ರೈತರು ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆವ ಪದ್ಧತಿ ರೂಡಿಸಿಕೊಳ್ಳಬೇಕು: ವಿಜ್ಞಾನಿ ಡಾ. ಪವಿತ್ರ ಎ.ಎಚ್

KannadaprabhaNewsNetwork | Published : Jan 25, 2024 2:04 AM

ಸಾರಾಂಶ

ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳ ಮಹತ್ವದ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ಪವಿತ್ರಾ ಕಡಿಮೆ ನೀರಿನಿಂದ ಹೆಚ್ಚು ಬೆಳೆಯುವ ಕೃಷಿ ಪದ್ಧತಿಯನ್ನು ನಮ್ಮ ರೈತರು ರೂಡಿಸಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಕಡಿಮೆ ನೀರಿನಿಂದ ಹೆಚ್ಚು ಬೆಳೆಯುವ ಕೃಷಿ ಪದ್ಧತಿಯನ್ನು ನಮ್ಮ ರೈತರು ರೂಡಿಸಿಕೊಳ್ಳಬೇಕು ಭಾವಿಕೆರೆ ಕೃಷಿ ಮತ್ತು ತೋಟಗಾರಿಗೆ ಸಂಶೋಧನಾ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ಪವಿತ್ರ ಎ.ಎಚ್ ಹೇಳಿದ್ದಾರೆ.ಸಮೀಪದ ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳ ಮಹತ್ವದ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪನ್ಮೂಲ ಹೆಚ್ಚಿಸಲು, ಹವಾಮಾನ ವೈಪರಿತ್ಯ ಎದುರಿಸಲು, ಜೀವ ವೈವಿಧ್ಯ ವೃದ್ಧಿ, ಕಡಿಮೆ ದರದಲ್ಲಿ ಕೃಷಿ ಸಂಪನ್ಮೂಲ ಮರು ಬಳಕೆ ಮಾಡಲು ಸಮಗ್ರ ಕೃಷಿ ಪದ್ಧತಿ ಮುಖ್ಯವಾಗಿದೆ.

ಸಮಗ್ರ ಕೃಷಿ ಪದ್ಧತಿ ಸಂಕೀರ್ಣ ವ್ಯವಸ್ಥೆಯಾಗಿದ್ದು, ಇದು ಮಣ್ಣು, ಸಸ್ಯ, ಪ್ರಾಣಿ ಉಪಕರಣ, ಬಂಡವಾಳ ಮತ್ತು ಇತರ ಪರಿಕರಗಳನ್ನು ಒಂದಕ್ಕೊಂದು ಪೂರಕವಾಗಿ ನಿರ್ವಹಣೆ ಮಾಡುವ ಕೃಷಿ ಪದ್ಧತಿಯಾಗಿದೆ ಎಂದು ಹೇಳಿದರು. ಈ ಪದ್ಧತಿಯಲ್ಲಿ ಬೆಳೆಗಳ ಸಾಗುವಳಿ ಮೂಲ ಚಟುವಟಿಕೆಯಾಗಿದ್ದು ಉಳಿದ ಚಟುವಟಿಕೆಗಳು ಪೂರಕವಾಗಿರುತ್ತವೆ. ಅಥವಾ ಇದ್ದ ಭೂಮಿಯಲ್ಲಿ ವಿವಿಧ ಕೃಷಿ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಅವು ಒಂದಕ್ಕೊಂದು ಪೂರಕ ವಾಗಿರುವುದು ಸಾಮಾನ್ಯವಾಗಿ ಈ ಪದ್ಧತಿಯಲ್ಲಿ ಬಹು ವಾರ್ಷಿಕ ಬೆಳೆಗಳ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಆಡು, ಕುರಿ ಸಾಕಾಣಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಹೀಗೆ ಮುಂತಾದ ಕೃಷಿಗೆ ಪೂರಕವಾದ ವಿವಿಧ ಚಟುವಟಿಕೆ ಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಇದರಿಂದ ಪ್ರತಿದಿನ, ಪ್ರತಿವಾರ, ಪ್ರತಿ ತಿಂಗಳು, ಪ್ರತಿವರ್ಷ ಹೀಗೆ ನಿರಂತರ ಆದಾಯವನ್ನು ರೈತರು ಪಡೆಯ ಬಹುದಾಗಿದೆ ಎಂದು ಹೇಳಿದರು.

ಕೇಂದ್ರದ ಮುಖ್ಯಸ್ಥರು ಮತ್ತು ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ,ಎಂ, ಬಸವರಾಜ್ ಮಾತನಾಡಿ ರೈತ ಒಂದೇ ಕೃಷಿ ಬೆಳೆ ಅಥವಾ ಉದ್ದಿಮೆ ಅನುಸರಿಸುತ್ತಿರುವುದರಿಂದ ನಿರಂತರ ಅದಾಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅನೇಕ ರೈತರು ಒಂದೇ ಬೆಳೆ ಮೇಲೆ ಅವಲಂಬಿತರಾಗಿದ್ದು, ಬೆಳೆ ಬೆಳೆದು ಆದರಿಂದ ಬರುವ ಆದಾಯದ ನಿರೀಕ್ಷೆಯಲ್ಲೇ ಜೀವನ ಸಾಗಿಸುತ್ತಿರುವ ರೈತರಿಗೆ ಮಾರುಕಟ್ಟೆ ಏರು-ಪೇರಿನಿಂದ ಆಗುವ ತೊಂದರೆ ಹೇಳತೀರದು. ಇದಲ್ಲದೆ ವಾತಾವರಣದ ವೈಪರಿತ್ಯದಿಂದ ಬೆಳೆ ನಾಶವಾದರೆ ಪೂರ್ತಿ ವರ್ಷ ಆದಾಯವಿಲ್ಲದೆ ನರಳಬೇಕಾಗುತ್ತದೆ, ಈ ದಿಸೆಯಲ್ಲಿ ಇರುವಂತ ಜಮೀನಿನಲ್ಲಿ ಕೃಷಿ ಬೆಳೆಗಳ ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ರೇಷ್ಮೆ ಕೃಷಿ, ಮೀನುಗಾರಿಕೆ ಮತ್ತು ಕೃಷಿಗೆ ಪೂರಕವಾದ ಉಪ ಕಸುಬುಗಳನ್ನು ಅನುಸರಿಸುವುದರಿಂದ ರೈತರಿಗೆ ಹೆಚ್ಚಿನ ವಾರ್ಷಿಕ ಆದಾಯ ಬರುತ್ತದೆ ಎಂದು ಹೇಳಿದರು.

ಕೃಷಿ ವಿಸ್ತರಣಾ ವಿಜ್ಞಾನಿಗಳಾದ ಡಾ. ಮಂಜುನಾಥ್ ಕುದರಿ ಅವರು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕಾರ್ಯಚಟುವಟಿಕೆ ಮತ್ತು ತರಬೇತಿ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಒಂದು ಎಕರೆ ಜಾಗದಲ್ಲಿರುವ ಕೃಷಿ ಬ್ರಹ್ಮಾಂಡ ಸಮಗ್ರ ಕೃಷಿ ಪದ್ಧತಿ ಮಾದರಿಯ ತೋಟಗಾರಿಕೆ ಬೆಳೆ, ಹೈನುಗಾರಿಕೆ, ಕುರಿ,ಕೋಳಿ, ಮೊಲ, ಮೀನು ಸಾಕಣಿಕೆ, ತರಕಾರಿ ಕೃಷಿ, ಎರೆಹುಳು ಗೊಬ್ಬರ ಮತ್ತು ಅಜೋಲಾ ಉತ್ಪಾದನೆಯನ್ನು ತರಬೇತಿಯಲ್ಲಿ ಭಾಗವಹಿಸಿದ್ದ ರೈತರು ವೀಕ್ಷಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕರಾದ ಅರ್ಚನಾ, ಚಿಕ್ಕಮಗಳೂರು ವಲಯದ ರೈತರು ಭಾಗವಹಿಸಿದ್ದರು.

24ಕೆಟಿಆರ್.ಕೆ.6ಃ

ತರೀಕೆರೆ ಸಮೀಪದ ಭಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ ಸಮಗ್ರ ಕೃಷಿ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳ ಮಹತ್ವದ ಕುರಿತು ಏರ್ಪಡಿಸಿದ್ದ ತರಬೇತಿಯಲ್ಲಿ ಕೃಷಿ ವಿಸ್ತರಣಾ ವಿಜ್ಞಾನಿಗಳಾದ ಡಾ. ಮಂಜು ನಾಥ್ ಕುದರಿ ಮಾತನಾಡಿದರು. ಕೇಂದ್ರದ ಮುಖ್ಯಸ್ಥರು ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ,ಎಂ, ಬಸವರಾಜ್, ಡಾ. ಪವಿತ್ರ ಎ.ಎಚ್, ಇದ್ದರು.

Share this article