ಬಹುಬೆಳೆ ಬೆಳೆಯುವತ್ತ ರೈತರು ಚಿಂತನೆ ನಡೆಸಲಿ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork |  
Published : Feb 02, 2026, 02:30 AM IST
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಭಾನುವಾರ ಆಯೋಜಿಸಲಾದ ಮೂರು ದಿನಗಳ ಫಲಪುಷ್ಪ ಪ್ರದರ್ಶನ, ಸಾವಯವ ಮೇಳಕ್ಕೆ ಶಾಸಕರಾದ ಶಿವರಾಮ ಹೆಬ್ಬಾರ ಹಾಗೂ ಭೀಮಣ್ಣ ನಾಯ್ಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಅಡಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದಿಂದಾಗಿ ಜಿಲ್ಲೆಯ ರೈತರು ಸಮಸ್ಯೆ ಎದುರಿಸುತ್ತಿರುವುದು ಒಂದೆಡೆಯಾದರೆ, ಬಹುಬೆಳೆ ಬೆಳೆಯುವತ್ತ ರೈತರು ಚಿಂತನೆ ನಡೆಸಬೇಕಾದ ಅಗತ್ಯವಿದೆ.

ಮೂರು ದಿನಗಳ ಫಲಪುಷ್ಪ ಪ್ರದರ್ಶನ, ಸಾವಯವ ಮೇಳಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಶಿರಸಿ

ಅಡಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದಿಂದಾಗಿ ಜಿಲ್ಲೆಯ ರೈತರು ಸಮಸ್ಯೆ ಎದುರಿಸುತ್ತಿರುವುದು ಒಂದೆಡೆಯಾದರೆ, ಬಹುಬೆಳೆ ಬೆಳೆಯುವತ್ತ ರೈತರು ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಭಾನುವಾರ ಆಯೋಜಿಸಲಾದ ಮೂರು ದಿನಗಳ ಫಲಪುಷ್ಪ ಪ್ರದರ್ಶನ, ಸಾವಯವ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.ದೇಶಕ್ಕೆ ಸ್ವಾತಂತ್ರ ಬಂದ ದಿನಗಳಲ್ಲಿ ಆಹಾರ ಕೊರತೆ ತೀವ್ರವಾಗಿತ್ತು. ವಿದೇಶಗಳಿಂದಲೂ ಧವಸ ಧಾನ್ಯ ತರಿಸಿಕೊಳ್ಳುತ್ತಿದ್ದ ಕಾಲದಿಂದ ನಾವು ಈಗ ಮೇಲೆ ಬಂದಿದ್ದೇವೆ. ಆಹಾರ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ ಸಾಧಿಸಿ ವಿದೇಶಗಳಿಗೂ ಸಹ ರಫ್ತು ಮಾಡುವ ಮಟ್ಟಕ್ಕೆ ದೇಶ ಇಂದು ಬೆಳೆದಿದೆ. ಜಿಲ್ಲೆಗೆ ಜಿಲ್ಲೆಗೆ ಕಾಫಿ ಬೆಳೆ ಸೂಕ್ತವಾಗಿದೆ. ಅನೇಕ ರೈತರು ಕಾಫಿ ಬೆಳೆಯತ್ತ ಸಾಗುತ್ತಿದ್ದಾರೆ. ಹೆಚ್ಚು ಹೆಚ್ಚು ಇಳುವರಿ ನೀಡುವ ಭತ್ತದ ತಳಿಗಳೂ ಈಗ ಆಗಮಿಸಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ ಎಂದರು.ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಅಡಕೆಯನ್ನು ಜಿಲ್ಲೆಯಲ್ಲಿ ಅನಾದಿಕಾಲದಿಂದಲೂ ಬೆಳೆದುಕೊಂಡು ಬರಲಾಗಿದೆ. 1977ರ ವೇಳೆ ಅಡಕೆಗೆ ಬೆಲೆಯೇ ಇಲ್ಲದ ಸ್ಥಿತಿ ಉಂಟಾಗಿತ್ತು. ಆದಾಗ್ಯೂ ಅಂದು ರೈತರು ಧೃತಿಗೆಡದೇ ಮುನ್ನಡೆದಿದ್ದಾರೆ. ಜಗತ್ತಿನಲ್ಲಿ ಯಾವ ಉದ್ಯೋಗ ಅಥವಾ ಉದ್ಯಮ ನಿಂತರೂ ಸಾರ್ವಜನಿಕರ ಜೀವನದಲ್ಲಿ ಏರುಪೇರಾಗುವುದಿಲ್ಲ. ಆದರೆ, ಕೃಷಿಕನಾದವನು ದುಡಿಮೆ ನಿಲ್ಲಿಸಿದರೆ ಮಾತ್ರ ಎಲ್ಲ ಉದ್ಯಮಗಳೂ ಅತಂತ್ರವಾಗುತ್ತವೆ. ಕೃಷಿ ಮತ್ತು ಕೃಷಿ ಉತ್ಪನ್ನಗಳಿಗೆ ಯಾವತ್ತೂ ಬೇಡಿಕೆ ಇರುತ್ತದೆ. ದೇಶ ಕಾಯುವ ಸೈನಿಕ ಹಾಗೂ ರೈತ ಮೌನವಾದರೆ ನಾಡು ಅತಂತ್ರವಾಗುತ್ತದೆ ಎಂದರು.ನಾರಿ ಶಕ್ತಿಗೆ ಸಂಬಂಧಿಸಿ ಸಮಗ್ರ ಕೃಷಿಗೆ ವೇದಾ ಹೆಗಡೆ ನೀರ್ನಳ್ಳಿ, ಅಂಕೋಲಾದಿಂದ ಸುಷ್ಮಾ ಭಟ್ಟ ನಿವಳಸೆ, ಸುಮಾ ಭಟ್ಟ ಹೊಸಗದ್ದೆ, ಪುಷ್ಪಾ ಮೋಹನ್ ಗುಲ್ಯಾವಣರ ಅವರನ್ನು‌ ಸನ್ಮಾನಿಸಲಾಯಿತು. ಜ್ಯೋತಿ ಪಾಟೀಲ, ಚಂದನ ಕೊಲ್ಲೂರಿ, ಪ್ರಸನ್ನ ಹೆಗಡೆ, ಕೆ.ಜೆ. ಚನ್ನಪ್ಪ ಕಲ್ಲೇಕರ್, ಕೃಷ್ಣ ಭಟ್ಟ, ನಾಗರಾಜ ನಾಯ್ಕ, ವಿಘ್ನೇಶ್ಬರ ಭಟ್ಟ, ಕಿರಣ ಪಾಟೀಲ, ಸತ್ಯ ಗಣಪತಿ ಹೆಗಡೆ, ಸುಬ್ರಹ್ಮಣ್ಯ ಗಾಂವಕರ್ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ‌ ಕೃಷಿ ಪ್ರಶಸ್ತಿ ನೀಡಲಾಯಿತು. ಸರ್ವೋತ್ತಮ ಪ್ರಶಸ್ತಿ ಪಡೆದ ಸತೀಶ ಹೆಗಡೆ, ನಾಗಪ್ಪ ಕೊಟ್ಟುರು, ಸಂತೋಷ ಎಕಟೆಕರ್, ರಮೇಶ ಬಿ., ಕೃಷ್ಣ ಕೊಲ್ಲೂರು ಅವರನ್ನು ಗೌರವಿಸಲಾಯಿತು.ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ ಪ್ರಾಸ್ತಾವಿಕ ಮಾತನಾಡಿ, ಫಲ ಪುಷ್ಪ‌ಮೇಳದ ಜತೆಗೆ ‌ಸಾವಯವ ಸಿರಿಧಾನ್ಯ ‌ಮೇಳ ಆಯೋಜಿಸಲಾಗಿದೆ. ನಾರಿಶಕ್ತಿ ಪರಿಕಲ್ಪನೆಯಲ್ಲಿ ಫಲ ಪುಷ್ಪ ಪ್ರದರ್ಶನ ಮಾಡಲಾಗಿದೆ. ರಫೆಲ್, ಡಾಲ್ಪಿನ್, ಎಸ್‌. 400, ಚನ್ನಭೈರಾದೇವಿ, ಸಾಲುಮರದ ತಿಮ್ಮಕ್ಕ ಪ್ರತಿಕೃತಿ, ಫುಷ್ಪ ಆಯೋಜನೆ ಮಾಡಲಾಗಿದೆ. 25 ಸಾವಿರ ಪುಷ್ಪಗಳು ಇವೆ. ಕೃಷಿ ತೋಟಗಾರಿಕಾ ಇಲಾಖೆಗೆ ಸಂಬಂಧಿತ ಮಳಿಗೆಗಳು ಇವೆ ಎಂದರು.ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್, ಪ್ರಮುಖರಾದ ಜಿ.ಆರ್. ಹೆಗಡೆ ಬೆಳ್ಳೇಕೇರಿ, ವೀರಭದ್ರ ನಾಯ್ಕ, ಎಂ.ಎನ್. ಭಟ್, ಜಗದೀಶ ಗೌಡ, ದುಶ್ಯಂತ ಕಲ್ಲೂರ, ಡಾ. ಬಿ.ಪಿ ಸತೀಶ, ಶಿವಪ್ರಸಾದ ಗಾಂವಕರ್, ಪಾಂಡು ಕೆ.ಎಚ್., ರೂಪಾ ಪಾಟೀಲ, ಕಾಶಿಂ ಸಾಬ್, ಮಧುಕರ ನಾಯ್ಕ ಮತ್ತಿತರರು ಇದ್ದರು. ಸಂಧ್ಯಾ ಭಟ್ಟ, ನಾಗವೇಣಿ ಪ್ರಾರ್ಥಿಸಿದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಗಣೇಶ ಹೆಗಡೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ