ಕನ್ನಡಪ್ರಭ ವಾರ್ತೆ ತಿಪಟೂರು
ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ರೈತರು ಬೆಳೆ ವೈವಿದ್ಯತೆಯ ಮಹತ್ವ ತಿಳಿಯಬೇಕು. ಶ್ರಮ ಪ್ರಧಾನ ವ್ಯವಸ್ಥೆಯಿಂದ ಹೊರಬಂದು ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡಬೇಕು. ಸಹಜ ಸಾಗುವಳಿ ಹಾಗೂ ಸಾವಯವ ಪದ್ಧತಿಯಿಂದ ಬಹು ಬೆಳೆಗಳನ್ನು ಬೆಳೆದರೆ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ಮಣ್ಣಿನ ಫಲವತ್ತತೆ ಕಾಪಾಡುವ ಎರೆಹುಳುಗಳನ್ನು ಉಳಿಸುವತ್ತ ಗಮನ ನೀಡಬೇಕು. ಭೂಮಿಯಲ್ಲಿ ಸೂಕ್ಷ್ಮ ಜೀವಿಗಳ ಉತ್ಪತ್ತಿ ಹೆಚ್ಚಿಸಿ, ಬೆಳೆಗಳು ರೋಗ- ರುಜನದಿಂದ ಹಾಳಾಗುವುದನ್ನು ತಪ್ಪಿಸಿದರೆ ಸುಸ್ಥಿರ ಬೆಳೆ ಪದ್ಧತಿ ಮುಂದುವರಿಯಲಿದೆ ಎಂದರು.
ಆದಿಚುಂಚುನಗಿರಿ ಕೃಷಿ ಕಾಲೇಜಿನ ಡೀನ್ ಡಾ. ಶಿವಲಿಂಗೇಗೌಡ ಮಾತನಾಡಿ, ಕೃಷಿ ತಜ್ಞರ ಸಲಹೆಯೊಂದಿಗೆ ಬೆಳೆ ಬೆಳೆಯಲು ರೈತರಿಗೆ ಕರೆ ನೀಡಿ ಸಾವಯವ ಹಾಗೂ ಜೈವಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸಿ ಸಾವಯವ ಕೃಷಿಯತ್ತ ರೈತರು ತಮ್ಮ ಚಿತ್ತವನ್ನು ಬೆಳೆಸಿಕೊಳ್ಳಲು ತಿಳಿಸಿದರು.ಆಂದೋಲನದಲ್ಲಿ ಕೆವಿಕೆ ತೋಟಗಾರಿಕೆ ವಿಜ್ಞಾನಿ ಡಾ.ಕೀರ್ತಿಗೌಡ ಮಾತನಾಡುತ್ತ, ಜೂನ್ ತಿಂಗಳ ಮೊದಲ ವಾರದಲ್ಲಿ ಪ್ರತಿ ತೆಂಗಿನ ಮರದ ಸುತ್ತಲೂ 5 ರಿಂದ 6 ಅಡಿ ಅಂತರದಲ್ಲಿ ಪಾತಿಗಳನ್ನು ಮಾಡಿ 25 ಕೆ.ಜಿ. ಕೊಟ್ಟಿಗೆ ಗೊಬ್ಬರ, 3 ಕೆ.ಜಿ. ಬೇವಿನ ಹಿಂಡಿ, 500 ಗ್ರಾಂ. ಯೂರಿಯಾ, 1 ಕೆ.ಜಿ. ಸಿಂಗಲ್ ಸೂಪರ್ ಪಾಸ್ಪೇಟ್, 900 ಗ್ರಾಂ. ಪೊಟ್ಯಾಷ್, 100 ಗ್ರಾಂ. ಟ್ರೈಕೋಡರ್ಮ ಮತ್ತು 50 ಗ್ರಾಂ. ಜಿಂಕ್ ಸಲ್ಪೇಟ್ ಹಾಕುವುದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಕೆವಿಕೆಯ ಡಾ.ಸಿಂಧು ಲಾಭದಾಯಕ ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು.