ರೈತಶಾಲೆ ವಾರ್ಷಿಕೋತ್ಸವ: ನಾಳೆ ಮಂಡ್ಯ ನಗರದಲ್ಲಿ ರೈತೋತ್ಸವ

KannadaprabhaNewsNetwork |  
Published : Jul 02, 2026, 01:30 AM IST
೧ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಂಪೇಗೌಡ-ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ಎನ್.ಚಂದ್ರಶೇಖರ್ ಮಾತನಾಡಿದರು. | Kannada Prabha

ಸಾರಾಂಶ

ರೈತರ ಶಾಲೆಯ ಮೂಲಕ ರೈತರ ಕೃಷಿ ಭೂಮಿಗೆ ನವಚೈತನ್ಯ ತಂದುಕೊಡಬಲ್ಲ, ಇಳುವರಿ ಹೆಚ್ಚಿಸಬಲ್ಲ ಮೈಕ್ರೋ ನ್ಯೂಟ್ರಿಯೆಂಟ್ಸ್‌ನ್ನು ಒಂದು ಸಾವಿರ ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಮಲೆನಾಡು ಗಿಡ್ಡ ದನಗಳು ಮೂರೂವರೆ ವರ್ಷಕ್ಕೆ ಪ್ರೌಢಾವಸ್ಥೆಗೆ ಬಂದು ಕರು ಹಾಕುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಂಪೇಗೌಡ-ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ರೈತರ ಶಾಲೆ ವಾರ್ಷಿಕೋತ್ಸವ ಅಂಗವಾಗಿ ರೈತೋತ್ಸವ ಕಾರ್ಯಕ್ರಮವನ್ನು ಜು.೩ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ರೈತಶಾಲೆ ಸಂಸ್ಥಾಪಕ ಪ್ರೊ.ಸತ್ಯಮೂರ್ತಿ ಹೇಳಿದರು.

ಉದ್ಘಾಟನೆಯನ್ನು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ್ ನೆರವೇರಿಸುವರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೈತೋತ್ಸವಕ್ಕೆ ಮುನ್ನುಡಿ ಬರೆಯುವರು. ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ಎನ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಜಂಟಿ ಕೃಷಿ ನಿರ್ದೇಶಕರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ವಿ.ಎಸ್.ಅಶೋಕ್ ಅವರಿಗೆ ರೈತರಿಂದ ನಾಗರೀಕ ಸಮ್ಮಾನ ಏರ್ಪಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ.ಆರ್.ಯೋಗಾನಂದ, ಮನ್‌ಮುಲ್ ನಿರ್ದೇಶಕ ಎಂ.ಎಸ್.ರಘುನಂದನ್, ಉದ್ಯಮಿ ಮುದ್ದನಘಟ್ಟ ಮಹಾಲಿಂಗೇಗೌಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ನ್ಯೂಟ್ರಿಕಾರ್ಪ್ ಪ್ರೈವೇಟ್ ಲಿಮಿಟೆಡ್‌ನ ಜಿ.ಅಜಯ್ ಭಾಗವಹಿಸುವರು ಎಂದರು.

ಕೃಷಿ ವಿಚಾರ ಸಂಕಿರಣದಲ್ಲಿ ಮಂಡ್ಯ ನೆಲದಲ್ಲಿ ರೈತರ ಶಾಲೆಯ ಹೆಜ್ಜೆಗುರುತು ಕುರಿತು ಉಪನ್ಯಾಸಕಿ ಡಾ.ಅನಿತಾ, ಸಾವಯವ ಕೃಷಿಗೆ ಮಣ್ಣಿನ ಗುಣಧರ್ಮ ಮತ್ತು ಸುಧಾರಣೆ ಕುರಿತು ಸಾವಯವ ಕೃಷಿ ಸಲಹೆಗಾರ ಜಿ.ಪಿ.ಮೂರ್ತಿ, ಬೆಳೆಗಳ ಮೌಲ್ಯವರ್ಧನೆ ಮತ್ತು ಯಶಸ್ವಿ ಮಾರುಕಟ್ಟೆ ತಂತ್ರದ ಬಗ್ಗೆ ಆರ್ಗ್ಯಾನಿಕ್ ಸಂಸ್ಥಾಪಕ ಮಧುಚಂದನ್ ಮಾತನಾಡುವರು.

ರೈತರ ಶಾಲೆಯ ಮೂಲಕ ರೈತರ ಕೃಷಿ ಭೂಮಿಗೆ ನವಚೈತನ್ಯ ತಂದುಕೊಡಬಲ್ಲ, ಇಳುವರಿ ಹೆಚ್ಚಿಸಬಲ್ಲ ಮೈಕ್ರೋ ನ್ಯೂಟ್ರಿಯೆಂಟ್ಸ್‌ನ್ನು ಒಂದು ಸಾವಿರ ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಮಲೆನಾಡು ಗಿಡ್ಡ ದನಗಳು ಮೂರೂವರೆ ವರ್ಷಕ್ಕೆ ಪ್ರೌಢಾವಸ್ಥೆಗೆ ಬಂದು ಕರು ಹಾಕುತ್ತದೆ. ದಿನವೊಂದಕ್ಕೆ ೧ ರಿಂದ ೨ ಲೀಟರ್‌ನಷ್ಟು ಹಾಲು ನೀಡುತ್ತದೆ. ಈ ತಳಿಯ ಹಸುಗಳು ಸುಮಾರು ೧೫ ಕರುಗಳನ್ನು ತಮ್ಮ ಜೀವಿತಾವಧಿಯಲ್ಲಿ ಹಾಕುತ್ತವೆ. ಮಲೆನಾಡು ಗಿಡ್ಡದ ಹಾಲು ಶುದ್ಧ ದೇಸಿ ಎ೨ ಹಾಲಿಗಿದೆ. ಇದರ ಹಾಲಿನಲ್ಲಿ ಲಾಕ್ಟೋಫೆರಿನ್ ಅಂಶ ಹೆಚ್ಚಿದ್ದು, ಆಂಟಿ ವೈರಲ್ ಅಂಶವನ್ನು ಕೂಡ ಒಳಗೊಂಡಿದೆ. ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿ. ಮಲೆನಾಡು ಗಿಡ್ಡ ಹಸುಗಳು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ಕಾಯಿಲೆ ಬೀಳುವ ಸಂದರ್ಭಗಳು ತುಂಬಾ ವಿರಳ ಎಂದು ಹೇಳಿದರು.

ಭತ್ತದ ಕೃಷಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ರೈತ ಶಾಲೆಯ ೩೦೦ ಮಂದಿ ರೈತ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಾಗುವುದು. ನಾಟಿಗೆ ಉತ್ತರ ಭಾರತದ ರಾಜ್ಯಗಳಿಂದ ಬಂದವರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನು ತಪ್ಪಿಸಲು ಮತ್ತು ಸ್ಥಳೀಯ ಮಹಿಳೆಯರ ಪವಿತ್ರ ನಾಟಿ ಕಾರ್ಯ ಶ್ಲಾಘಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಎಂ.ಎನ್.ಚಂದ್ರಶೇಖರ್, ನವೀನ್‌ಕುಮಾರ್, ಎಚ್.ಎಂ.ಶಂಕರ್, ನಾಗೇಶ, ಜಗದೀಶ, ಪ್ರದೀಪ್, ಧರ್ಮ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೌಗೋಳಿಕ ಸಂಪತ್ತು ಸದ್ಬಳಕೆ ಆದಾಗ ಮಾತ್ರವೇ ಅಭಿವೃದ್ಧಿ
ಕೆಪಿಟಿಸಿಎಲ್ ಖಾಸಗೀಕರಣ ಯತ್ನ ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿದ ರೈತ ಸಂಘ