ಲಕ್ಷ್ಮೇಶ್ವರದಲ್ಲಿ ರೈತರಿಂದಲೇ ಚಕ್ಕಡಿ ರಸ್ತೆ ದುರಸ್ತಿ

KannadaprabhaNewsNetwork |  
Published : May 27, 2025, 01:27 AM ISTUpdated : May 27, 2025, 01:28 AM IST
ಪೊಟೋ-ಪಟ್ಟಣದ ರೈತರು ತಮ್ಮ ಹೊಲಗಳಿಗೆ ಹೋಗುವ ರಸ್ತೆ ದುರಸ್ತಿಗೆ ಮುಂದಾದ ವೇಳೆ ಶಾಸಕ ಡಾ.ಚಂದ್ರು ಲಮಾಣಿ ಬೇಟಿ ನೀಡಿರುವುದು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದಿಂದ ದೊಡ್ಡೂರು ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಜಂಗಳಕೇರಿಗೆ ಹೋಗುವ ರೈತ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ರೈತರೇ ದುಡ್ಡು ಹಾಕಿ ಸೋಮವಾರ ರಸ್ತೆ ದುರಸ್ತಿಗೊಳಿಸಿದರು.

ಲಕ್ಷ್ಮೇಶ್ವರ: ಪಟ್ಟಣದಿಂದ ದೊಡ್ಡೂರು ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಜಂಗಳಕೇರಿಗೆ ಹೋಗುವ ರೈತ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ರೈತರೇ ದುಡ್ಡು ಹಾಕಿ ಸೋಮವಾರ ರಸ್ತೆ ದುರಸ್ತಿಗೊಳಿಸಿದರು.

ಜಂಗಳಕೇರಿ ರಸ್ತೆಯಲ್ಲಿ ರೈತರು ಹೊಲಕ್ಕೆ ಹೋಗಿ ಬರಲು ಅಸಾಧ್ಯವಾಗಿತ್ತು. ಎತ್ತು ಚಕ್ಕಡಿ ಹೋಗಲು ತುಂಬಾ ತೊಂದರೆ ಉಂಟಾಗಿತ್ತು. ದಿನವೂ ನೂರಾರು ರೈತರು, ಚಕ್ಕಡಿ ಇದೇ ಮಾರ್ಗದಲ್ಲಿ ಸಂಚರಿಸಬೇಕಾಗಿತ್ತು. ಹೀಗಾಗಿ ಈ ದಾರಿಯಲ್ಲಿನ ಸುಮಾರು 200ಕ್ಕೂ ಹೆಚ್ಚು ರೈತರು ₹1000 ಹಣ ಹಾಕಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

ಪಟ್ಟಣದ ದೊಡ್ಡೂರ ರಸ್ತೆಗೆ ಹೊಂದಿಕೊಂಡು ಬೆಂಡಿಗೇರಿ ಬಸಣ್ಣ ಅವರ ಹೊಲದಿಂದ ಜಂಗಳಕೆರಿ ರಸ್ತೆವರೆಗೆ ಸುಮಾರು ಸಾವಿರಾರು ಎಕರೆ ಜಮೀನಿಗೆ ಹೋಗಲು ಪ್ರಮುಖ ದಾರಿ ಇದಾಗಿದೆ. ಈ ಕುರಿತು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೋಸಿ ಹೋಗಿ ರೈತರೇ ದುಡ್ಡು ಹಾಕಿ ಜೆಸಿಬಿ ಬಳಸಿ ರಸ್ತೆ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಗಳು ಆರಂಭಗೊಂಡಿದೆ. ಹೊಲಕ್ಕೆ ಹೋಗುವುದು ಕಠಿಣವಾಗಿತ್ತು. ಟ್ರ್ಯಾಕ್ಟರ್ ಮೂಲಕ ಕೆಂಪು ಮಣ್ಣು ಹೇರಿ ಅದನ್ನು ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದೇವೆ. ರಸ್ತೆಗಳಲ್ಲಿ ಬಿದ್ದಿರುವ ಬೃಹತ್ ಗುಂಡಿ ಮುಚ್ಚಿ ಎತ್ತು ಚಕ್ಕಡಿ ಹೋಗಲು ರಸ್ತೆ ದುರಸ್ತಿಗೆ ಮುಂದಾಗಬೇಕಾಯಿತು ಎಂದು ರೈತರು ಹೇಳುತ್ತಾರೆ.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಅವರು ಭೇಟಿ ನೀಡಿ ರೈತರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಕ್ಷೇತ್ರಕ್ಕೆ ರೈತ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ. ಹೀಗಾಗಿ ಕ್ಷೇತ್ರದ ಕೆಲಸಗಳು ನನೆಗುದಿಗೆ ಬಿದ್ದಿವೆ. ರೈತರು ಸ್ವಂತ ಹಣದಿಂದ ರಸ್ತೆ ನಿರ್ಮಾಣ ಮಾಡುವ ಈ ಕಾರ್ಯದಲ್ಲಿ ನಾವೂ ಭಾಗವಹಿಸಿದ್ದೇವೆ. ಅಲ್ಲದೆ ರೈತ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಪಕ್ಕದ ಗ್ರಾಮಗಳಿಂದ ದೊರೆಯುವ ಗುಡ್ಡದ ಮಣ್ಣನ್ನು ಹೇರುವುದಕ್ಕೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂದು ಅವರು ತಮ್ಮ ಅಸಾಹಯಕತೆ ವ್ಯಕ್ತಪಡಿಸಿದರು. ಈ ವೇಳೆ ಟಾಕಪ್ಪಾ ಸಾತಪುತೆ, ಅನೀಲ ಮುಳಗುಂದ, ರಾಮಣ್ಣ ಗೌರಿ, ಬಸಣ್ಣ ಉಮಚಗಿ, ಪರಶುರಾಮ ಸಾತಪುತೆ, ಹುಸೇನಸಾಬ ಸಿದ್ದಿ, ಮಹ್ಮದ್ ಸಾಬ ಸಿದ್ದಿ, ಸೋಮಣ್ಣ ಜಬಡಿ, ಮಹಾದೇವಪ್ಪ ಸಾತಪುಉತೆ, ರಾಮಪ್ಪ ಜಬಡಿ, ಗಂಗಾಧರ ಮೆಣಸಿನಕಾಯಿ, ನವೀನ ಹಿರೇಮಠ ಸೇರಿದಂತೆ ಅನೇಕ ರೈತರು ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ