ನೀರು ಬಿಡಿ<bha>;</bha> ಇಲ್ಲ ರೈತರ ಸಾವು ನೋಡಿ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಶಹಾಪುರದಲ್ಲಿ ರೈತರ ಜಮೀನಿಗೆ ನೀರು ಬಿಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಮೆಣಸಿನಕಾಯಿ ಬೆಳೆಗೆ ಫೆಬ್ರವರಿ ಅಂತ್ಯದವರೆಗ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಮೀಪದ ಭೀಮರಾಯನ ಗುಡಿಯ ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್) ಆಡಳಿತ ಕಚೇರಿ ಹಾಗೂ ನಗರದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಧರಣಿ ಬುಧವಾರ 12ನೇ ದಿನಕ್ಕೆ ಕಾಲಿಟ್ಟಿದೆ.

ಸರಕಾರ ರೈತರ ಹಿತ ಕಾಯುವಲ್ಲಿ ಬದ್ಧತೆ ಮರೆತಿದೆ. ಆರಿಸಿ ಬಂದ ಜನಪ್ರತಿನಿಧಿಗಳು ಸರ್ಕಾರ ರಚನೆ ಸಮಯದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರೈತರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿ ನಂತರ ರೈತರನ್ನು ಕಡೆಗಣಿಸುವುದು ಯಾವ ನ್ಯಾಯ. ರೈತರು ಸಾಲ ಮಾಡಿ ಬೆಳೆಗೆ ಖರ್ಚು ಮಾಡಿ ಮೆಣಸಿನ ಬೆಳೆ ಕೈ ಸೇರುವ ಹೊತ್ತಿಗೆ ನೀರಿಲ್ಲದೆ ಬೆಳೆಗಳು ಹಾಳಾಗುತ್ತಿವೆ. ರೈತರ ಜಮೀನಿಗೆ ನೀರು ಬಿಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ನಮಗೆ ನೀರು ಬಿಡಿ ಇಲ್ಲ, ರೈತರ ಸಾವು ನೋಡಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ಮಾತನಾಡಿ, ನಮ್ಮ ಸಂಘದ ರಾಜ್ಯಾಧ್ಯಕ್ಷರು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತುರ್ತು ಕಾರ್ಯಕ್ರಮ ಇರುವುದರಿಂದ ನಾನು ಹೋಗಿ ಬರುವ ನಂತರ ನಿಮ್ಮ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಮಂಗಳವಾರ ನಡೆದ ಕೆಬಿಜೆಎನ್ಎಲ್ ಬೋರ್ಡ್ ಮೀಟಿಂಗ್‌ನಲ್ಲಿ ನೀರಿಗಾಗಿ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆ ಬಗ್ಗೆ ಚರ್ಚೆಗೆ ಬಾರದಿರುವುದು ವಿಷಾದನೀಯ. ಏನೇ ಆದರೂ ನಮ್ಮ ಹೋರಾಟ ನೀರು ಬರುವ ತನಕ ನಿಲ್ಲಿಸುವುದಿಲ್ಲ ಎನ್ನುವ ದೃಢಸಂಕಲ್ಪದೊಂದಿಗೆ ಹೋರಾಟಕ್ಕೆ ಇಳಿದಿದ್ದೇವೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟೀಲ್, ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ್, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ, ಶ್ರೀಮಂತಗೌಡ, ಬನಶಂಕರ ಗೌಡ, ಸಿದ್ದಣ್ಣ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.

Share this article