷಣ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಬಣ್ಣಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜೊತೆ ರೈತ ಮುಖಂಡರ ಸಭೆ ನಡೆಸಲು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹಾಲಿನ ನಾಗರಾಜ್, ಮುದ್ದಾಹಳ್ಳಿ ಚಿಕ್ಕಸ್ವಾಮಿ, ಹಾಡ್ಯರವಿ, ಮಲಿಯೂರು ಹರ್ಷ, ಬಸವರಾಜಪ್ಪ, ಕಾಳಪ್ಪ ಗುರುಶಂಕರು ಕೋಣನೂರು, ವಿಶ್ವನಾಥ್, ಪ್ರವೀಣ್‌ಊಡಿಗಾಲ, ಗ್ರಾಮಘಟಕದ ಮಂಜುನಾಥ್, ಮಹದೇವಸ್ವಾಮಿ, ಮಲ್ಲೇಶ, ಸುಧಾಕರ್, ನಂದೀಶ್, ಅಡುಗೆ ಚನ್ನಬಸಪ್ಪ, ದೇವನೂರು ನಾಗೇಂದ್ರ, ಕೆಂಪನ ವೆಂಕಟಸ್ವಾಮಿ, ಶ್ರೀಕಂಠ ಜನ್ನೂರ್, ಶಾಂತರಾಜ್ ಅರಳಿಕಟ್ಟೆ, ಪ್ರಭಣ್ಣ, ಮಹಾದೇವಸ್ವಾಮಿ, ಇತರರು ಭಾಗವಹಿಸಿದ್ದರು.