ಗಂಗಾ ಕಲ್ಯಾಣ ಯೋಜನೆ ರೈತರು ಬಳಕೆ ಮಾಡಿಕೊಳ್ಳಬೇಕು: ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Dec 09, 2025, 01:00 AM IST
8ಕೆಎಂಎನ್ ಡಿ27 | Kannada Prabha

ಸಾರಾಂಶ

ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹಾಗೂ ಗ್ರಾಮನಹಳ್ಳಿ ಗ್ರಾಮದಲ್ಲಿ ಗಂಗಾ ಕಲ್ಯಾಣ ಯೋಜನೆ ಜಾರಿ ಮಾಡಿದ್ದೇವೆ. ಮುಂದಿನ 15 ದಿನಗಳಲ್ಲಿ ಮಂಡ್ಯ ತಾಲೂಕಿನಲ್ಲೂ ರೈತರ ಎರಡು ಬೋರ್ ವೆಲ್‌ಗಳಿಗೆ ಒಂದು ಟಿಸಿ ಅಳವಡಿಸುವ ಕಾರ್ಯಕ್ರಮ ರೂಪಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೊಳವೆಬಾವಿ ಕೊರೆಸುವ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯನ್ನು ರೈತರು ಬಳಕೆ ಮಾಡಿಕೊಳ್ಳಬೇಕು ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ ತಿಳಿಸಿದರು.

ತಾಲೂಕಿನ ಮೊತ್ತಹಳ್ಳಿ ಗ್ರಾಮದ ಎಂ.ಕೆ.ದೊಡ್ಡಸಿದ್ದೇಗೌಡವರ ಜಮೀನಿನಲ್ಲಿ ಹಿಂದುಳಿದ ವರ್ಗಗಳ ನಿಗಮದಿಂದ ಮಂಜೂರಾಗಿರುವ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಯೋಜನೆಯಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಇರುವುದಿಲ್ಲ. ಕಡೇ ಅವಕಾಶವನ್ನು ರೈತರು ಸದುಪಯೋಗಿಸಿಕೊಳ್ಳಬೇಕು. ಇದರ ಜೊತೆಗೆ ರೈತರು ಇಪ್ಪತ್ತು ಮೂರುವರೆ ಸಾವಿರ ರು. ಸರ್ಕಾರಕ್ಕೆ ಹಣ ಕಟ್ಟಿದರೆ ಎರಡು ಬೋರ್ ವೆಲ್‌ಗಳಿಗೆ ಒಂದು ಟಿಸಿ ಹಾಕಿಕೊಡುತ್ತೇವೆ ಎಂದರು.

ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹಾಗೂ ಗ್ರಾಮನಹಳ್ಳಿ ಗ್ರಾಮದಲ್ಲಿ ಈ ಯೋಜನೆ ಜಾರಿ ಮಾಡಿದ್ದೇವೆ. ಮುಂದಿನ 15 ದಿನಗಳಲ್ಲಿ ಮಂಡ್ಯ ತಾಲೂಕಿನಲ್ಲೂ ರೈತರ ಎರಡು ಬೋರ್ ವೆಲ್‌ಗಳಿಗೆ ಒಂದು ಟಿಸಿ ಅಳವಡಿಸುವ ಕಾರ್ಯಕ್ರಮ ರೂಪಿಸುತ್ತೇವೆ. ರೈತರು ಸರ್ಕಾರಕ್ಕೆ ಹಣ ಪಾವತಿ ಮಾಡಿ ಇದರ ಉಪಯೋಗ ಪಡೆದುಕೊಳ್ಳಿ ಎಂದರು.

ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಬಿ.ಎನ್.ಬೋರೇಗೌಡ ಮಾತನಾಡಿ, ಅಂತರ್ಜಲ ಬಳಕೆಯಿಂದ ರೈತರಿಗೆ ಉಚಿತವಾಗಿ ಕೊಳವೆ ಬಾವಿ ಹಾಕಿಕೊಟ್ಟು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಯೋಜನೆಯಿಂದ ರೈತರಿಗೆ ಅನುಕೂಲವಾಗುತ್ತಿದೆ ಎಂದರು.

ಈ ವೇಳೆ ಕೊತ್ತತ್ತಿ ಗ್ರಾಪಂ ಅಧ್ಯಕ್ಷ ಮನು, ಮಾಜಿ ಅಧ್ಯಕ್ಷ ಮಧು, ಸಿದ್ದೇಗೌಡ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಪ್ರಸನ್ನ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ನಾಳೆ, ನಾಡಿದ್ದು ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಡ್ಯ: ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಯಡಿ ಶ್ರೀರಂಗಪಟ್ಟಣ ಸಮೀಪವಿರುವ ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜು ಮಾಡುವ ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಗೆ ಸೇರಿದ 66/11 ಕೆವಿ ವಿದ್ಯುತ್ ಉಪ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿಯನ್ನು ಸೆಸ್ಕ್ ವತಿಯಿಂದ ಡಿ.10 ರಂದು ಹಮ್ಮಿಕೊಂಡಿದೆ. ಸದರಿ ದಿನದಂದು ಬೆಳಗ್ಗೆ 10 ರಿಂದ ಸಂಜೆ 6ಗಂಟೆವರೆಗೆ ಪಟ್ಟಣ ಸಮೀಪವಿರುವ ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆಯ ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುವುದರಿಂದ ಮಂಡ್ಯ ನಗರಕ್ಕೆ ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ. ಮಂಡ್ಯ ನಗರ ಸಾರ್ವಜನಿಕರಿಗೆ ಡಿ.10 ಮತ್ತು 11 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನೀರು ಬಂದ ವೇಳೆ ಶೇಖರಿಸಿಟ್ಟುಕೊಂಡು ಜಲಮಂಡಳಿಯೊಂದಿಗೆ ಸಹಕರಿಸಲು ಕನನೀಸ ಮತ್ತು ಒಚ ಮಂಡಳಿ, ನಿರ್ವಹಣಾ ಉಪ-ವಿಭಾಗ, ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಟಣೆಯಲ್ಲಿ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುವರ್ಣ ಸೌಧ ಮೊಗಸಾಲೆಯಲ್ಲಿ ಡಿಕೆ ಆಪ್ತರ ಸಭೆ
ನಾಳೆ ರಾಜ್ಯ ರೈತಸಂಘದಿಂದ ಬೆಳಗಾವಿ ಚಲೋ