ಯಲ್ಲಾಪುರ: ರೈತರು ಮನೆ ಬಾಗಿಲಲ್ಲಿಯೇ ಅಡಕೆ ಮಾರಾಟ ಮಾಡದೇ, ಸಹಕಾರಿ ಸಂಘದ ಮೂಲಕ ವಿಕ್ರಿ ನಡೆಸಬೇಕು. ಸಂಘದ ಹಾಗೂ ರೈತರ ಹಿತದೃಷ್ಟಿಯಿಂದ ಇದು ಒಳ್ಳೆಯದು ಎಂದು ಇಡಗುಂದಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಕೊಡ್ಲಗದ್ದೆ ಮನವಿ ಮಾಡಿದರು.ಸೆ. ೨೩ರಂದು ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಮನೆಬಾಗಿಲಲ್ಲಿ ನಡೆಯುವ ಅಡಕೆ ಖರೀದಿಯ ಬಗ್ಗೆ ರೈತರು ಜಾಗೃತಿ ವಹಿಸಬೇಕು ಎಂದರು.ಹಸಿ ಅಡಕೆ ಟೆಂಡರ್: ಈಗ ಹೆಚ್ಚು ಹೆಚ್ಚು ಹಸಿ ಅಡಕೆಯನ್ನೇ ಟೆಂಡರ್‌ನಲ್ಲಿ ಕೊಡುವವರು ಅಧಿಕವಾಗಿ ಕಂಡುಬರುತ್ತಿದ್ದು, ಹಸಿ ಅಡಕೆ ಟೆಂಡರ್ ಆರಂಭಿಸಬೇಕು. ಅದೇ ರೀತಿ ಸಂಘದಲ್ಲಿ ಅಡಕೆ ವ್ಯಾಪಾರ ನಡೆಸಬೇಕು ಎಂಬ ಚಿಂತನೆಯನ್ನೂ ಹೊಂದಿದ್ದೇವೆ. ಸಾಧಕ- ಬಾಧಕಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ಸಂಘದ ನಿರ್ದೇಶಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ, ಸಂಘದ ಉಪಾಧ್ಯಕ್ಷ ಶಿವರಾಮ ಭಟ್ಟ ಕೋಮಡಿ ಹಾಗೂ ನಿರ್ದೇಶಕರು, ಸಿಬ್ಬಂದಿ ಹಾಗೂ ರೈತ ಸದಸ್ಯರು ಪಾಲ್ಗೊಂಡಿದ್ದರು.
ರೈತರ ಸಹಕಾರದಿಂದ ಸಂಘದ ಏಳ್ಗೆಇಡಗುಂದಿ ಸೇವಾ ಸಹಕಾರಿ ಸಂಘದ ವ್ಯವಹಾರ, ಲಾಭಾಂಶ ಹೆಚ್ಚಾಗುತ್ತಿದ್ದು ಏಳ್ಗೆಯತ್ತ ಸಾಗುತ್ತಿದೆ. ಇದಕ್ಕೆ ರೈತರ ಸಹಕಾರವೇ ಕಾರಣ ಎಂದು ಸಂಘದ ನಿರ್ದೇಶಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದರು.