-ರೈತರೊಂದಿಗೆ ಅನುಚಿತವಾಗಿ ವರ್ತಿಸಿದ ಉಪ ತಹಸೀಲ್ದಾರ್ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ತಾಲೂಕು ಕಚೇರಿಯ ಉಪ ತಹಸೀಲ್ದಾರ್ ರೈತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ತಾಲೂಕು ಕಚೇರಿ ಮುಂದೆ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ದೇವರಾಜು ಮಾತನಾಡಿ, ಉಪ ತಹಸೀಲ್ದಾರ್ ನಿರ್ಮಲಾ ಅವರು ರೆಕಾರ್ಡ್ ರೂಂ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಕೊಠಡಿಯಲ್ಲಿ ಕೆಲ ದಾಖಲೆಗಳನ್ನು ಕೋರಿ ಹರೀಶ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಉಪ ತಹಸೀಲ್ದಾರರು ಆ ಕುರಿತು ಯಾವುದೇ ಮಾಹಿತಿ ನೀಡದೆ ನಿತ್ಯ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ಅರ್ಜಿ ಕಳೆದು ಹೋಗಿದೆ ಎನ್ನುವ ನೆಪದಲ್ಲಿ ಐದಾರು ಅರ್ಜಿಗಳನ್ನು ಸಲ್ಲಿಸಿದ್ದರೂ ಕೆಲಸ ಮಾಡಿಕೊಡದೆ ನಿತ್ಯ ಅಲೆದಾಡಿಸುತ್ತಿದ್ದರು. ಹರೀಶ್ ಕೆಲಸ ಮಾಡಿಕೊಡಲು ಒತ್ತಾಯ ಮಾಡಿದಾಗ ನಾನು ಮಾಡಿಕೊಡುವುದಿಲ್ಲ. ಇಲ್ಲಿಂದ ಆಚೆ ನಡೆ ಎಂದು ಅನುಚಿತವಾಗಿ ವರ್ತಿಸಿದ್ದು, ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ಬಿ.ಎಂ.ಪ್ರಕಾಶ್, ಚೀಲೂರು ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಬರುವ ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರಿ ಅಧಿಕಾರಿಗಳು ಸ್ಪಂದಿಸಬೇಕೇ ಹೊರತು ದರ್ಪ, ದೌರ್ಜನ್ಯ ತೋರುವ ಅಧಿಕಾರಿಗಳನ್ನು ಜನರು ಸಹಿಸುವುದಿಲ್ಲ. ಕೂಡಲೇ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಜತೆಗೆ ರೈತರೊಂದಿಗೆ ಅನುಚಿತವಾಗಿ ವರ್ತಿಸಿರುವ ಅಧಿಕಾರಿ ರೈತರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಪೊಲೀಸರು, ಮೇಲಧಿಕಾರಿಗಳು ಸ್ಥಳಕ್ಕಾಗಮಿಸಿ ರೈತ ಮುಖಂಡರನ್ನು ಸಮಾಧಾನಪಡಿಸಿದರು. ಉಪ ತಹಸೀಲ್ದಾರ್ ನಿರ್ಮಲಾ ಅವರು, ಅನುಚಿತ ವರ್ತನೆಗೆ ರೈತನ ಕ್ಷಮೆ ಕೋರಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ರೈತ ಮುಖಂಡರಾದ ಗಜೇಂದ್ರಸಿಂಗ್, ಜಗದೀಶ್ ರಾವ್, ಪಾಳ್ಯಶಂಕರ್, ಹರೀಶ್ ಇತರರು ಹಾಜರಿದ್ದರು.