ಬ್ಯಾಡಗಿ: ಕಳೆದ 15 ದಿನದಿಂದ ತಾಲೂಕಿನ ಸುತ್ತಮುತ್ತ ಪ್ರದೇಶದಲ್ಲಿ ಸುರಿದ ಅಕಾಲಿಕ ಮಳೆಗೆ ಸಂಪೂರ್ಣ ಬೆಳೆನಷ್ಟವಾಗಿದ್ದು ಪರಿಹಾರ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ವತಿಯಿಂದ ಸುಮಾರು 8 ಸಾವಿರಕ್ಕೂ ಅಧಿಕ ರೈತರು ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ರೈತ ಸಂಘದ ವತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರು ಮೊನ್ನೆಯಷ್ಟೇ ಎತ್ತಿನಗಾಡಿಗಳೊಂದಿಗೆ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಪರಿಹಾರಕ್ಕೆ ಆಗ್ರಹಿಸಿದ್ದರಲ್ಲದೇ, ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೇ ಹೆದ್ದಾರಿ ತಡೆ, ಜೈಲ್‌ಭರೋ ಚಳುವಳಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿತ್ತು.ಮಧ್ಯಂತರ ಪರಿಹಾರ ಘೋಷಿಸಿ:ಈ ವೇಳೆ ತಾಲೂಕಿನ ರೈತರ ಪರ ಮಾತನಾಡಿದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಕೂಡಲೇ ಶೇ.25ರಷ್ಟು ಮಧ್ಯಂತರ ಪರಿಹಾರ ನೀಡಲು ಮುಂದಾಗಬೇಕು, ಇದಕ್ಕೆ ಸ್ಪಂದಿಸದಿದ್ದರೇ ಹೋರಾಟ ಅನಿವಾರ್ಯ. ಸರ್ಕಾರಗಳನ್ನು ನಡುಗಿಸುವ ತಾಕತ್ತು ರೈತ ಸಂಘಕ್ಕಿದೆ. ನಮ್ಮ ಹಕ್ಕುಗಳನ್ನು ಪಡೆಯಲು ಒಗ್ಗಟ್ಟಾಗಿ ಹೋರಾಟ ನಡೆಸದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಗಂಗಣ್ಣ ಎಲಿ ಮಾತನಾಡಿ, ಅಕಾಲಿಕ ಮಳೆಯಿಂದ ರೈತರು ಧೃತಿಗೆಟ್ಟಿದ್ದಾರೆ. ಕೃಷಿಗಾಗಿ ಮಾಡಿದ ವೆಚ್ಚವೂ ಸಿಗದಂತಾಗಿದೆ, ಇಂತಹ ಸಂದರ್ಭ ಬಂದಾಗ ಸರ್ಕಾರಗಳ ಪಾತ್ರವೇನು? ಪರಿಹಾರಕ್ಕಾಗಿಕ್ಕಾಗಿ ರೈತರು ಯಾರನ್ನು ಹುಡುಕಿಕೊಂಡು ಹೋಗಬೇಕು? ಆಹಾರವಿಲ್ಲದೇ ದೇಶ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಕೃಷಿಯನ್ನು ನಡೆಸಿ ದೇಶದ 33 ಕೋಟಿ ಜನರಿಗೆ ಅನ್ನ ನೀಡುವ ಮೂಲಕ ಎಲ್ಲರನ್ನೂ ಬದುಕಿಸಲಿಲ್ಲವೇ? ಹಾಗಿದ್ದರೇ ಇಂದು ನಾವು ಸಾಯುತ್ತಿದ್ದೇವೆ. ಸರ್ಕಾರಗಳೇಕೆ ಮೌನ ವಹಿಸಿವೆ? ಕೃಷಿಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಇದೇನಾ? ಎಂದು ಪ್ರಶ್ನಿಸಿದರು.ಇದ್ದಲ್ಲೇ ಕೊಳೆಯುತ್ತಿವೆ ಬೆಳೆಗಳು:ಕಿರಣ ಗಡಿಗೋಳ ಮಾತನಾಡಿ, ಕಳೆದ 2023-24ನೇ ಸಾಲಿನಲ್ಲಿ ಭೀಕರ ಬರಗಾಲ ಅನುಭವಿಸಿದ್ದೇವೆ, ಸರ್ಕಾರ ಬರಗಾಲವೆಂದು ಘೋಷಿಸಿತು. ಆದರೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಯೋಜನೆಯಡಿ, ಪ್ರತಿ ಹೆಕ್ಟೇರ್‌ಗೆ ರು. 34 ಸಾವಿರ ಪರಿಹಾರದ ಹಣ ನೀಡಬೇಕಾಗಿತ್ತು. ಆದರೆ ಕೇವಲ ರು. 2500 ನೀಡಲಾಗಿದೆ. ಪ್ರಸಕ್ತ ವರ್ಷ ಅತೀವೃಷ್ಟಿಯಿಂದ ಬೆಳೆಗಳು ಹೊಲದಲ್ಲೇ ಕೊಳೆಯುತ್ತಿವೆ. ಆದರೆ ಪರಿಹಾರ ಮಾತ್ರ ಬಂದಿರುವುದಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಚಿಕ್ಕಪ್ಪ ಛತ್ರದ, ಜಾನ ಪುನೀತ್, ಮಲ್ಲೇಶಪ್ಪ ಡಂಬಳ, ಮೌನೇಶ ಕಮ್ಮಾರ, ಡಾ.ಕೆ.ವಿ. ದೊಡ್ಡಗೌಡ್ರ ಸೇರಿದಂತೆ ಇನ್ನಿತರರಿದ್ದರು.8 ಸಾವಿರಕ್ಕೂ ಅಧಿಕ ಮನವಿ: ತಾಲೂಕಿನ ಎಲ್ಲ ರೈತರ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯು ರೈತರಿಂದ ಖುದ್ದಾಗಿ ಒಟ್ಟು 8200 ಅರ್ಜಿಗಳನ್ನು ಸ್ವೀಕರಿಸಿದ್ದು ಯಥಾವತ್ತಗಿ ಅಷ್ಟೂ ಅರ್ಜಿಗಳನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು. ಇದರಿಂದ ತಹಸೀಲ್ದಾರ್ ಕಾರ್ಯಾಲಯದಲ್ಲಿ ರೈತರಿಂದ ಆಗಬಹುದಾಗಿದ್ದ ನೂಕು ನುಗ್ಗಲು ತಪ್ಪಿಸಿದಂತಾಗಿದೆ.