ರೈತರು ಬೆಳೆ ಪರಿವರ್ತನೆ ಪದ್ಧತಿ ಅಳವಡಿಸಿಕೊಳ್ಳಿ: ಡಾ. ಪಿ.ಎಲ್. ಪಾಟೀಲ

KannadaprabhaNewsNetwork |  
Published : Jul 19, 2025, 01:00 AM IST
ಫೋಟೊ ಶೀರ್ಷಿಕೆ: 18ಆರ್‌ಎನ್‌ಆರ್6ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಗೋವಿನಜೋಳದಲ್ಲಿ ಮುಳ್ಳುಸಜ್ಜೆ ಕಳೆ ನಿರ್ವಹಣೆಯ ಕಾರ್ಯಾಗಾರವನ್ನು ಅತಿಥಿಗಳು ಉದ್ಘಾಟಿಸಿದರು.  | Kannada Prabha

ಸಾರಾಂಶ

ಮುಂಗಾರಿನಲ್ಲಿ ಸೋಯಾಅವರೆ ಬೆಳೆದು ಹಿಂಗಾರಿನಲ್ಲಿ ಗೋವಿನಜೋಳ ಬೆಳೆಯುವುದರಿಂದ ಮುಳ್ಳುಸಜ್ಜೆಯನ್ನು ಕಾಲಕ್ರಮೇಣ ನಿಯಂತ್ರಣ ಮಾಡಬಹುದು.

ರಾಣಿಬೆನ್ನೂರು: ಮುಳ್ಳುಸಜ್ಜೆ ಕಳೆಯ ಹಾವಳಿ ನಿಯಂತ್ರಣಕ್ಕೆ ರೈತರು ಬೆಳೆ ಪರಿವರ್ತನೆ ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಧಾರವಾಡದ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ(ಗೋವಿನಜೋಳ) ಸಹಯೋಗದಲ್ಲಿ ಏರ್ಪಡಿಸಿದ್ದ ಗೋವಿನಜೋಳದಲ್ಲಿ ಮುಳ್ಳುಸಜ್ಜೆ ಕಳೆ ನಿರ್ವಹಣೆಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಗಾರಿನಲ್ಲಿ ಸೋಯಾಅವರೆ ಬೆಳೆದು ಹಿಂಗಾರಿನಲ್ಲಿ ಗೋವಿನಜೋಳ ಬೆಳೆಯುವುದರಿಂದ ಮುಳ್ಳುಸಜ್ಜೆಯನ್ನು ಕಾಲಕ್ರಮೇಣ ನಿಯಂತ್ರಣ ಮಾಡಬಹುದು ಎಂದರು. ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿ, ಜಿಲ್ಲೆಯಲ್ಲಿ ಮೊದಲು ಅತಿ ಹೆಚ್ಚು ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದರು. ಮುಟುರು ರೋಗದ ಹಾವಳಿಯಿಂದ ರೈತರು ಮೆಣಸಿನಕಾಯಿ ಬೆಳೆ ಬೆಳೆಯುವುದನ್ನು ಬಿಟ್ಟು ಗೋವಿನಜೋಳವನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರಲ್ಲಿ ಮುಳ್ಳುಸಜ್ಜೆ ಕಳೆಯ ಹಾವಳಿಯು ಹೆಚ್ಚಾಗಿದ್ದು, ರೈತರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಮ್ಮ ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ರೀತಿ ಮಣ್ಣಿನ ಫಲವತ್ತೆತಯ ಬಗ್ಗೆ ಜಾಗೃತಿ ವಹಿಸಬೇಕು ಎಂದರು. ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಂ.ವಿ. ಮಂಜುನಾಥ ಮಾತನಾಡಿ, ಮುಳ್ಳುಸಜ್ಜೆ ಕಳೆಯಿಂದ ಮೆಕ್ಕೆಜೋಳದಲ್ಲಿ ಶೇ. 35ರಿಂದ 40ರಷ್ಟು ಇಳುವರಿ ಕುಂಠಿತವಾಗುತ್ತದೆ. ಮುಳ್ಳುಸಜ್ಜೆ ಕಳೆಯು ಇತರ ಕಳೆಗಳಿಗಿಂತ ಹೆಚ್ಚು ಬೀಜಗಳನ್ನು ಉತ್ಪಾದಿಸುತ್ತದೆ. ಒಂದು ಮುಳ್ಳುಸಜ್ಜೆ ಕಳೆಯು ಸುಮಾರು 2000ರಿಂದ 16000ಕ್ಕೂ ಹೆಚ್ಚು ಬೀಜಗಳನ್ನು ಉತ್ಪಾದಿಸುತ್ತದೆ. ನಿಗದಿತ ಸಮಯದಲ್ಲಿ ಕೈಗಳೆ ಮತ್ತು ಮಧ್ಯಂತರ ಬೇಸಾಯವನ್ನು ಅಳವಡಿಸಿಕೊಂಡು ಮುಳ್ಳುಸಜ್ಜೆಯನ್ನು ಹತೋಟಿ ಮಾಡಬೇಕು. ಯಾವುದೇ ಗೊಬ್ಬರ, ಕೀಟನಾಶಕ ಹಾಗೂ ಕಳೆನಾಶಕಗಳನ್ನು ಉಪಯೋಗಿಸುವ ಮೊದಲು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಪೂರ್ಣ ಮಾಹಿತಿಯನ್ನು ಪಡೆದು ಉಪಯೋಗಿಸಬೇಕು ಎಂದರು. ಧಾರವಾಡ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ ಮಾತನಾಡಿ, ಆಧುನಿಕ ಕೃಷಿಗಿಂತ ಸಾವಯವ ಕೃಷಿಯಲ್ಲಿ ಕಳೆ ನಿಯಂತ್ರಣ ಬಹುಕಷ್ಟಕರವಾಗಿದೆ. ಏಕೆಂದರೆ ಕೃಷಿ ಕಾರ್ಮಿಕರ ಕೊರತೆಯಿದ್ದು, ಕೈಗಳೆ ಮಾಡುವುದು ಕಡಿಮೆಯಾಗಿದೆ. ಒಂದು ಸಲ ಕಳೆ ಬೀಜವಾದರೆ ಭೂಮಿಯಲ್ಲಿ ಏಳು ವರ್ಷಗಳ ಕಾಲದವರೆಗೆ ಇರುತ್ತದೆ. ಆದ್ದರಿಂದ ಕಳೆಗಳು ಹೂವಾಡುವ ಮೊದಲು ಕಿತ್ತು ನಾಶಪಡಿಸಬೇಕು. ಇಲ್ಲವಾದರೆ ಇಳುವರಿ ಕುಂಠಿವಾಗುತ್ತದೆ. ಸರದಿ ಬೆಳೆ ಮತ್ತು ಬೆಳೆ ಪರಿವರ್ತನೆ ಮಾಡುವುದರಿಂದ ಗೋವಿನಜೋಳ ಬೆಳೆಗೆ ಹೊಂದಿಕೊಂಡಿರುವ ಮುಳ್ಳುಸಜ್ಜೆ ಕಳೆಯನ್ನು ನಿಯಂತ್ರಣ ಮಾಡಬಹುದು ಎಂದರು. ಗೋವಿನಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಕಳೆಯ ಸಮಗ್ರ ನಿರ್ವಹಣೆಯ ಬಗ್ಗೆ ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕ ಡಾ. ಎಸ್. ಆರ್. ಸಲಕಿನಕೊಪ್ಪ ತಾಂತ್ರಿಕ ಮಾಹಿತಿ ನೀಡಿದರು. ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ, ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್.ಎಂ., ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎ.ಜಿ. ಕೊಪ್ಪದ, ಜಂಟಿ ಕೃಷಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ಕೆ., ರಾಣಿಬೆನ್ನೂರಿನ ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ., ಗೋವಿನಜೋಳ ಬೆಳೆಯುವ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ