ಹೆದ್ದಾರಿ ತಡೆ ಮಾಡದಂತೆ ಮನವೊಲಿಸಲು ಮುಂದಾದ ಪೊಲೀಸರೊಂದಿಗೆ ಪ್ರತಿಭಟನಾಕಾರರು ಕೆಲಕ್ಷಣ ಮಾತಿನ ಚಕಮಕಿ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿ ಬಳಿ ಗ್ರೇಡ್ ೨ ತಹಸೀಲ್ದಾರ್ ಸಿ.ಜಿ. ನಾಯ್ಕ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಯಲ್ಲಾಪುರ: ರೈತರ ಹಕ್ಕು ಸಂರಕ್ಷಣೆ, ಸಮಸ್ಯೆಗಳ ಪರಿಹಾರದ ಸಂಬಂಧ ಅಧಿಕಾರಿಗಳು ನೀಡಿದ ಭರವಸೆ ಈಡೇರಿಸದ ಹಿನ್ನೆಲೆ ರೈತರ ಹಕ್ಕು ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನ. ೨೦ರಂದು ಪಟ್ಟಣದಲ್ಲಿ ತಾಲೂಕಿನ ವಿವಿಧ ಪ್ರದೇಶಗಳ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ಅರಣ್ಯ ಇಲಾಖೆಯ ಆವಾರದಿಂದ ಮೆರವಣಿಗೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ, ಘೋಷಣೆ ಕೂಗುತ್ತ ಹೊರಟ ೩೦೦ಕ್ಕೂ ಹೆಚ್ಚು ರೈತರು, ತಹಸೀಲ್ದಾರ್ ಕಚೇರಿ ಎದುರಿಗೆ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಹೆದ್ದಾರಿ ತಡೆ ಮಾಡದಂತೆ ಮನವೊಲಿಸಲು ಮುಂದಾದ ಪೊಲೀಸರೊಂದಿಗೆ ಪ್ರತಿಭಟನಾಕಾರರು ಕೆಲಕ್ಷಣ ಮಾತಿನ ಚಕಮಕಿ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿ ಬಳಿ ಗ್ರೇಡ್ ೨ ತಹಸೀಲ್ದಾರ್ ಸಿ.ಜಿ. ನಾಯ್ಕ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಆರ್.ಕೆ. ಭಟ್ಟ ಮಾತನಾಡಿ, ಒಂದು ತಿಂಗಳ ಹಿಂದೆ ಸಮಿತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಮುಂದೆ ರೈತರು ಸಭೆ ಸೇರಿ ಮನವಿ ಸಲ್ಲಿಸಿದ್ದರು. ಆ ವೇಳೆ ಒಂದು ತಿಂಗಳಲ್ಲಿ ಎಲ್ಲ ರೈತರ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈ ತನಕವೂ ಯಾವುದೇ ಸಭೆ ಕರೆದಿಲ್ಲ. ರೈತರ ಮನವಿಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ ಭೌಗೋಳಿಕ ಸ್ಥಿತಿಯಲ್ಲಿ ರೈತರು ಸೊಪ್ಪಿನ ಬೆಟ್ಟದಲ್ಲಿ ಮನೆ ಕಟ್ಟಲು ಕಾನೂನಿನ ಅವಕಾಶವಿದ್ದರೂ ಇದಕ್ಕೆ ಅಗತ್ಯವಿರುವ ಪರವಾನಗಿ ನೀಡುತ್ತಿಲ್ಲ. ಕಾಡುಪ್ರಾಣಿಗಳು ಬೆಳೆನಾಶ ಮಾಡುತ್ತಿವೆ. ಇಲಾಖೆಗಳ ಕಚೇರಿಗೆ ಅಲೆದಾಡಿದರೂ ವರ್ಷಗಳ ನಂತರ ಅಲ್ಪಸ್ವಲ್ಪ ಪರಿಹಾರ ನೀಡಿ ಕಣ್ಣೊರೆಸುವ ಪ್ರಯತ್ನ ಮಾಡಲಾಗುತ್ತಿದೆ. ಸೊಪ್ಪಿನ ಬೆಟ್ಟದ ಪಹಣಿ ಪತ್ರಿಕೆಯಲ್ಲಿ ಅ ಖರಾಬು ಅಂತ ಇರುವುದನ್ನು ಬ ಖರಾಬು ಅಂತ ರೈತರ ಗಮನಕ್ಕೆ ತರದೇ ಬದಲಾಯಿಸಲಾಗಿದೆ.
ಬೆಳೆವಿಮೆಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ರೈತರ ಬೆಳೆಗಳಿಗೆ ಯೋಗ್ಯ ದರ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಂದ ರೈತರು ಕಂಗಾಲಾಗಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ದೊರಕುವವರೆಗೆ ನಿರಂತರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ಸಮಿತಿಯ ಗೌರವಾಧ್ಯಕ್ಷ ಟಿ.ಸಿ. ಗಾಂವ್ಕರ ವಜ್ರಳ್ಳಿ, ಕಾರ್ಯದರ್ಶಿ ಕೆ.ಟಿ. ಭಟ್ಟ ಗುಂಡ್ಕಲ್, ಖಜಾಂಚಿ ನಾಗೇಂದ್ರ ಭಟ್ಟ ಆನಗೋಡು, ತಾಲೂಕು ರೈತ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಕಾರ್ಯದರ್ಶಿ ಎಲ್.ಪಿ. ಭಟ್ಟ ಗುಂಡ್ಕಲ್, ಪ್ರಮುಖರಾದ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ವಿ.ಎಂ. ಹೆಗಡೆ ಉಮ್ಮಚಗಿ, ಗಣಪತಿ ಕರುಮನೆ, ಶ್ರೀಪಾದ ಮೆಣಸುಮನೆ, ಮಂಜುನಾಥ ಹೆಗಡೆ ಸೇರಿದಂತೆ ತಾಲೂಕಿನ ವಿವಿಧೆಡೆಯ ೩೦೦ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.