ಕನ್ನಡಪ್ರಭ ವಾರ್ತೆ ಪಾಂಡವಪುರ
ಹೈನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಒಕ್ಕೂಟಗಳು ನೀಡುವ ಸೌಲಭ್ಯ ಬಳಸಿಕೊಂಡು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಂತ-4 ಕ್ಷೀರ ಸಂಜೀವಿನಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ, ಹೈನುಗಾರಿಕೆ ಕ್ಷೇತ್ರವು ಉದ್ಯಮವಾಗಿ ಬೆಳೆಯಲು ಮಹಿಳೆಯರ ಪಾತ್ರ ಮಹತ್ವದಾಗಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕುಟುಂಬಗಳು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬ ನಿರ್ವಹಣೆಗೂ ಸಹಕಾರಿಯಾಗಿದೆ ಎಂದರು.
ಹಸುಗಳ ಖರೀದಿಗಾಗಿ ಕೇಂದ್ರ ಸರ್ಕಾರ ಹಾಲು ಒಕ್ಕೂಟಗಳ ಮೂಲಕ ಕ್ಷೀರ ಸಂಜೀವಿನ ಹಂತ-4 ಯೋಜನೆಯಡಿ ಆಯ್ಕೆಯಾದ ಮಹಿಳಾ ಸಹಕಾರ ಸಂಘಕ್ಕೆ ಬಡ್ಡಿ ರಹಿತವಾಗಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು.ಹುಲ್ಕೆರೆಕೊಪ್ಪಲು ಗ್ರಾಮದ ರೈತರು ಹಾಲು ಉತ್ಪಾದನೆ ಹೆಚ್ಚಳ ಮಾಡಿದರೆ ಮತ್ತಷ್ಟು ಸೌಲಭ್ಯವನ್ನು ಒಕ್ಕೂಟಕ್ಕೆ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮನ್ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಮಹಿಳೆಯರಿಗೆ ಉದ್ಯಮ ದೊರಕಿಸಿಕೊಡುವ ಉದ್ದೇಶದಿಂದ ಹಸು ಖರೀದಿಸಲು ಮಹಿಳಾ ಸಹಕಾರ ಸಂಘದ 40 ಮಂದಿ ಫಲಾನುಭವಿಗಳಿಗೆ 6.44 ಲಕ್ಷ ರು. ಮೌಲ್ಯದ ಚೆಕ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1300 ಡೇರಿಗಳಿದ್ದು ಇದರಲ್ಲಿ 580 ಮಹಿಳಾ ಸಹಕಾರ ಸಂಘಗಳಿವೆ, ಹಂತ ಹಂತವಾಗಿ ಪ್ರತಿ ವರ್ಷವು ಹಲವು ಡೇರಿಗಳನ್ನು ಆಯ್ಕೆ ಮಾಡಿ ಸಾಲಸೌಲಭ್ಯ ನೀಡುತ್ತಿದೆ ಎಂದರು.ಇದೇ ವೇಳೆ ಕ್ಷೀರ ಸಂಜೀವಿನಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಲಾಯಿತು. ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಪಿ.ಚಲುವರಾಜು, ಸಹಕಾರಿ ಯೂನಿಯನ್ ನಿರ್ದೇಶಕ ಸಿ.ಎಸ್.ನಿಂಗೇಗೌಡ, ಡೇರಿ ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷೆ ವಿಶಾಲಾಕ್ಷ್ಮಮ್ಮ, ಮಾರ್ಗ ವಿಸ್ತರಣಾಧಿಕಾರಿ ಉಷಾ, ಮುಖಂಡ ಉದ್ಯಮಿ ಮಧುಸೂದನ್, ಗ್ರಾಪಂ ಮಾಜಿ ಅಧ್ಯಕ್ಷ ದಿವಾಕರ್, ಕಾರ್ಯದರ್ಶಿ ದೀಪಿಕ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದರು.