ಬೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ

KannadaprabhaNewsNetwork |  
Published : Feb 15, 2025, 12:30 AM IST
ತೋಟದ ಮನೆಗಳಿಗೆ ವಿದ್ಯುತ್‌ಗಾಗಿ ಬೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ | Kannada Prabha

ಸಾರಾಂಶ

ತೋಟದ ಮನೆಗಳಲ್ಲಿ ವಾಸಿಸುತ್ತಿರುವ ನಮಗೆ ಕಳೆದ ಹದಿನೈದು ದಿನಗಳಿಂದ ವಿದ್ಯುತ್ ಇಲ್ಲದೆ ಜನ ಜಾನುವಾರುಗಳ ನೀರಿಗಾಗಿ ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ತೋಟದ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಇಲ್ಲದೆ ಕತ್ತಲೆಯಲ್ಲ್ಲಿ ಕಾಲ ಕಳೆಯುವಂತಾಗಿದ್ದು ಬೆಸ್ಕಾಂ ಇಲಾಖೆಯ ನಿರ್ಲಕ್ಷಕ್ಕೆ ರೈತರು ಪರಿತಪಿಸುವಂತಾಗಿದೆ ಎಂದು ಇಲಾಖೆಯ ವಿರುದ್ಧ ತಾಲೂಕಿನ ಕೆರೆಗೋಡಿ, ರಂಗಾಪುರ, ತಡಸೂರು, ಮಡೆನೂರು, ಗೌಡನಕಟ್ಟೆ, ಅನಗೊಂಡನಹಳ್ಳಿ, ಆಲದಹಳ್ಳಿ, ಹೊಗನವಘಟ್ಟ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ನಗರದ ಬಿ.ಎಚ್. ರಸ್ತೆಯಲ್ಲಿರುವ ಬೆಸ್ಕಾಂ ಉಪವಿಭಾಗ ಕಛೇರಿಯ ಮುಖ್ಯ ದ್ವಾರದ ಮುಂದೆ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ರೈತರು, ತೋಟದ ಮನೆಗಳಲ್ಲಿ ವಾಸಿಸುತ್ತಿರುವ ನಮಗೆ ಕಳೆದ ಹದಿನೈದು ದಿನಗಳಿಂದ ವಿದ್ಯುತ್ ಇಲ್ಲದೆ ಜನ ಜಾನುವಾರುಗಳ ನೀರಿಗಾಗಿ ಪರದಾಡುವಂತಾಗಿದೆ. ಬೆಳೆದ ಬೆಳೆಗಳು ನೀರಿಲ್ಲದ ಒಣಗಿ ಹೋಗುತ್ತಿವೆ. ಸಂಜೆ 6ರಿಂದ ಬೆಳಗ್ಗೆ 6ಗಂಟೆಯವರೆಗೂ ವಿದ್ಯುತ್ ಕೊಡುವುದಿಲ್ಲ. ಇದರಿಂದ ಪರೀಕ್ಷೆಗಳು ಸಮೀಪಿಸುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ತೊಂದರೆಯಾಗುತ್ತಿದೆಯಲ್ಲದೆ, ವಯಸ್ಸಾದವರು ಓಡಾಡಲು ಕಷ್ಟ ಹಾಗೂ ಕಾಡು ಪ್ರಾಣಿಗಳ ಹಾವಳಿಗೆ ಹೆದರುವಂತಾಗಿದೆ.

ವಿದ್ಯುತ್ ಅಭಾವದಿಂದ ತೆಂಗು, ಅಡಿಕೆ, ಬಾಳೆ ಗಿಡಗಳು ಒಣಗಿ ಹೋಗುತ್ತಿದ್ದು ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ತೋಟದ ಮನೆಗಳಲ್ಲಿ ರೈತರು ಪಶುಪಾಲನೆಯನ್ನೇ ಅವಲಂಬಿಸಿದ್ದು ಕುಡಿಯುವ ನೀರು ಹಾಗೂ ಹಸಿ ಮೇವಿಗೆ ತೀವ್ರ ತೊಂದರೆಯಾಗಿದೆ. ತ್ರಿಫೇಸ್ ವಿದ್ಯುತ್ ಕೊಡುತ್ತೇವೆನ್ನುವ ಅಧಿಕಾರಿಗಳು ವೋಲ್ಟೇಜ್ ಸಮಸ್ಯೆಯಿಂದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಾಕಾಗುತ್ತಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ಕೂಡಲೆ ಬೆಸ್ಕಾಂ ಇಲಾಖೆ ಅಗತ್ಯ ಕ್ರಮಕೈಗೊಂಡು ತೋಟದ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯಕ್ಕೆ ವಿದ್ಯುತ್ ಕಲ್ಪಿಸಬೇಕು. ಇಲ್ಲವಾದಲ್ಲಿ ಬೆಸ್ಕಾಂ ಕಚೇರಿ ಮುಂದೆ ನಿರಂತರ ಧರಣಿ ಹಮ್ಮಿಕೊಳ್ಳುವುದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.ತೋಟದ ಮನೆ ಹಿತರಕ್ಷಣಾ ಸಮಿತಿಯ ಮಡೆನೂರು ವಿನಯ್ ಮಾತನಾಡಿ, ತೋಟದ ಮನೆಯಲ್ಲಿರುವ ರೈತರಿಗೆ ವಿದ್ಯುತ್ ಇಲ್ಲದೆ ಭಯದ ವಾತಾವರಣ ಉಂಟಾಗಿದೆ. ಅಧಿಕಾರಿಗಳ ತಪ್ಪಿನಿಂದಾಗಿ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ತ್ರಿಫೇಸ್ ವಿದ್ಯುತ್‌ನ್ನು ಸಮಪರ್ಕವಾಗಿ ಕೊಟ್ಟರೆ ರೈತರಿಗೆ ಅನುಕೂಲವಾಗಲಿದೆ. ರಾತ್ರಿ ವೇಳೆ ಚಿರತೆ ಕಾಟ ಹೆಚ್ಚಾಗಿದ್ದು ಸಾಕು ನಾಯಿಗಳನ್ನು ತಿನ್ನುತ್ತಿವೆ. ಪಶುಪಾಲನೆಯಿಂದ ಜೀವನ ನಡೆಸುತ್ತಿರುವ ರೈತರ ಜಾನುವಾರುಗಳಿಗೆ ತೊಂದರೆಯಾದರೆ ಯಾರು ಹೊಣೆ.

ಇತ್ತೀಚಿನ ದಿನಗಳಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು ರೈತರ ಮನೆಗಳಲ್ಲಿ ಯುಪಿಎಸ್‌ಗಳಿಲ್ಲ. ಇದಕ್ಕೆಲ್ಲಾ ವಿದ್ಯುತ್ ಸಮಸ್ಯೆಯೇ ಕಾರಣವಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತರ ಸ್ಥಿತಿ ಮಾತ್ರ ಬದಲಾಗಿಲ್ಲ. ಅಕ್ಕಪಕ್ಕದ ತಾಲೂಕುಗಳಿಲ್ಲದ ಸಮಸ್ಯೆ ನಮ್ಮ ತಾಲೂಕಿನಲ್ಲಿದ್ದು ಆಡಳಿತ ವ್ಯವಸ್ಥೆ ಸರಿಯಿಲ್ಲ. ಬೆಸ್ಕಾಂ ಅಧಿಕಾರಿಗಳು ಯಾರನ್ನೋ ಮೆಚ್ಚಿಸಲು ರೈತರನ್ನ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಇಂದು ಸಾಂಕೇತಿಕವಾಗಿ ಹೋರಾಟ ಮಾಡುತ್ತಿದ್ದೇವೆ ಇದಕ್ಕೂ ಎಚ್ಚೆತ್ತುಕೊಳ್ಳದಿದ್ದರೆ ನೂರಾರು ಟ್ರ್ಯಾಕ್ಟರ್, ಎತ್ತಿನಗಾಡಿಗಳೊಂದಿಗೆ ಬಂದು ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಂತರ ಪ್ರತಿಭಟನಾ ನಿರತ ರೈತರು ಬೆಸ್ಕಾಂ ಉಪವಿಭಾಗ ಕಚೇರಿ ಬಾಗಿಲಿಗೆ ಹೋಗಿ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ತಿಪಟೂರು ವಿಭಾಗದ ಕಾರ್ಯನಿರ್ವಹಕ ಇಂಜಿನಿಯರ್ ಜಿ.ಸೋಮಶೇಖರ್‌ಗೌಡ ಮಾತನಾಡಿ, ತಾಲೂಕಿನ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದು ನಮ್ಮ ಜವಾಬ್ದಾರಿ. ಕೆಲ ಸಂದರ್ಭದಲ್ಲಿ ವಿದ್ಯುತ್ ಅಡಚಣೆಯಾಗಬಹುದು. ನಮಗೆ ಒಂದು ವಾರ ಸಮಯಕೊಡಿ ವಿದ್ಯುತ್‌ ಲೈನ್‌ಗಳಲ್ಲಿ ತೊಂದರೆಯಿದ್ದರೆ ಸರಿಪಡಿಸಿ ತೋಟದ ಮನೆಗಳಿಗೆ ಹಾಗೂ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ನೀಡುತ್ತೇವೆ ಎಂದರು.ಬೆಸ್ಕಾಂ ಎಇಇ ಮನೋಹರ್ ಮಾತನಾಡಿ ಪ್ರತಿಯೊಂದು ಫೀಡರ್‌ಗೂ ಹತ್ತು ಆಂಪ್‌ವರೆಗೂ ವಿದ್ಯುತ್ ನೀಡಲು ರಿಲೇಗಳು ಸೆಟ್ ಆಗಿರುತ್ತದೆ. ಹತ್ತು ಆಂಪ್‌ಗೆ ಒಂದೊಂದು ಫೀಡರ್‌ಗೂ ಸುಮಾರು ನೂರೈವತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬಹುದು. ಮಳೆಗಾಲದಲ್ಲಿ ಕೇವಲ ನಾಲ್ಕು ಆಂಪ್‌ಗಳಲ್ಲಿ ವಿದ್ಯುತ್ ಫೀಡ್ ಆಗುತ್ತಿರುತ್ತದೆ. ರೈತರು ಸಿಂಗಲ್ ಫೇಸ್‌ಗೆ ಕಂಡೆನ್ಸರ್ ಆಟೋಸ್ಟಾರ್ಟರ್‌ಗಳನ್ನು ಅಳವಡಿಸಿಕೊಂಡು ಮೋಟಾರ್‌ಗಳನ್ನು ಚಾಲನೆ ಮಾಡುತ್ತಿರುವುದರಿಂದ ಓವರ್‌ಲೋಡ್ ಆಗಿಗಿ ಟ್ರಿಪ್ ಆಗಿ ಮನೆಗಳ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ. ಇದನ್ನು ನೀವೇ ಸರಿಪಡಿಸಿಕೊಂಡರೆ ವಿದ್ಯುತ್ ಅಭಾವವಾಗುವುದಿಲ್ಲ ಎಂದರು.ಆದರೂ ಮಾತಿಗೆ ಬಗ್ಗದ ರೈತರು ನೀವು ಸಬೂಬು ಹೇಳುತ್ತಿದ್ದೀರಿ ರೈತರ ಸಮಸ್ಯೆಯನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ವಿದ್ಯುತ್ ಇಲ್ಲದೆ ರಾತ್ರಿವೇಳೆ ತೋಟದ ಮನೆಯಲ್ಲಿ ವಾಸ ಮಾಡುವುದಕ್ಕೇ ಹೇಗೆ ಸಾಧ್ಯ ನೀವು ಬಂದು ನಮ್ಮೊಂದಿಗಿದ್ದರೆ ಸಮಸ್ಯೆ ಅರ್ಥವಾಗುತ್ತದೆ. ನೀವು ಹೇಳಿದಂತೆ ನಮಗೆ ಪಂಪ್‌ಸೆಟ್‌ಗಳಿಗೆ ತ್ರಿಫೆಸ್ ವಿದ್ಯುತ್ ಹಾಗೂ ತೋಟದ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಕಲ್ಪಿಸಿಕೊಡಬೇಕು ಒಂದು ವೇಳೆ ಮಾತಿಗೆ ತಪ್ಪಿದರೆ ಬೆಸ್ಕಾಂ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.ಪ್ರತಿಭಟನೆಯಲ್ಲಿ ರೈತರುಗಳಾದ ಚಿಕ್ಕಸ್ವಾಮಿಗೌಡ, ಉದಯ್, ತಿಲಕ್, ಚೇತನ್, ಜಗದೀಶ್, ಗೌಡನಕಟ್ಟೆ ಶಿವಕುಮಾರ್, ಸ್ವಾಮಿ, ಶಂಕರಮೂರ್ತಿ, ರಾಜೇಶ್, ಲೋಹಿತಾಶ್ವ, ಮೂರ್ತಿ, ರೈತ ಸಂಘದ ಜಯಚಂದ್ರಶರ್ಮ ಸೇರಿದಂತೆ ಹೊಸಹಳ್ಳಿ, ಸಾಸಲನಹಳ್ಳಿ, ಮಾದಿಹಳ್ಳಿ, ಕರೀಕೆರೆ, ಮತ್ತಿಹಳ್ಳಿ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

ಫೋಟೋ 14-ಟಿಪಿಟಿ4ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ರೈತರ ಪ್ರತಿಭಟನೆಯಲ್ಲಿ ಬೆಸ್ಕಾಂ ಎಇಇ ಮನೋಹರ್ ರೈತರೊಂದಿಗೆ ಮಾತನಾಡುತ್ತಿರುವುದು.ಫೋಟೋ 14-ಟಿಪಿಟಿ5ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಬೆಸ್ಕಾಂ ಕಾರ್ಯನಿರ್ವಾಹಕ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದ ವಿವಿಧ ಗ್ರಾಮಗಳ ರೈತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!