ಪಹಣಿ-ಆಧಾರ್ ಲಿಂಕ್ ಗಾಗಿ ರೈತರ ಪರದಾಟ

KannadaprabhaNewsNetwork |  
Published : Jun 02, 2024, 01:45 AM IST
 ಫೋಟೋ 31ಬ್ಯಾಕೋಡು 01 ಪಹಣಿಗೆ ಆಧಾರ್ ಲಿಂಕ್ ಮಾಡಿಸಲು ನಾಡ ಕಚೇರಿ ಬಳಿ ನಿಂತಿರುವ ರೈತರು | Kannada Prabha

ಸಾರಾಂಶ

ಬೆಳೆ ಪರಿಹಾರ, ಬ್ಯಾಂಕ್‌ ಸಾಲ ಹಾಗೂ ಇನ್ನಿತರ ಸರ್ಕಾರದ ಸೌಲಭ್ಯಗಳ ಪಡೆಯಲು ಪಹಣಿಗೆ ಆಧಾರ್‌ ಲಿಂಕ್‌ ಮಾಡಿಸುವುದು ಕಡ್ಡಾಯ. ಬೆಳೆ ಪರಿಹಾರ, ಬೆಳೆ ವಿಮೆಯಲ್ಲಿ ರೈತರಿಗೆ ಅನ್ಯಾಯವಾಗುವುದು ಹಾಗೂ ದುರುಪಯೋಗ ತಡೆಯಲು ಸರ್ಕಾರ ಆಧಾರ್‌ ಕಾರ್ಡ್‌ ಜೊತೆಗೆ ಪಹಣಿ ಜೋಡಿಸಲು ಮುಂದಾಗಿದೆ. ಸರ್ಕಾರದಿಂದ ನೀಡುವ ಪರಿಹಾರದ ಹಣ ಆಧಾರ್‌ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಗೆ ಹೋಗುವುದರಿಂದ ಪಹಣಿಗೆ ಆಧಾರ್‌ ಜೋಡಣೆ ಅವಶ್ಯಕವಾಗಿದೆ.

ಪ್ರದೀಪ್ ಮಾವಿನಕೈ

ಕನ್ನಡಪ್ರಭ ವಾರ್ತೆ ಬ್ಯಾಕೋಡು

ರೈತರು ತಮ್ಮ ಪಹಣಿಗೆ ಆಧಾರ್‌ ಜೊತೆ ಲಿಂಕ್‌ ಮಾಡಿಸಲು ಸರ್ಕಾರ ಜೂನ್‌ ಅಂತ್ಯದವರೆಗೆ ಗಡುವು ನೀಡಿದೆ. ಆದರೆ, ಜಿಲ್ಲಾದ್ಯಂತ ಸರ್ವರ್‌ ಸಮಸ್ಯೆಯಿಂದ ಕೃಷಿಕರು ತಮ್ಮ ಕೃಷಿ ಕಾರ್ಯಗಳ ಬಿಟ್ಟು ಪ್ರತಿ ತಾಲೂಕುಗಳಲ್ಲಿ ನಾಡಕಚೇರಿ ಎದುರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಸರ್ವರ್‌ ಸಮಸ್ಯೆಯಿಂದಾಗಿ ಸಕಾಲದಲ್ಲಿ ಒಟಿಪಿ ಬಾರದೆ ಪಹಣಿ ಲಿಂಕ್‌ ಆಗುತ್ತಿಲ್ಲ.

ಬೆಳೆ ಪರಿಹಾರ, ಬ್ಯಾಂಕ್‌ ಸಾಲ ಹಾಗೂ ಇನ್ನಿತರ ಸರ್ಕಾರದ ಸೌಲಭ್ಯಗಳ ಪಡೆಯಲು ಪಹಣಿಗೆ ಆಧಾರ್‌ ಲಿಂಕ್‌ ಮಾಡಿಸುವುದು ಕಡ್ಡಾಯ. ಬೆಳೆ ಪರಿಹಾರ, ಬೆಳೆ ವಿಮೆಯಲ್ಲಿ ರೈತರಿಗೆ ಅನ್ಯಾಯವಾಗುವುದು ಹಾಗೂ ದುರುಪಯೋಗ ತಡೆಯಲು ಸರ್ಕಾರ ಆಧಾರ್‌ ಕಾರ್ಡ್‌ ಜೊತೆಗೆ ಪಹಣಿ ಜೋಡಿಸಲು ಮುಂದಾಗಿದೆ. ಸರ್ಕಾರದಿಂದ ನೀಡುವ ಪರಿಹಾರದ ಹಣ ಆಧಾರ್‌ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಗೆ ಹೋಗುವುದರಿಂದ ಪಹಣಿಗೆ ಆಧಾರ್‌ ಜೋಡಣೆ ಅವಶ್ಯಕವಾಗಿದೆ.

ಕಳೆದ ಎರಡು ತಿಂಗಳಿನಿಂದ ರಾಜ್ಯ ಸರ್ಕಾರ ಆಧಾರ್‌ ಪಹಣಿ ಜೋಡಣೆಗೆ ಅವಕಾಶ ನೀಡಿದ್ದರೂ ಲೋಕಸಭೆ ಚುನಾವಣೆ ಇನ್ನಿತರ ಕೆಲಸಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ತೊಡಗಿಸಿಕೊಂಡಿದ್ದರಿಂದ ಆಧಾರ್‌ ಜೋಡಣೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಈಗ ಜೋಡಣೆಗೆ ಒಂದು ತಿಂಗಳು ಮಾತ್ರ ಅವಕಾಶವಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಸರ್ವರ್‌ ಸಮಸ್ಯೆ ಎದುರಾಗುತ್ತದೆ. ಸಾಗರ ತಾಲೂಕಿನ ಕರೂರು ಹೋಬಳಿಯ ಬಹುತೇಕ ಕಂದಾಯ ಗ್ರಾಮಗಳು ಕುಗ್ರಾಮವಾಗಿದ್ದು, ಕಂದಾಯ ಇಲಾಖೆಯ ಸೇವೆ ಪಡೆಯಲು ನೆಟ್ವರ್ಕ್ ಸಮಸ್ಯೆ ತೀವ್ರವಾಗಿ ಅಡ್ಡಿಯಾಗಿದೆ. ರೈತರ ಪಹಣಿಗೆ ಆಧಾರ್ ಜೋಡಿಸಲು ಮೊಬೈಲ್ ಸಂಖ್ಯೆ ಆಧಾರ್‌ಗೆ ಜೋಡಣೆಯಾಗಿರಬೇಕು. ಎರಡು ಪ್ರತ್ಯೇಕ ಒಟಿಪಿ ಬರುತ್ತವೆ. ರೈತರ ನೈಜ ಚಿತ್ರ ಅಪ್‌ಲೋಡ್ ಮೂಲಕ ಆಧಾರ್ ಜೋಡಣೆ ಪ್ರಕ್ರಿಯೆ ನಡೆಯುತ್ತದೆ. ಒಟಿಪಿ ಬರುವುದು ತಡವಾಗುವುದರಿಂದ, ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆ ಆಗದಿರುವುದು ಮತ್ತಿತ್ತರ ಸಮಸ್ಯೆಗಳಿಂದ ರೈತರು ಹೈರಾಣಗಿದ್ದಾರೆ.

ಸುಳ್ಳಳ್ಳಿ ನಾಡಕಚೇರಿಯಲ್ಲಿ ರೈತರಿಗೆ ಸಮಸ್ಯೆ :

ಪಹಣಿಗೆ ಆಧಾರ್ ಜೋಡಿಸಲು ಶುಕ್ರವಾರ ಚನ್ನಗೊಂಡ, ಕಟ್ಟಿನಕಾರು, ಮಣಕಂದೂರು, ನೆಲ್ಲಿಬೀಡು ವಿವಿಧ ಭಾಗಗಳಿಂದ ನೂರಾರು ರೈತರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಂದಾಯ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಪ್ರತಿ ನಿತ್ಯ ಪಿಂಚಣಿ ಯೋಜನೆ, ಇನ್ನಿತರ ಸೇವೆಗಳಿಗೆ ಕಂದಾಯ ನಿರೀಕ್ಷಕರಿಗಾಗಿ ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಬಗ್ಗೆ ಉಪ ತಹಸೀಲ್ದಾರ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರದ ಬರ ಪರಿಹಾರ ಬ್ಯಾಂಕ್ ಖಾತೆಗೆ ಜಮಾ ಆಗದಿರುವ ಮತ್ತಿತ್ತರ ಕಾರಣಗಳಿಂದ ಪಹಣಿಗೆ ಆಧಾರ್ ಜೋಡಣೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ಪ್ರಕ್ರಿಯೆ ವಿಳಂಬವಾಗುತ್ತಿದ್ದು ರೈತರು ಕೆಲಸ ಬಿಟ್ಟು ನಾಡ ಕಚೇರಿ ಅಲೆಯುತ್ತಿದ್ದು ಸ್ಥಳೀಯ ಶಾಸಕರು ಇತ್ತ ಗಮನ ಹರಿಸಬೇಕು ಎಂದು ಗ್ರಾಮಸ್ಥ ಮಂಜಪ್ಪ ಆಗ್ರಹಿಸಿದ್ದಾರೆ.

-----------

ಬೆಳಗ್ಗೆ ಹತ್ತು ಗಂಟೆಯಿಂದ ಆಧಾರ್ ಮತ್ತು ಪಹಣಿ ಲಿಂಕ್ ಗಾಗಿ ಊಟ- ಉಪಹಾರ ಬಿಟ್ಟು ಹಲವಾರು ರೈತರು ಕಾಯುತ್ತಿದ್ದು. ಸಂಜೆ ನಾಲ್ಕು ಗಂಟೆಯಾದರೂ ಕಾದು ಕೂರುವ ಪರಿಸ್ಥಿತಿ ಎದುರಾಗಿದೆ. ಹೀಗಾದರೂ ಉಪ ತಹಸೀಲ್ದಾರ್ ಈ ಬಗ್ಗೆ ಗಮನ ವಹಿಸದೇ ಇರುವುದು ಬೇಸರ ತಂದಿದೆ.

-ತಿಮ್ಮಪ್ಪ ಕಾಮಗಾರು. ರೈತತಾಲೂಕಿನ ಹಲವೆಡೆ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಕೆಲವು ಭಾಗಗಳಲ್ಲಿ ಸಮಸ್ಯೆ ತಲೆದೋರಿರುವ ಬಗ್ಗೆ ಗಮನಕ್ಕೆ ಬಂದಿದೆ. ಶ್ರೀಘವೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.

ಕಲೀಂ ಉಲ್ಲಾ ಖಾನ್ -ತಹಸೀಲ್ದಾರ್, ಸಾಗರಜನರಿಗೆ ಸಿಗದ ಉಪ ತಹಸಿಲ್ದಾರ್

ಕಂದಾಯ ಇಲಾಖೆ ಸೇವೆ ಪಡೆಯಲು ದಿನನಿತ್ಯ ನೂರಾರು ರೈತರು ಅಲೆಯುತ್ತಿದರೂ ರೈತರ ಸಮಸ್ಯೆಗೆ ಉಪ ತಹಸೀಲ್ದಾರ್ ಮಾಲಿನಿ ಕೈಗೆ ಸಿಗುತ್ತಿಲ್ಲ ಎಂದು ಆನಂದ ಬಾಳ ದೂರಿದ್ದಾರೆ. ಬೆಳಿಗ್ಗೆ 12ಗಂಟೆಗೆ ಕಚೇರಿ ಬರುವ ಉಪ ತಹಸೀಲ್ದಾರ್ ಮಧ್ಯಾಹ್ನ 3 ಗಂಟೆಗೆ ಕಚೇರಿಯಿಂದ ನಿರ್ಗಮಿಸುತ್ತಿದ್ದರೂ ತಾಲೂಕು ಆಡಳಿತ ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ