ಕೊಪ್ಪಳ: ಬಲದಂಡೆ ಎಚ್‌ಎಲ್‌ಸಿ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ವಿಜಯನಗರ ಕಾಲುವೆಗೆ ನೀರು ಬಿಡುವ ದಿನಾಂಕ ಪ್ರಕಟಿಸಬೇಕು. ಇಲ್ಲದಿದ್ದರೆ ಡಿ.18ರಂದು ಹೊಸಲಿಂಗಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರೊಂದಿಗೆ ಪ್ರತಿಭಟನೆ ಮಾಡುತ್ತೇವೆ ಎಂದು ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ ಎಚ್ಚರಿಕೆ ನೀಡಿದ್ದಾರೆ.ಶಿವಪುರದಲ್ಲಿ ನಡೆದ ನೀರು ಬಳಕೆದಾರರ ಸಹಕಾರ ಸಂಘ ಹಾಗೂ ರೈತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿ.9ರಂದು ತುಂಗಭದ್ರ ಜಲಾಶಯದ ನೀರಿನ ಬಗ್ಗೆ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ತುಂಗಭದ್ರ ಜಲಾಶಯದಲ್ಲಿ ಸದ್ಯ ಲಭ್ಯವಿರುವ ನೀರು ಕುಡಿಯುವ ನೀರು ಹಾಗೂ ವಿಜಯನಗರ ಬಲದಂಡೆ ಮತ್ತು ಎಡದಂಡೆ ಬೆಳೆಗಳಿಗೆ ಮಾತ್ರ ಎಂದು ತೀರ್ಮಾನವಾಗಿದೆ ಎಂದರು.ಒಂದು ವೇಳೆ ತುಂಗಭದ್ರ ಬಲದಂಡೆ ಎಚ್‌ಎಲ್‌ಸಿಗೆ ನೀರು ಕೊಡುವುದಾದರೆ ಆಂಧ್ರ ಕೋಟಾದಲ್ಲಿ ಅಲ್ಲಿನ ಸರ್ಕಾರ ಪರವಾನಗಿ ಕೊಟ್ಟ ನಂತರ ಮಾತ್ರ ಬಲದಂಡೆ ಎಚ್‌ಎಲ್‌ಸಿಗೆ ನೀರು ಬೀಡುವುದಾಗಿ ತೀರ್ಮಾನಸಲಾಗಿದೆ. ಆದರೆ ಈಗಾಗಲೇ ಬಲದಂಡೆ ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಮುಖ್ಯ ಕಾಲುವೆಗಳಿಗೆ ನಿಗದಿತ ಪ್ರಮಾಣಕ್ಕಿಂತಲೂ ಸುಮಾರು 25 ಟಿಎಂಸಿಗಿಂತಲೂ ಹೆಚ್ಚಿನ ನೀರನ್ನು ಆ ಕಾಲುವೆಗಳಿಗೆ ಜಲಾಶಯದಿಂದ ಪೂರೈಸಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಜಮೀರ ಅಹ್ಮದ್ ಖಾನ್, ನಾಗೇಂದ್ರ, ಶಾಸಕರಾದ ಗಣೇಶ, ಎಚ್.ಆರ್. ಗವಿಯಪ್ಪ, ಜನಾರ್ದನ ರೆಡ್ಡಿ, ಭರತ್ ರೆಡ್ಡಿ, ರಾಘವೇಂದ್ರ ಹಿಟ್ನಾಳ ಸಭೆಯಲ್ಲಿ ಬಲದಂಡೆ ಎಚ್‌ಎಲ್‌ಸಿಗೆ ಸದ್ಯ ಲಭ್ಯವಿರುವ ಕರ್ನಾಟಕ ಕೋಟಾದ ಕುಡಿಯವ ನೀರು, ವಿಜಯನಗರ ಕಾಲುವೆಗಳ ನೀರು ಮಾತ್ರ ಇದ್ದು ಇದನ್ನು ಬಿಡಲು ಸಾಧ್ಯವಿಲ್ಲ ಎಂದು ತೀರ್ಮಾನವಾಗಿದೆ ಎಂದರು.ಆದರೆ ಡಿ.14ರಿಂದ ಬಲದಂಡ ಎಚ್‌ಎಲ್‌ಸಿ ಕಾಲುವೆಗೆ ತುಂಗಭದ್ರ ಜಲಾಶಯದಲ್ಲಿ ಕುಡಿವ ನೀರು, ವಿಜಯನಗರ ಕಾಲುವೆಗಳಿಗೆ ಕೋಟಾದ ನೀರನ್ನು (ಕಾಯ್ದಿರಿಸಿದೆ) ಎಚ್‌ಎಲ್‌ಸಿ ಬಲದಂಡೆಗೆ ನೀರು ಪೂರೈಸುತ್ತಿದೆ. ಈ ಬಗ್ಗೆ ನಮ್ಮ ವಿರೋಧವಿದೆ. ಕೂಡಲೇ ಸರ್ಕಾರವು ಯಾವ ಕೋಟಾದಡಿ ನೀರು ಹರಿಸುತ್ತಿದ್ದಿರಿ? ವಿಜಯನಗರ ಕಾಲುವೆಗಳಿಗೆ ಯಾವಾಗ ನೀರು ಬಿಡುತ್ತೀರಿ? ಎಂದು ಹೇಳಬೇಕು. ಇಲ್ಲವಾದಲ್ಲಿ ಡಿ.18ರಂದು ಪ್ರತಿಭಟನೆಗೆ ಮುಂದಾಗುತ್ತೇವೆ ಎಂದರು. ಈ ಸಂದರ್ಭದಲ್ಲಿ ವಿಶ್ವನಾಥ ರಾಜು, ವೆಂಕಪ್ಪಹೊಸಳ್ಳಿ, ಸಿದ್ದರಾಮಸ್ವಾಮಿ ಸುದರ್ಶನ್ ವರ್ಮ, ಹುಲುಗಪ್ಪ ಗಡಾದ, ಪ್ರಭುರಾಜ ಪಾಟೀಲ್, ಧರ್ಮರಾಜ ಇದ್ದರು.