ಏಕನಾಥ ಮೆದಿಕೇರಿ ಹನುಮಸಾಗರ
ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ರೈತರು ಹೊಲ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಆದರೆ ಟ್ರ್ಯಾಕ್ಟರ್, ರೋಟವೇಟರ್, ಸೀಡರ್, ಹಾರ್ವೆಸ್ಟರ್ ಸೇರಿದಂತೆ ವಿವಿಧ ಯಂತ್ರೋಪಕರಣ ನಿರ್ವಹಣಾ ವೆಚ್ಚ ಹಾಗೂ ಇಂಧನ ಖರ್ಚು ಹೆಚ್ಚಿರುವುದರಿಂದ ಕೃಷಿ ಕಾರ್ಯಗಳಿಗೆ ಹೆಚ್ಚುವರಿ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಟ್ರ್ಯಾಕ್ಟರ್ ಮೂಲಕ ಒಂದು ಎಕರೆ ಮಡಿಕೆ ಹೊಡೆಯಲು ₹1.500 ವೆಚ್ಚವಾಗುತ್ತಿದ್ದರೆ. ಈಗ ₹2000 ದಾಟಿದೆ. ರೋಟವೇಟರ್ ಬಳಕೆಗೆ ಗಂಟೆಗೆ 800 ಇದ್ದ ದರ ಈಗ 1200ಕ್ಕೆ ತಲುಪಿದೆ. ಹೊಲ ಸಮತಟ್ಟು ಮಾಡಲು ಗಂಟೆಗೆ ₹650 ಇದ್ದ ವೆಚ್ಚ ₹ 850ಕ್ಕೆ ಏರಿಕೆಯಾಗಿದೆ. ಬಿತ್ತನೆ ಕಾರ್ಯಕ್ಕೆ ₹1000 ಇದ್ದ ವೆಚ್ಚವು ₹1500 ವರೆಗೆ ಹೆಚ್ಚಳವಾಗಿದೆ.
ವೆಚ್ಚ ತಾಳಲಾರದೇ ಅನೇಕ ರೈತರು ಮತ್ತೆ ಎತ್ತುಗಳ ಸಹಾಯದಿಂದ ಉಳುಮೆ ಮತ್ತು ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಯಾಂತ್ರೀಕರಣದ ಪರಿಣಾಮ ಗ್ರಾಮೀಣ ಪ್ರದೇಶಗಳಿಂದ ಬಹುತೇಕ ಮರೆಯಾಗಿದ್ದ ಎತ್ತುಗಳ ಕೃಷಿ ಪದ್ಧತಿ ಈಗ ಮತ್ತೆ ಜೀವಂತವಾಗುತ್ತಿದೆ.ಟ್ರ್ಯಾಕ್ಟರ್ ಬಳಸಿ ಒಂದು ಎಕರೆ ಭೂಮಿ ಉಳುಮೆ ಮಾಡಲು ಸಾವಿರಾರು ವೆಚ್ಚವಾಗುತ್ತದೆ. ಆದರೆ ಎತ್ತುಗಳ ಸಹಾಯದಿಂದ ಅದೇ ಕೆಲಸ ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದು. ಸಮಯ ಸ್ವಲ್ಪ ಹೆಚ್ಚು ಬೇಕಾದರೂ ವೆಚ್ಚ ಕಡಿಮೆಯಾಗುವುದರ ಜತೆಗೆ ಮಣ್ಣಿನ ಸಹಜ ರಚನೆ ಮತ್ತು ಫಲವತ್ತತೆ ಉಳಿಯುತ್ತದೆ. ರಾಸಾಯನಿಕ ಬಳಕೆಯಿಂದ ಹಾನಿಗೊಳಗಾಗುತ್ತಿರುವ ಮಣ್ಣಿಗೆ ಸಾಂಪ್ರದಾಯಿಕ ಕೃಷಿ ಪದ್ಧತಿ ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇಂಧನ ದರ ಏರಿಕೆಯಿಂದ ಕೃಷಿ ಸಂಪೂರ್ಣವಾಗಿ ದುಬಾರಿಯಾಗಿದೆ. ಯಂತ್ರೋಪಕರಣಗಳ ಬಾಡಿಗೆ ರೈತರ ಕೈಗೆಟುಕದಂತಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ರೈತರು ಮತ್ತೆ ಎತ್ತುಗಳ ಕೃಷಿಯತ್ತ ಮರಳುತ್ತಿದ್ದಾರೆ. ಸರ್ಕಾರ ಕೃಷಿ ಯಂತ್ರೋಪಕರಣಗಳ ಬಾಡಿಗೆಗೆ ವಿಶೇಷ ಸಹಾಯಧನ ಹಾಗೂ ರಿಯಾಯಿತಿ ನೀಡಬೇಕು ಎಂದು ರೈತ ಚಂದುಸಾಬ್ ನದಾಫ ತಿಳಿಸಿದ್ದಾರೆ.