ಲಕ್ಷ್ಮೇಶ್ವರ: ಕೇಂದ್ರ ಸರ್ಕಾರ ಕೊಡ ಮಾಡಿರುವ ಬರ ಪರಿಹಾರದ ಹಣವು ರೈತರು ಖಾತೆಗಳಿಗೆ ಜಮಾ ಆಗದೆ ಹೋಗಿದ್ದರಿಂದ ರೈತರು ತಾಲೂಕು ಕಚೇರಿಗೆ ಬರ ಪರಿಹಾರಕ್ಕಾಗಿ ಅಲೆಯುವಂತಾಗಿದೆ.
ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗದೆ ಇರುವ ರೈತರು ತಮ್ಮ ದಿನನಿತ್ಯದ ದುಡಿಮೆ ಬಿಟ್ಟು, ನೂರಾರು ಖರ್ಚು ಮಾಡಿಕೊಂಡು ತಾಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ರೈತರು ಬರ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಗ್ರಾಮಲೆಕ್ಕಿಗರಿಗೆ ಸೂಕ್ತ ಮಾರ್ಗದರ್ಶನ ನೀಡಿ, ರೈತರನ್ನು ವಿನಾಕಾರಣ ಅಲೆದಾಡಿಸುವ ಕಾರ್ಯ ಅಧಿಕಾರಿಗಳು ನಿಲ್ಲಿಸಬೇಕು. ಅಲ್ಲದೆ ಬರ ಪರಿಹಾರದ ಹಣವನ್ನು ರೈತರ ವಿವಿಧ ಸಾಲದ ಖಾತೆಗಳಿಗೆ ಜಮಾ ಮಾಡಿಕೊಳ್ಳದೆ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರಿಗೆ ಹಣದ ಸಾಕಷ್ಟು ಅವಶ್ಯಕತೆ ಇರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕ್ ನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಯಾವುದೇ ಕಾರಣಕ್ಕೂ ರೈತರು ಬೆಳೆ ಪರಿಹಾರದ ಹಣ ತಡೆ ಹಿಡಿಯದಂತೆ ನಿರ್ದೇಶನ ನೀಡಬೇಕು ಎಂದು ಮಾಡಳ್ಳಿ ಗ್ರಾಮದ ರೈತ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದೇಗೌಡ ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಜಮಾ ಆಗದೆ ಇರಲು ಹಲವು ಕಾರಣಗಳಿವೆ. ರೈತರು ತಮ್ಮ ಪಹಣಿ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದರೂ ಶೇ.60 ರಷ್ಟು ರೈತರು ಅದರ ಬಗ್ಗೆ ಆಸಕ್ತಿ ಹೊಂದಿಲ್ಲ ಹೀಗೆ ಇನ್ನೂ ಹಲವು ಕಾರಣಗಳು ಇದ್ದು ರೈತರು ತಾಲೂಕು ಕಚೇರಿಯಲ್ಲಿ ಬರ ಪರಿಹಾರಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ. ರೈತರು ಅಲ್ಲಿಗೆ ಬಂದು ಬರ ಪರಿಹಾರದ ಹಣ ಯಾಕೆ ಜಮಾ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಬರ ಪರಿಹಾರದ ಹೇಲ್ಪ್ ಲೈನ್ ನಂಬರ್ 08487-273 273 ಗೆ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ.