ಮೆಣಸಿನಕಾಯಿ ಬೆಳೆಯಿಂದ ಹೂವಿನಹಡಗಲಿ ರೈತರು ವಿಮುಖ

KannadaprabhaNewsNetwork |  
Published : Aug 30, 2025, 01:01 AM IST
ಹೂವಿನಹಡಗಲಿ ತಾಲೂಕಿನ ಹಿರೇಮಲ್ಲನಕೆರೆ ಗ್ರಾಮದಲ್ಲಿ ರೈತ ಮಹಿಳೆ ಹನುಮವ್ವ ಮೆಣಸಿಕಾಯಿ ಬೆಳೆ ಬೆಳೆದಿರುವುದು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. | Kannada Prabha

ಸಾರಾಂಶ

ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಹೂವಿನಹಡಗಲಿ ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆಯಿಂದ ರೈತರು ವಿಮುಖರಾಗುತ್ತಿದ್ದಾರೆ. ಈ ಹಿಂದೆ 450 ಹೆಕ್ಟೇರ್‌ಗೂ ಹೆಚ್ಚು ಮೆಣಸಿಕಾಯಿ ಬೆಳೆ ಬೆಳೆಯುತ್ತಿದ್ದರು. ಈಗ 210 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯುತ್ತಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಬೆಳೆಯಿಂದ ರೈತರು ವಿಮುಖರಾಗುತ್ತಿದ್ದಾರೆ. ಈ ಹಿಂದೆ ತೋಟಗಾರಿಕೆ ಕ್ಷೇತ್ರದಲ್ಲಿ ರೈತರಿಗೆ ಅತಿ ಹೆಚ್ಚು ಲಾಭದಾಯವಾಗಿದ್ದ ಮೆಣಸಿಕಾಯಿ ಈಗ ಬೇಡವಾಗುತ್ತಿದೆ.

ಹೌದು, ತಾಲೂಕಿನ ನಾಗತಿ ಬಸಾಪುರ, ಕೆ. ಅಯ್ಯನಹಳ್ಳಿ, ವಡ್ಡನಹಳ್ಳಿ ತಾಂಡಾ, ಹಿರೇಮಲ್ಲನಕೆರೆ, ಶಿವಪುರ, ಶಿವಲಿಂಗನಹಳ್ಳಿ, ಇಟ್ಟಗಿ, ಇತರ ಭಾಗಗಳಲ್ಲಿ ರೈತರು ಹೆಚ್ಚು ಮೆಣಸಿಕಾಯಿ ಬೆಳೆಯುತ್ತಿದ್ದರು. ಆದರೆ ಮೆಣಸಿಕಾಯಿ ಬೆಳೆಗೆ ಅತಿ ಹೆಚ್ಚು ರೋಗ ತಗಲುತ್ತಿದೆ. ರೋಗ ನಿಯಂತ್ರಣಕ್ಕಾಗಿ ರೈತರು ಎಕರೆಯೊಂದಕ್ಕೆ ಲಕ್ಷಾಂತರ ರು. ವೆಚ್ಚ ಮಾಡಬೇಕಿತ್ತು. ಇದರ ಜತೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದಂತಾಯಿತು. ಮೆಣಸಿಕಾಯಿ ಬೆಳೆ ಸಹವಾಸವೇ ಬೇಡ ಎಂದು ಬಹುತೇಕ ರೈತರು ಮೆಕ್ಕೆಜೋಳ ಬೆಳೆಯತ್ತ ಮುಖ ಮಾಡಿದ್ದಾರೆ.

ಮೆಣಸಿಕಾಯಿ ಬೆಳೆಯುವ ಬಹುತೇಕ ಪ್ರದೇಶ ವ್ಯಾಪ್ತಿಯಲ್ಲಿ ಸಿಂಗಾಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನೀರು ಹರಿಯುತ್ತಿದೆ. ಇದರಿಂದ ಮೆಣಸಿಕಾಯಿ ಬೆಳೆ ಬೆಳೆಯಲು ನೀರಿನ ಸೌಲಭ್ಯ ಇತ್ತು. ಇದರಿಂದ ರೈತರು ಬ್ಯಾಡಗಿ ಕಡ್ಡಿ ಮೆಣಸಿಕಾಯಿ ತಳಿಯ ಬೆಳೆಯನ್ನು ಆಸಕ್ತಿಯಿಂದ ಬೆಳೆಯುತ್ತಿದ್ದರು.

ಎಲ್ಲ ರೀತಿಯ ತಳಿಯ ಮೆಣಸಿಕಾಯಿ ಬೆಳೆಗೆ ಹುಟ್ಟಿನಿಂದ ಕಾಯಿ ಹಣ್ಣು ಆಗುವ ವರೆಗೂ ಬೆಳೆಗೆ ರೋಗ ಅಂಟಿಕೊಂಡೇ ಇರುತ್ತದೆ. ಇದಕ್ಕಾಗಿ ರೈತರು ಅತಿಯಾದ ರಾಸಾಯನಿಕ ಔಷಧ ಬಳಕೆ ಮಾಡಬೇಕಾಯಿತು. ಬ್ಯಾಡಗಿ ಮಾರುಕಟ್ಟೆಯಲ್ಲಿ ಈ ಮೆಣಸಿನಕಾಯಿಗೆ ಬೆಲೆ ಸಿಗದ ಕಾರಣ ಬೆಳೆಗೆ ಮಾಡಿದ ಖರ್ಚೂ ಸಿಗದಂತಾಯಿತು. ಇದರಿಂದ ರೈತರು ಲಕ್ಷಾಂತರ ರು. ಸಾಲ ತೀರಿಸಲು ಹರಸಾಹಸ ಪಡುತ್ತಿದ್ದಾರೆ.

ಈ ಹಿಂದೆ 450 ಹೆಕ್ಟೇರ್‌ಗೂ ಹೆಚ್ಚು ಮೆಣಸಿಕಾಯಿ ಬೆಳೆ ಬೆಳೆಯುತ್ತಿದ್ದರು. ಈಗ ಹಿರೇಹಡಗಲಿ, ಇಟಗಿ, ಹೂವಿನಹಡಗಲಿ ಹೋಬಳಿ ಸೇರಿದಂತೆ ಇತರ ಭಾಗಗಳಲ್ಲಿ ಸೇರಿ 210 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯುತ್ತಿದ್ದಾರೆ.

ಮೆಣಸಿಕಾಯಿ ಬೆಳೆಗೆ ಕೀಟ ಬಾಧೆ, ರಸ ಹೀರುವ ಕೀಟ, ಎಲೆ ಮುಟುರು ರೋಗ, ಕೊಳೆ ರೋಗ, ಎಲೆ ಚುಕ್ಕಿ ರೋಗಗಳು ಬೆಳೆಗೆ ಕಾಡುತ್ತಿದೆ. ಈ ಎಲ್ಲ ರೋಗಗಳ ನಿಯಂತ್ರಿಸಲು ರೈತರಿಂದ ಕಷ್ಟಸಾಧ್ಯವಾಗುತ್ತಿದೆ. ಆದರಿಂದ ಮೆಣಸಿಕಾಯಿ ಬೆಳೆಯಿಂದ ವಿಮುಖರಾಗುತ್ತಿದ್ದಾರೆ.

ಸದ್ಯ ರೈತರು ಹಸಿ ಮೆಣಸಿಕಾಯಿಯನ್ನು ಮಾರುಕಟ್ಟೆಗೆ ಪೂರೈಕೆ ಮಾಡುತ್ತಿದ್ದಾರೆ. ಆದರೂ ಮಾರುಕಟ್ಟೆಯಲ್ಲಿ ರೈತರ ನಿರೀಕ್ಷೆಗೆ ತಕ್ಕಂತೆ ಬೆಲೆ ಸಿಗುತ್ತಿಲ್ಲ.

ಬೆಲೆ ಸಿಗುತ್ತಿಲ್ಲ: ಮಾರುಕಟ್ಟೆಯಲ್ಲಿ ಮೆಣಸಿಕಾಯಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಜತೆಗೆ ಬೆಳೆಯನ್ನು ಬೆಳೆಯಲು ರೈತರು ಹಾಕಿದ ಬಂಡವಾಳವೂ ಕೈಗೆ ಸಿಗುತ್ತಿಲ್ಲ. ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಕೊಳೆ ರೋಗ ಅಂಟಿಕೊಂಡರೆ ಇಡೀ ಬೆಳೆಯೇ ಸಂಪೂರ್ಣ ಹಾನಿಯಾಗುತ್ತದೆ. ಎಕರೆಯೊಂದಕ್ಕೆ ₹1 ಲಕ್ಷಗಳಷ್ಟು ಬಂಡವಾಳ ಹಾಕುತ್ತಾರೆ. ಆ ಹಣ ರೈತರ ಕೈಗೆ ಸಿಗುತ್ತಿಲ್ಲ. ಇದರಿಂದ ರೈತರು ಬೆಳೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹೂವಿನಹಡಗಲಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್‌. ನಾಗರಾಜ ಹೇಳುತ್ತಾರೆ.

ಮೆಣಸಿನಕಾಯಿ ಬೆಳೆಗೆ ವೆಚ್ಚ ಮಾಡಿದಷ್ಟು ಮರಳಿ ಹಣ ಬರುತ್ತಿಲ್ಲ. ಆದರಿಂದ ಒಣ ಕಾಯಿ ಬದಲು ಹಸಿ ಕಾಯಿಯನ್ನೇ ಹರಿದು ಮಾರಾಟ ಮಾಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ನಾವು ಬದುಕಲು ಸಾಧ್ಯ ಇಲ್ಲದಿದ್ದರೆ ಮತ್ತೆ ಸಾಲದ ಶೂಲಕ್ಕೆ ಸಿಲುಕುತ್ತೇವೆ ಎಂದು ಹಿರೇಮಲ್ಲನಕೆರೆ ಗ್ರಾಮದ ರೈತ ಮಹಿಳೆ ಹನುಮವ್ವ ಹೇಳುತ್ತಾರೆ.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ