ಕಾರವಾರ: ಅಂಕೋಲಾ ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ಬಂದರು ನಿರ್ಮಾಣ ಯೋಜನೆಯಿಂದ ಕೇಣಿ ಮತ್ತು ಬಾವಿಕೇರಿ ಭಾಗದ ನೂರಾರು ರೈತ ಕುಟುಂಬಗಳು ಸಮೃದ್ಧ ಕೃಷಿಭೂಮಿಯನ್ನು ಕಳೆದುಕೊಂಡು ಬೀದಿಪಾಲಾಗುವ ಆತಂಕ ಎದುರಾಗಿದೆ. ಕೂಡಲೇ ಈ ಜನ ವಿರೋಧಿ ಯೋಜನೆಯನ್ನು ಕೈಬಿಡುವಂತೆ ಕೇಣಿ ಮತ್ತು ಬಾವಿಕೇರಿ ಭಾಗದ ಕೃಷಿಕರ ಪರವಾಗಿ ವಕೀಲ ಗುರು ವಿ. ನಾಯ್ಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಜನೆಯ ಬಗ್ಗೆ ಕಂಪನಿಯು ಈವರೆಗೆ ರೈತರಿಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ ನಾಯ್ಕ, ದಿನದಿಂದ ದಿನಕ್ಕೆ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಒಂದು ವೇಳೆ ರೈತರ ಜಮೀನು ಒತ್ತುವರಿ ಮಾಡಲು ಮುಂದಾದರೆ ತೀವ್ರ ಹೋರಾಟ ಮಾಡುವುದು ಖಚಿತ. ನಮ್ಮ ಜಮೀನನ್ನು ಬಂದರು ಯೋಜನೆಗೆ ನೀಡಲು ಸಾಧ್ಯವೇ ಇಲ್ಲ. ಅನಿವಾರ್ಯವಾದರೆ ಈ ಹೋರಾಟ ಬೆಂಗಳೂರಿನಿಂದ ದೆಹಲಿಯವರೆಗೂ ವ್ಯಾಪಿಸಲಿದೆ. ಈಗಾಗಲೇ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಸ್ಥಳೀಯರಾದ ಮಂಜುನಾಥ ನಾಯ್ಕ, ಯಾವುದೇ ಯೋಜನೆಯು ಜನರ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು. ಈ ಬಂದರು ಯೋಜನೆಯು ಬಂಡವಾಳಶಾಹಿಗಳಿಗೆ ಮಾತ್ರ ಲಾಭ ತರುತ್ತದೆಯೇ ಹೊರತು, ಸ್ಥಳೀಯ ರೈತರಿಗಾಗಲಿ, ಸಾರ್ವಜನಿಕರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ಈಗ ಆಶ್ವಾಸನೆ ನೀಡುತ್ತಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯೋಜನೆ ಮುಗಿಯುವಷ್ಟರಲ್ಲಿ ಬದಲಾಗಬಹುದು, ಆದರೆ ರೈತರು ಮಾತ್ರ ಬೀದಿಪಾಲಾಗುತ್ತಾರೆ. ಕೃಷಿಕರಿಗೆ ಕೇವಲ ಕಾರ್ಮಿಕರ ಹಣೆಪಟ್ಟಿ ಸಿಗಲಿದೆ " ಎಂದು ಬೇಸರ ವ್ಯಕ್ತಪಡಿಸಿದರು.ನಾವು ಈಗಾಗಲೇ ಬಂದರು ಯೋಜನೆಯ ವಿರುದ್ಧ ಮನವಿ ಸಲ್ಲಿಸಿದ್ದೇವೆ. ಬಂದರು ವಿರೋಧಿಗಳೆಲ್ಲರಿಗೂ ನಮ್ಮ ಬೆಂಬಲವಿದೆ. ಪರಿಹಾರಕ್ಕಿಂತ ಹೆಚ್ಚಾಗಿ, ಕಂಪನಿಯು ಯೋಜನೆಗೆ ಬಳಸಲಾಗುವ ಕೃಷಿ ಭೂಮಿಯ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ಈ ಕುರಿತು ಆ.22ರಂದು ಕಂಪನಿಯು ಸಾರ್ವಜನಿಕ ಅಹವಾಲು ಸಭೆ ಆಯೋಜಿಸಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಇಂತಹ ಯೋಜನೆಗಳನ್ನು ಬಂಜರು ಭೂಮಿ ಅಥವಾ ಜನವಸತಿ ಇಲ್ಲದ ಪ್ರದೇಶಗಳಲ್ಲಿ ಕೈಗೊಳ್ಳಬೇಕು. ಸಾವಿರಾರು ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿರುವ ಈ ಪ್ರದೇಶದಲ್ಲಿ ಜನರಿಗೆ ಬೇಡವಾದ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.ಉದಯ ನಾಯ್ಕ, ಅಮರ, ಸಂತೋಷ್, ನಾಗೇಶ್, ಸುರೇಶ, ಗಣೇಶ್, ಅಮರ ಪುತ್ತು ನಾಯ್ಕ, ಮೋಹನ ನಾಯ್ಕ, ಸಂದೇಶ ಎಂ ನಾಯ್ಕ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.