ಹಾವೇರಿ: ಕಬ್ಬಿನ ದರ ನಿಗದಿ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯಲ್ಲಿ ಒಮ್ಮತಕ್ಕೆ ಬರುವಲ್ಲಿ ವಿಫಲಗೊಂಡಿತು. ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಿ ಪ್ರತಿ ಟನ್ ಕಬ್ಬಿಗೆ ₹ 3,500 ನೀಡಬೇಕು ಎಂಬ ರೈತರ ಬೇಡಿಕೆಗೆ ಕಾರ್ಖಾನೆ ಮಾಲೀಕರು ಒಪ್ಪದ ಕಾರಣ ಬಿಕ್ಕಟ್ಟು ಮುಂದುವರಿಯುವಂತಾಯಿತು.
ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಯುವ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಬೀಜ, ಗೊಬ್ಬರ, ಔಷಧ, ಕೃಷಿ ಕಾರ್ಮಿಕರ ಕೂಲಿ, ನೀರಾವರಿ, ನಿರ್ವಹಣೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ರೈತರು ಹೆಚ್ಚಿನ ಹಣ ವ್ಯಯಿಸಬೇಕಾಗಿದೆ. ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕಬ್ಬಿಗೆ ದರ ದೊರೆಯದಿದ್ದರೆ ಬೆಳೆಗಾರರಿಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೀಗಾಗಿ ಪ್ರತಿ ಟನ್ ಕಬ್ಬಿಗೆ ಸಾಗಾಣಿಕೆ ವೆಚ್ಚ ಹೊರತುಪಡಿಸಿ ಕನಿಷ್ಠ ₹ 3,500 ದರ ನಿಗದಿಪಡಿಸಬೇಕು. ರೈತರ ಶ್ರಮ ಮತ್ತು ಹೂಡಿಕೆಗೆ ನ್ಯಾಯಯುತ ಪ್ರತಿಫಲ ಸಿಗುವ ನಿಟ್ಟಿನಲ್ಲಿ ಕಾರ್ಖಾನೆಗಳು ಸೂಕ್ತ ದರ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ರೈತರು ಹಾಗೂ ಸಕ್ಕರೆ ಕಾರ್ಖಾನೆಯವರ ನಡುವೆ ಕಬ್ಬಿನ ದರಕ್ಕೆ ಸಂಬಂಧಿಸಿದಂತೆ ಹೊಂದಾಣಿಕೆ ಮೂಡಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ರೈತರ ಬೇಡಿಕೆ ಮತ್ತು ಕಾರ್ಖಾನೆಗಳ ಪ್ರಸ್ತಾವದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಭೆ ನಿರ್ಧಾರವಿಲ್ಲದೆ ಅಂತ್ಯಗೊಂಡಿತು.ಸಭೆಯ ಬಳಿಕ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಿ ಪ್ರತಿ ಟನ್‌ಗೆ ₹3,500 ರೂ., ನೀಡಬೇಕು ಎಂಬುದು ರೈತರ ಸ್ಪಷ್ಟ ಬೇಡಿಕೆಯಾಗಿದೆ. ಆದರೆ ಜಿಎಂ ಶುಗರ್ಸ್ ಕಾರ್ಖಾನೆಯವರು ಕಟಾವು ಮತ್ತು ಸಾಗಣೆ ವೆಚ್ಚ ಸೇರಿ ₹ 2,800 ಹಾಗೂ ವಿಐಎನ್‌ಪಿ ಕಾರ್ಖಾನೆಯವರು ₹ 2900 ನೀಡುವುದಾಗಿ ಹೇಳಿವೆ. ಇದನ್ನು ರೈತರು ಒಪ್ಪಿಲ್ಲ. ಮುಂದಿನ ಹೋರಾಟದ ರೂಪುರೇಷೆ ಹಾಗೂ ತೀರ್ಮಾನ ಕೈಗೊಳ್ಳಲು ರೈತ ಮುಖಂಡರು ಸಭೆ ಸೇರಲಿದ್ದಾರೆ ಎಂದರು.
ಮುಂದುವರಿದ ದರ ನಿಗದಿ ಬಿಕ್ಕಟ್ಟು..
ಉಭಯ ಪಕ್ಷಗಳ ನಡುವೆ ದರದ ವಿಚಾರದಲ್ಲಿ ಒಮ್ಮತ ಮೂಡಿಸಲು ಜಿಲ್ಲಾಧಿಕಾರಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಸಭೆ ಯಾವುದೇ ಅಂತಿಮ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿದ್ದು, ಕಬ್ಬು ದರ ನಿಗದಿ ಬಿಕ್ಕಟ್ಟು ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕಬ್ಬು ಬೆಳೆಗಾರರಲ್ಲಿ ಕುತೂಹಲ ಮೂಡಿಸಿದೆ.