ಕೃತಕ ಅಭಾವ ಸೃಷ್ಟಿಗೆ ಹುನ್ನಾರ; ಯೂರಿಯಾಗಾಗಿ ರೈತರ ಪರದಾಟ

KannadaprabhaNewsNetwork |  
Published : Jul 29, 2025, 01:02 AM IST
ವರದಿಗೆ ಪೂರಕವಾಗಿ ಬಳಸಿಕೊಳ್ಳುವುದು.. | Kannada Prabha

ಸಾರಾಂಶ

ಯೂರಿಯಾಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಅಂಗಡಿ ಮಾಲೀಕರು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದ್ದು, ಯೂರಿಯಾ ಸಿಗದೆ ರೈತರು ಒದ್ದಾಟ ಅನುಭವಿಸುವಂತಾಗಿದೆ.

ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದ ಕೃಷಿ ಇಲಾಖೆ ಅಧಿಕಾರಿಗಳು

ರಾಜಾರೋಷವಾಗಿ ದುಪ್ಪಟ್ಟುಬೆಲೆಗೆ ಯೂರಿಯಾ ಮಾರಾಟ; ರೈತರ ಆರೋಪ

ಜಾಗೃತ ದಳದಿಂದ ಈವರೆಗೆ ಒಂದೇ ಒಂದು ಕೇಸ್ ಹಾಕಿಲ್ಲ

ಕೇಂದ್ರದ ಸೂಚನೆಯನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ರಸಗೊಬ್ಬರ ಮಾರಾಟಗಾರರು

ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಖರೀದಿಗೆ ರೈತರ ಹಿಂದೇಟು

ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಯೂರಿಯಾ ಪೂರೈಸಿದರೂ ಅಭಾವ ಸೃಷ್ಟಿಯಾಕೆ?

ಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಯೂರಿಯಾಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಅಂಗಡಿ ಮಾಲೀಕರು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದ್ದು, ಯೂರಿಯಾ ಸಿಗದೆ ರೈತರು ಒದ್ದಾಟ ಅನುಭವಿಸುವಂತಾಗಿದೆ.

ರಾಜ್ಯದಲ್ಲಿ ಯೂರಿಯಾ ಅಭಾವ ಸೃಷ್ಟಿಯಾಗಿದ್ದರೂ ಬಳ್ಳಾರಿ ಜಿಲ್ಲೆಯಲ್ಲಿ ಅಗತ್ಯದಷ್ಟು ಪೂರೈಕೆಯಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಟಿಗೆ ಮುಂದಾಗಿದ್ದಾರೆ. ಈ ಮೂಲಕ ರೈತರಿಂದ ನಿಗದಿತ ದರಕ್ಕಿಂತ ಎರಡು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರೈತರು ಆಪಾದಿಸುತ್ತಿದ್ದಾರೆ.

ಯೂರಿಯಾ ಜತೆಗೆ ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಪ್ರೇರೇಪಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯನ್ನೇ ದಾಳವಾಗಿ ಬಳಸಿಕೊಳ್ಳುತ್ತಿರುವ ಅಂಗಡಿ ಮಾಲೀಕರು ಯೂರಿಯಾವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ ಕೇಂದ್ರ ಸರ್ಕಾರದ ಸಲಹೆಯನ್ನು ದುರಪಯೋಗ ಮಾಡಿಕೊಳ್ಳಬಾರದು. ಯೂರಿಯಾ ಜೊತೆ ಇತರೆ ಉತ್ಪನ್ನಗಳ ಖರೀದಿಗೆ ಒತ್ತಾಯ ಮಾಡುವಂತಿಲ್ಲ ರೈತರನ್ನು ಒತ್ತಾಯಿಸುವಂತಿಲ್ಲ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುವ ಕೃಷಿ ಇಲಾಖೆ ಅಧಿಕಾರಿಗಳು, ಈಗಾಗಲೇ ಹೆಚ್ಚಿನ ದರಕ್ಕೆ ಯೂರಿಯಾ ಮಾರಾಟ ಮಾಡುವವರ ವಿರುದ್ಧ ಕೈಗೊಂಡಿರುವ ಕ್ರಮ ಏನು? ಎಂಬುದರ ಬಗ್ಗೆ ಸ್ಪಷ್ಟ ಉತ್ತರ ನೀಡುತ್ತಿಲ್ಲ.

ಈ ಕುರಿತು ಕನ್ನಡಪ್ರಭದ ಜೊತೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, ನಮ್ಮಲ್ಲಿಯೇ ಜಿಲ್ಲಾ ಮಟ್ಟದಲ್ಲಿ ವಿಜಿಲೆನ್ಸ್ (ಜಾಗೃತದಳ)ಇದೆ. ಸಹಾಯಕ ಕೃಷಿ ಅಧಿಕಾರಿಗಳು ವಿಜಿಲಿನ್ಸ್ ನಲ್ಲಿದ್ದು ಅನೇಕ ಬಾರಿ ತಪಾಸಣೆ ಮಾಡಿದ್ದಾರೆ. ಆದರೆ, ಈವರೆಗೆ ಎಲ್ಲೂ ಸಹ ಯೂರಿಯಾವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದಿಲ್ಲ ಎಂದು ಹೇಳುತ್ತಾರೆ.

ರೈತರು ದುಬಾರಿ ಬೆಲೆಯ ಯೂರಿಯಾ ಬಗ್ಗೆ ಧ್ವನಿ ಎತ್ತುತ್ತಿರುವುದು ಏಕೆ ? ರೈತರಿಗೆ ಸಮರ್ಪಕವಾಗಿ ನಿಗದಿತ ದರಕ್ಕೆ ಯೂರಿಯಾ ಸಿಗುವಂತಿದ್ದರೆ, ರೈತರು ಮಾಧ್ಯಮಗಳ ಮುಂದೆ ಬಂದು ಅಳಲು ತೋಡಿಕೊಳ್ಳುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಸುಂದರ್, ನ್ಯಾನೋ ಯೂರಿಯಾ, ನ್ಯಾನೋ ಡಿಎಪಿಯನ್ನು ಸಹ ಖರೀದಿಸುವಂತೆ ಕೇಂದ್ರ ಸರ್ಕಾರ ಕಂಪನಿಗಳಿಗೆ ಸೂಚನೆ ನೀಡಿದೆ.

ಹೀಗಾಗಿಯೇ ಕಂಪನಿಯವರು, ಡೀಲರ್‌ಗಳಿಗೆ, ಡೀಲರ್‌ಗಳು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಆದಾಗ್ಯೂ ಎಲ್ಲೂ ಒತ್ತಾಯದಿಂದ ಯೂರಿಯಾ ಜತೆಗೆ ಬೇರೆ ಉತ್ಪನ್ನಗಳನ್ನು ಲಿಂಕ್ ಮಾಡುವಂತಿಲ್ಲ ಎನ್ನುತ್ತಿದ್ದಾರಾದರೂ ಅಂಗಡಿ ಮಾಲೀಕರ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’