ಜಿ ಸೋಮಶೇಖರ
ಎಪಿಎಂಸಿಯ ಒಳ ಆವರಣದಲ್ಲಿ ತೆರೆಯಲಾದ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ 71 ಸಾವಿರ ಕ್ವಿಂಟಲ್ ರಾಗಿಯನ್ನು ರೈತರು ಮಾರಾಟ ಮಾಡಿ ಹಣ ಪಡೆಯುವ ಆಸೆ ಹೊತ್ತಿದ್ದರು. ಇದರಂತೆ ತಾಲೂಕಿನ ಉಜ್ಜಯನಿ ಕೇಂದ್ರದಲ್ಲಿ ಸಹ 24,247 ಕ್ವಿಂಟಲ್ ರಾಗಿಯನ್ನು ಆ ಭಾಗದ ರೈತರು ಮಾರಾಟ ಮಾಡಿದ್ದಾರೆ. ಈ ಎರಡು ಕೇಂದ್ರಗಳಲ್ಲಿ ಮಾರಾಟ ಮಾಡಿದ ರಾಗಿ ಮೊತ್ತ ₹49 ಕೋಟಿಯದ್ದಾಗಿದೆ. ತಿಂಗಳಾಗುತ್ತ ಬಂದರೂ ಈ ಹಣ ರೈತರಿಗೆ ತಲುಪಿಲ್ಲ. ಇದರಿಂದ ರೈತ ಸಮುದಾಯದಲ್ಲಿ ಆಕ್ರೋಶಗೊಂಡಿದೆ.
₹4886 ಬೆಂಬಲ ಬೆಲೆ ಅಡಿಯಲ್ಲಿ ರಾಜ್ಯ ಆಹಾರ, ನಾಗರಿಕ ಸರಬರಾಜು ನಿಗಮ ಈ ಭಾಗದ ರೈತರ ರಾಗಿಯನ್ನು ಖರೀದಿಸಲು ತಾಲೂಕಿನಲ್ಲಿ ಕೊಟ್ಟೂರು, ಉಜ್ಜಿಯನಿಯಲ್ಲಿ ಎರಡು ಕೇಂದ್ರ ಆರಂಭಿಸಿತ್ತು.ಮಾರ್ಚ್ 12 ರವರೆಗೆ ಮಾರಾಟ ಮಾಡಿದ ರಾಗಿಯ ಪೈಕಿ ಕೊಟ್ಟೂರು ಕೇಂದ್ರದಲ್ಲಿ ₹4.88 ಕೋಟಿ, ಉಜ್ಜಯನಿಯಲ್ಲಿನ ಮಾರಾಟ ಕೇಂದ್ರದಲ್ಲಿನ ಮಾರಾಟಕ್ಕೆ ₹1.38 ಕೋಟಿ ಪಾವತಿಯಾಗಿರುವುದು ಬಿಟ್ಟರೆ ನಂತರ ಬಂದ 50 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ರಾಗಿ ಮಾರಾಟ ಮಾಡಿದ ರೈತರಿಗೆ ಇದುವರೆಗೂ ಹಣ ಸಂದಾಯವಾಗಿಲ್ಲ.
ಆಹಾರ, ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು. ಮಾರಾಟ ಮಾಡಿದ ರೈತರ ರಾಗಿ ಬೆಲೆ ಸಂಪೂರ್ಣ ಮೊತ್ತದ ಹಣವನ್ನು ರೈತರಿಗೆ ತಲುಪಿಸಬೇಕು. ಇಲ್ಲದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಕೂಡಲೇ ಈ ನಿಟ್ಟಿನಲ್ಲಿ ಕಾಯೋನ್ಮುಖರಾಗಬೇಕೆಂದು ಎನ್ನುತ್ತಾರೆ ಸಾರ್ವಜನಿಕರು.
ಕೊಟ್ಟೂರು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ರೈತರ ರಾಗಿಗೆ ಪೂರ್ಣ ಪ್ರಮಾಣದ ಬೆಂಬಲ ಬೆಲೆಯ ಹಣ ಪಾವತಿಯಾಗಲು ಕೆಲ ಸಮಸ್ಯೆಗಳಿದ್ದವು. ಇದೀಗ ನಿವಾರಣೆ ಆಗಿದೆ. ಬರುವ ಶುಕ್ರವಾರದೊಳಗೆ ಮಾರಾಟ ಮಾಡಿದ ರೈತರಿಗೆ ಹಣ ಸಂದಾಯವಾಗಲಿದೆ ಎನ್ನುತ್ತಾರೆ ಆಹಾರ- ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕ ರಿಯಾಜ್.