ಕನ್ನಡಪ್ರಭ ವಾರ್ತೆ ಅರಕಲಗೂಡು
ಹೊಗೆಸೊಪ್ಪಿನ ಬೆಲೆ ಏರಿಕೆ ಮಾಡಿ ಬೆಳೆಗಾರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕಿನ ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು.ರಾಮನಾಥಪುರ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಮಾರುಕಟ್ಟೆ ಆವರಣದಲ್ಲಿ ಧರಣಿ ಆರಂಭಿಸಿದರು.
ರೈತ ಸಂಘದಿಂದ ಪ್ರತಿಭಟನೆ ನಡೆಸುವ ವಿಷಯ ತಿಳಿದ ಕೂಡಲೇ ತಂಬಾಕು ಮಂಡಳಿಯವರು ರಹಸ್ಯ ಸಭೆ ನಡೆಸಿ ಪ್ರತಿಭಟನೆ ಬೆಂಬಲ ನೀಡದಂತೆ ಹಳ್ಳಿಗಳಿಗೆ ಭೇಟಿ ನೀಡಿ ಕೆಲ ರೈತರಿಗೆ ಕುಮ್ಮಕ್ಕು ನೀಡಿ ಹೋರಾಟ ಹತ್ತಿಕ್ಕುವ ಸಂಚು ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಶೋಷಣೆ ಕೇಳುವವರೇ ಇಲ್ಲವಾಗಿದ್ದಾರೆ. ತಂಬಾಕು ಹರಾಜು ಶುರುವಾಗಿ ಒಂದು ತಿಂಗಳು ಕಳೆದರೂ ಬೆಲೆ ಏರಿಕೆ ಮಾಡಿಲ್ಲ. ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಹೊಗೆಸೊಪ್ಪು 400 ರು. ಗರಿಷ್ಠ ದರ ನೀಡಲಾಗಿದೆ. ಇಲ್ಲಿ ಆರಂಭದಿಂದಲೂ 290 ರು. ಗಡಿ ದಾಟಿಲ್ಲ. ಅಲ್ಲಿನ ರೈತರಷ್ಟೆ ಹಣ ಖರ್ಚು ಮಾಡಿ ತಂಬಾಕು ಉತ್ಪಾದಿಸಲಾಗಿದೆ. ಆದರೆ ವರ್ತಕರು ರೈತರ ನಡುವೆ ತಾರತಮ್ಯ ಮಾಡುತ್ತಿದ್ದಾರೆ. ರೈತರ ಹಿತ ಕಾಯಬೇಕಿದ್ದ ತಂಬಾಕು ಮಂಡಳಿ ವರ್ತಕರ ಬೆಂಬಲಕ್ಕೆ ನಿಂತು ಇಲ್ಲಿನ ಹೊಗೆಸೊಪ್ಪು ಬೆಳೆಗಾರರಿಗೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಒಂದು ಕಡೆ ಬೆಲೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಬೇಲ್ ಕಟ್ಟುವ ಕಾರ್ಮಿಕರಿಂದ ಸುಲಿಗೆ ನಡೆಯುತ್ತಿದೆ. ರೈತರು ಲಂಚ ನೀಡದಿದ್ದರೆ ಬೇಲ್‌ಗಳು ಬಿಡ್ ಆಗದಂತ ಪರಿಸ್ಥಿತಿ ನಿರ್ಮಾವಾಗಿದೆ. ಮಾರುಕಟ್ಟೆಯಲ್ಲಿ ಕಂಪನಿಗಳಿಂದ ಆಗುತ್ತಿರುವ ವಂಚನೆ ತಡೆಗಟ್ಟಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕೆಳ ಹಂತದ ತಂಬಾಕಿಗೆ ಉತ್ತಮ ದರ ನೀಡಿ ಖರೀದಿಸಬೇಕು. ಹೊಗೆಸೊಪ್ಪು ಮಾರಾಟಕ್ಕಿ ವಿಧಿಸಿರುವ ಮಾರಾಟ ತೆರಿಗೆ ಮತ್ತು ಜಿಎಸ್‌ಟಿಯಿಂದ ವಿನಾಯಿತಿ ಕೊಡಬೇಕು. ಬೆಳೆಗಾರರ ಕ್ಷೇಮಾಭಿವೃದ್ಧಿ ನಿಧಿಯಿಂದ ಮೃತಪಟ್ಟ ಬೆಳೆಗಾರರಿಗೆ 5 ಲಕ್ಷ ರು. ಪರಿಹಾರ ಒದಗಿಸಬೇಕು. ಹೊಗೆಸೊಪ್ಪು ಬೆಳೆಯನ್ನು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಗೆ ಒಳಪಡಿಸಿ, ಅನಧಿಕೃತ ಬೆಳೆಗಾರರನ್ನು ಅಧಿಕೃತ ಬೆಳೆಗಾರರೆಂದು ಪರಿಗಣಿಸಿ ಎಲ್ಲರಿಗೂ ಏಕಕಾಲದಲ್ಲೇ ತಂಬಾಕು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.ಕಳೆದ ವರ್ಷ ಎರಡನೇ ಬೆಳೆಯಾಗಿ ತಂಬಾಕು ಗಿಡಗಳನ್ನು ಬೆಳೆಯದಂತೆ ನಿಷೇಧ ಹೇರಲಾಗಿತ್ತು. ಈ ಬಾರಿ ಎರಡನೇ ಬಾರಿಗೆ ತಂಬಾಕು ಬೆಳೆಯಲು ಅವಕಾಶ ನೀಡಲಾಗಿದೆ. ತಂಬಾಕು ಉತ್ಪಾದನೆ ಹೆಚ್ಚಿಸಿ ಬೆಲೆ ಇಳಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡಿಸಿದರು.
ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ತಂಬಾಕು ಮಾರುಕಟ್ಟೆ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣ್ ರಾವ್ ಮಾತನಾಡಿ, ಗುಂಟೂರಿನಲ್ಲಿ ವರ್ತಕರ ಸಭೆ ನಡೆಸಿದ್ದು ಕೆಳ ದರ್ಜೆಯ ತಂಬಾಕು ಖರೀದಿಸಲು ಮಾತುಕತೆಯಾಗಿದೆ. ಬೆಳೆಗಾರರ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗಿದೆ ಎಂದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಸಂಸದ ಶ್ರೇಯಸ್ ಪಟೇಲ್ ಅವರು, ಮಾರುಕಟ್ಟೆಯಲ್ಲಿ ರೈತರು ತರುವ ಎಲ್ಲ ಬೇಲ್‌ಗಳನ್ನು ಖರೀದಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಕೇಂದ್ರ ವಾಣಿಜ್ಯ ಸಚಿವರ ಗಮನಕ್ಕೆ ತಂದು ಹೊಗೆಸೊಪ್ಪು ಬೆಳೆಗಾರರ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ, ಮುಖಂಡರಾದ ಪುಟ್ಟರಾಜು, ಹರಳಹಳ್ಳಿ ತಮ್ಮೇಗೌಡ, ಎಚ್.ಈ. ಜಗದೀಶ್, ಕೃಷ್ಣೇಗೌಡ, ಹೊಂಬೇಗೌಡ, ಜಗನ್ನಾಥ್, ರವಿ, ಮಂಜೇಗೌಡ, ಮಲ್ಲೇಶ್, ಕೆಆರ್‌ಎಸ್ ಪಕ್ಷದ ದೇವರಾಜು ಇತರರು ಪಾಲ್ಗೊಂಡಿದ್ದರು.*ಬಾಕ್ಸ್ ನ್ಯೂಸ್:
ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯಕರ್ತರನ್ನು ಹೊರತುಪಡಿಸಿ ಬೆಳೆಗಾರರ ಬೆಂಬಲ ನೀರಸವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಬೆಳೆಗಾರರಿದ್ದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ತಂಬಾಕು ಮಾರುಕಟ್ಟೆಗೆ ಬೇಲ್‌ಗಳನ್ನು ತಂದಿದ್ದ ಬಹುತೇಕ ರೈತರು ಹರಾಜು ಮುಗಿಸಿ ಪ್ರತಿಭಟನೆಯಲ್ಲಿ ಭಾಗವಹಿಸದೆ ಕಾಲ್ಕಿತ್ತರು. ಹೀಗಾಗಿ ರೈತ ಸಂಘದ ಕಾರ್ಯಕರ್ತರ ಜತೆ ಬೆರಳೆಣಿಕೆ ಬೆಳೆಗಾರರು ಭಾಗವಹಿಸುವ ಮೂಲಕ ರೈತರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಸಾಬೀತುಪಡಿಸಿತು.