ಸಾವಯವ ಕೃಷಿ, ನಾಟಿ ಔಷಧಿ ಗಿಡಮೂಲಿಕೆ ಸಸ್ಯಗಳ ಮಹತ್ವ ಕುರಿತು ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ತರೀಕೆರೆರೈತರು ಮಿಶ್ರ ಬೆಳೆಗೆ ಹೆಚ್ಚು ಒತ್ತು ಕೊಟ್ಟು ಸಾವವಯ ಕೃಷಿಗೆ ಉತ್ತೇಜನ ನೀಡಬೇಕು ಎಂದು ಪಟ್ಟಣದ ವಿಕಸನ ಸಂಸ್ಥೆ ಸಂಸ್ಥಾಪಕ ವರ್ಗೀಸ್ ಕ್ಲೀಟಸ್ ಹೇಳಿದ್ದಾರೆ.
ವಿಕಸನ ಸಂಸ್ಥೆ, ತಿಪಟೂರು ಅಕ್ಷಯಕಲ್ಪ ಹಾಗೂ ಕೃಷಿಕರ ಬಳಗ ಸಹಯೋಜನೆಯೊಂದಿಗೆ ಪಟ್ಟಣದ ಗಾಳಿಹಳ್ಳಿ ಲಿಲ್ಲಿ ವರ್ಗೀಸ್ ಅವರ ತೋಟದ ಮನೆಯಲ್ಲಿ ಮನೆಯಲ್ಲಿ ಹೈನುಗಾರಿಕೆ, ಸಾವಯವ ಕೃಷಿ ಹಾಗೂ ನಾಟಿ ಔಷಧಿ ಗಿಡಮೂಲಿಕೆ ಸಸ್ಯಗಳ ಮಹತ್ವ ಹಾಗೂ ಪ್ರಯೋಜನ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯಿಂದ ಸ್ವಸಹಾಯ ಸಂಘದ ಮಹಿಳೆಯರಿಗೆ ಹಾಗೂ ರೈತರಿಗೆ ಬೇಕಾದ ಮಾವು, ಬೇವು, ಹಲಸು, ನೇರಳೇ, ನುಗ್ಗೆ, ಸಪೋಟ, ನಿಂಬೆ, ದಾಳಿಂಬೆ, ಇನ್ನಿತರ ಔಷಧಿ ಸಸ್ಯ ವಿತರಿಸಲಾಗುತ್ತಿದೆ.ಪ್ರತಿಯೊಬ್ಬ ರೈತರು ಏಕ ಬೆಳೆ ಪದ್ಧತಿ ಅನುಸರಿಸದೆ ಮಿಶ್ರಬೆಳೆ ರೀತಿಯಾದ ಬೆಳೆಗಳನ್ನು ಅಳವಡಿಸಿಕೊಂಡರೆ ಆಧಾಯ ಹೆಚ್ಚುತ್ತದೆ. ಕೃಷಿಯಲ್ಲಿ ಸುಸ್ಥಿರತೆ ಕಾಣಬಹುದು. ತಮ್ಮ ಹೊಲದಲ್ಲಿ ಮನೆ ಕೈ ತೋಟಗಳಲ್ಲಿ ಔಷಧಿ ಸಸ್ಯಗಳನ್ನು ಬೆಳೆದು, ಅವುಗಳ ಗುಣ ತಿಳಿದು, ತಾವೇ ಔಷಧ ತಯಾರಿಸಿ ಸಣ್ಣ ಪುಟ್ಟ ಕಾಯಿಲೆಯಿಂದ ಶೀಘ್ರ ಹಾಗೂ ಶಾಶ್ವತವಾಗಿ ಉಪ ಶಮನ ಪಡೆಯಬಹುದೆಂದು ತಿಳಿಸಿದರು.
ತೋಟಗಳಲ್ಲಿ ವೈವಿಧ್ಯಮಯ ಕೃಷಿ ಅಳವಡಿಸಿದ ರೈತರು ಸ್ವಾವಲಂಭಿಗಳಾಗಲು ಸಾಧ್ಯ. ಅಕ್ಷಯಕಲ್ಪದ ಕೃಷಿಕರ ಬಳಗದಿಂದ, ಈ ಕಾರ್ಯಕ್ರಮದಿಂದ ರೈತರಿಗೆ, ಹೆಚ್ಚು ಮಾರಾಟ, ಮೌಲ್ಯವರ್ದನೆಗೆ ಇತ್ಯಾದಿಗಳಿಗೆ ಸಹಕಾರವಾಗುತ್ತದೆ ಎಂದು ಹೇಳಿದರು,ಲಿಲ್ಲಿ ವರ್ಗಿಸ್ ಅವರು ನಾಟಿ ಔಷಧಿಗಳ ಗಿಡಗಳನ್ನು ಪರಿಚಯಿಸಿ, ಅವುಗಳ ಪ್ರಯೋಜನ ವಿವರಿಸಿ, ಆಹಾರದಲ್ಲಿ ಬಳಸುವ ಜೀರಿಗೆ, ಓಂಕಾಳು, ಬಜೆ, ಬಸಳೆ, ಜಾಯೀಕಾಯಿ, ಕಾಡುಬಸಳೆ, ಇವುಗಳ ಉಪಯೋಗ ತಿಳಿಸಿ, ಪ್ರತಿಯೊಬ್ಬರೂ ನಾಟೀ ಔಷಧಿ ಗಿಡಗಳನ್ನು ಮನೆಗಳಲ್ಲಿ ಬೆಳೆಸಲು ಪ್ರೋತ್ಸಾಹಿಸಿದರು. ವಿಕಸನ ಸಂಸ್ಥೆಯಿಂದ ರೈತರಿಗೆ ನೀಡುತ್ತಿರುವ ಔಷಧಿ ಸಸ್ಯಗಳ ಪರಿಚಯ ಮಾಡಿ, ಅವುಗಳ ಉಪಯೋಗ, ಮಾಹಿತಿ ಕರಪತ್ರ ಹಾಗೂ ಸಸ್ಯಗಳನ್ನು ವಿತರಿಸಿದರು.ವಿಕಸನ ಸಂಸ್ಥೆ ಕ್ಷೇತ್ರಾಧಿಕಾರಿ ಲಕ್ಷ್ಮಣ್ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿ, ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ತ್ಯಾಜ ವಸ್ತುಗಳಿಂದ ಹಾಗೂ ಜೀವಾಂಮೃತ, ಎರೆಹುಳು ಮತ್ತು ಅಜೋಲ ಹಾಗೂ ಜಾನುವಾರುಗಳಿಂದ ಮಾಡುವ ಕೃಷಿ ವೈವಿಧ್ಯಮಯ ಕೃಷಿಯೆಂದು ಪರಿಗಣಿಸಬಹುದು. ರೈತರು ತಮ್ಮ ಜಮೀನಿನಲ್ಲಿ ಏಕಬೆಳೆ ಪದ್ಧತಿ ಅನುಸರಿಸದೆ ಮಿಶ್ರ ಬೆಳೆ ಬೆಳೆಸಿದರೆ ತಮ್ಮ ಜಮೀನು ಸಮೃದ್ಧಿಯಾಗುತ್ತದೆ ಎಂದು ಹೇಳಿದರು. ಯಾವುದೇ ರಾಸಾಯನಿಕ ಗೊಬ್ಬರಗಳಿಂದ ಬೆಳೆಗೆ ಬೇಕಾದ ೩-೪ ಪೌಷ್ಟಿಕಾಂಶ ಮಾತ್ರ ದೊರೆಯುತ್ತದೆ. ಆದರೆ ಸಗಣಿ ಗೊಬ್ಬರ, ಗೋಮೂತ್ರ, ಎರೆ ಗೊಬ್ಬರಗಳಿಂದ 16 ಪೋಷಕಾಂಶಗಳು ಬೆಳೆಗೆ ದೊರೆತು. ಇದರೊಂದಿಗೆ ರೈತರು ತಮ್ಮ ತೋಟಗಳಲ್ಲಿ ಕೃತಕವಾಗಿ ಅಥವಾ ಸಿಮೆಂಟಿನ ತೊಟ್ಟಿಗಳ ಮೂಲಕ ಎರೇಹುಳು ಗೊಬ್ಬರ ತಯಾರು ಮಾಡಬಹುದು ಎಂದರು.ಅಕ್ಷಯಕಲ್ಪ ಬಳಗದ ತರಬೇತುದಾರ ಮಹೇಶ್ ಮಾತನಾಡಿ, ಮಾರುಕಟ್ಟೆ ಬೆಲೆಯ ಏರಿಳಿತ, ಕಾರ್ಮಿಕರ ಕೊರತೆ, ಹೈನುಗಾರಿಕೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಹಾಗೂ ತಂತ್ರಜ್ಞಾನದ ಕೊರತೆ ವಿವರಿಸಿದರು. ಕೃಷಿಯೊಂದಿಗೆ ಹೈನುಗಾರಿಕೆ ಮಾಡುವುದರಿಂದ, ಗೊಬ್ಬರ, ಹಾಲು ಇತ್ಯಾದಿಗಳಿಂದ ಆದಾಯ ಹೆಚ್ಚುವುದು ಎಂದು ತಿಳಿಸಿದರು. ಅಕ್ಷಯಕಲ್ಪ ಬಳಗದ ತರಬೇತುದಾರ ಮಹಾಲಿಂಗ,ಶಿವಮೊಗ್ಗ ಸೆಲ್ಕೋ ಸಂಸ್ಥೆ ಮುಖ್ಯಸ್ಥರಾದ ಗುರು,ಕಲಾ ಫಾರಂನ ಪ್ರಗತಿಪರ ರೈತರಾದ ಜನಾರ್ಧನ್, ವೇಣುಗೋಪಾಲ್, ಪರಮೇಶ್ವರಪ್ಪ ಮಾತನಾಡಿದರು. ವಿಕಸನ ಸಂಸ್ಥೆ ಸಿಬ್ಬಂದಿ ಹಾಗೂ ತರೀಕೆರೆ, ಬೀರೂರು, ಕಡೂರು, ಬಾಣಾವಾರ, ತಿಪಟೂರು, ಲಕ್ಕವಳ್ಳಿ, ಶಿವಮೊಗ್ಗ ಗಳಿಂದ ಸಾವಯವ ಕೃಷಿಕರು ಮತ್ತು ಪರಿಸರ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
7ಕೆಟಿಆರ್.ಕೆ.06ಃ ತರೀಕೆರೆಯಲ್ಲಿ ವಿಕಸನ ಸಂಸ್ಥೆ, ತಿಪಟೂರು ಅಕ್ಷಯಕಲ್ಪ ಹಾಗೂ ಕೃಷಿಕರ ಬಳಗ ಸಹಯೋಜನೆ ಯೊಂದಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಿಕಸನ ಸಂಸ್ಥೆ ಸಂಸ್ಥಾಪಕ ವರ್ಗೀಸ್ ಕ್ಲೀಟಸ್ ವಹಿಸಿದ್ದರು.