ರೈತರಿಗೆ ಕೂಡಲೇ ಬೆಳೆಹಾನಿ ಪರಿಹಾರ ನೀಡಲು ರೈತ ಸಂಘ ಆಗ್ರಹ

KannadaprabhaNewsNetwork |  
Published : Aug 12, 2025, 12:30 AM IST
11ಎಚ್‌ವಿಆರ್2 | Kannada Prabha

ಸಾರಾಂಶ

ಕಳೆದ ಮೂರು ತಿಂಗಳಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿ ನಲುಗಿದ್ದಾರೆ.

ಹಾವೇರಿ: ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಿಂದ ಬೆಳೆಹಾನಿಯಾಗಿದ್ದು, ಅತಿವೃಷ್ಟಿ ಬೆಳೆಹಾನಿ ಪರಿಹಾರ ಮತ್ತು ಬೆಳೆವಿಮೆ ತುಂಬಿದ ರೈತರಿಗೆ ಮಧ್ಯಂತರ ಬೆಳೆವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಕಳೆದ ಮೂರು ತಿಂಗಳಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿ ನಲುಗಿದ್ದಾರೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಭ್ರಮನಿರಸನವಾಗಿದೆ. ಕಳೆದೆರಡು ವರ್ಷಗಳ ಬರ ಮತ್ತು ನೆರೆಯಿಂದ ಪುನಶ್ಚೇತನಗೊಳ್ಳಲು ಪ್ರಯತ್ನಿಸುತ್ತಿರುವಾಗ ಈ ವರ್ಷದ ಅತಿವೃಷ್ಟಿಯಿಂದ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದಾರೆ ಎಂದರು.

ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಡಿಎಪಿ ಗೊಬ್ಬರ ಸಿಗದೇ ಪರದಾಡುವಂತಾಗಿದೆ. ಅತಿವೃಷ್ಟಿಯಿಂದ ಬೆಳೆಗಳಲ್ಲಿ ನೀರು ನಿಂತು ತೇವಾಂಶ ಹೆಚ್ಚಿ ಫಸಲು ಬಾರದಂತಾಗಿದೆ. ಆದಾಗ್ಯೂ ಜಿಲ್ಲಾಡಳಿತ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಪ್ರದೇಶವನ್ನು ಸಮೀಕ್ಷೆ ಮಾಡದೆ ಕೈಚೆಲ್ಲಿ ಕುಳಿತಿದೆ. ಕೂಡಲೇ ಬೆಳೆಹಾನಿಯಾದ ಪ್ರದೇಶವನ್ನು ಸಮೀಕ್ಷೆ ಮಾಡಿ ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ತಾಲೂಕಿನಲ್ಲಿ ಗೊಬ್ಬರ ಸಮಸ್ಯೆ ಹೇಳತೀರದಾಗಿದೆ. ಅತಿವೃಷ್ಟಿಯಿಂದ ಬೆಳೆ ರಕ್ಷಿಸಿಕೊಳ್ಳಲು ಗೊಬ್ಬರಕ್ಕೆ ಮೊರೆ ಹೋದರೆ ಜಿಲ್ಲಾದ್ಯಂತ ಯೂರಿಯಾ ಕೊರತೆಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲಾಗದೇ ರೈತರು ಸೋತು ಹೋಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಸಮರ್ಪಕ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು.

ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹3- 10 ಲಕ್ಷಗಳವರೆಗೆ ಸಾಲ ಸಿಗುವಂತೆ ಮಾಡಬೇಕು. ಹಾವೇರಿ ತಾಲೂಕಿನಲ್ಲಿ ತುಂಗಾ ಮೇಲ್ದಂಡೆ ಕಾಲುವೆ ಕಳಪೆ ಕಾಮಗಾರಿಯಿಂದ ರೈತರ ಜಮೀನಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅತಿವೃಷ್ಟಿಯಿಂದ ಅಳಿದುಳಿದ ಬೆಳೆಗಳನ್ನು ರೈತ ರಕ್ಷಿಸಿಕೊಳ್ಳಲು ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆ. ಕೃಷ್ಣಮೃಗ, ಅಡವಿ ಹಂದಿಗಳು ಮೆಕ್ಕೆಜೋಳ, ಸೋಯಾ ಅವರೆ ಬೆಳೆಗಳನ್ನು ಪ್ರತಿನಿತ್ಯ ಹಾಳು ಮಾಡುತ್ತಿವೆ. ಈ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅರಣ್ಯದ ಸುತ್ತಮುತ್ತ ತಂತಿ ಬೇಲಿ ನಿರ್ಮಿಸಿ ವನ್ಯಜೀವಿಗಳು ಹೊಲಕ್ಕೆ ಬಾರದಂತೆ ತಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಅದೇ ರೀತಿ ಹಾವೇರಿ ತಾಲೂಕಿನ ಹಾಲು ಉತ್ಪಾದಕ ರೈತರಿಗೆ ಸರಿಯಾಗಿ ಹಾಲಿನ ಹಣ ನಿಗದಿತ ಸಮಯಕ್ಕೆ ನೀಡುತ್ತಿಲ್ಲ ಮತ್ತು ಪ್ರೋತ್ಸಾಹಧನ 5- 6 ತಿಂಗಳು ಬಾಕಿ ಉಳಿಸಿಕೊಂಡಿದ್ದು, ತಕ್ಷಣ ರೈತರ ಖಾತೆಗೆ ಜಮಾ ಮಾಡಬೇಕು. ತಾಲೂಕಿನಲ್ಲಿ ನೂರಾರು ಕೆರೆಗಳಿದ್ದು, ಇವನ್ನು ತುಂಬಿಸುವ ಯಾವುದೇ ಯೋಜನೆ ಕೈಗೊಂಡಿಲ್ಲ. ಕೂಡಲೇ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉಪತಹಸೀಲ್ದಾರ್ ಎನ್.ಟಿ. ಕನವಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಮುಖಂಡರಾದ ದಿಳ್ಳೆಪ್ಪ ಮಣ್ಣೂರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಮಂಜುನಾಥ ಕದಂ, ಎಂ.ಎಚ್. ಮುಲ್ಲಾ, ಕರಬಸಪ್ಪ ನಾಗಮ್ಮನವರ, ಮಂಜಪ್ಪ ಕಡೆಮನಿ, ಕರಿಂಸಾಬ ನಾಸಿಪೂರ ಸೇರಿದಂತೆ ಇತರರು ಇದ್ದರು. ಮಧ್ಯಂತರ ಬೆಳೆವಿಮೆ ಪರಿಹಾರ ನೀಡಿ..ಪ್ರಸಕ್ತ 2025- 26ನೇ ಸಾಲಿನಲ್ಲಿ ಸಾಕಷ್ಟು ರೈತರು ಬೆಳೆವಿಮೆ ತುಂಬಿದ್ದಾರೆ. ಬೆಳೆವಿಮೆ ತುಂಬಿದ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅತಿವೃಷ್ಟಿಯಿಂದ ಬೆಳೆಹಾನಿಯಾದ ರೈತರ ಜಮೀನುಗಳನ್ನು ಸಮೀಕ್ಷೆ ಮಾಡಿ ನಿಯಮಾನುಸಾರ ಶೇ. 25ರಷ್ಟು ಮಧ್ಯಂತರ ಬೆಳೆವಿಮೆ ಪರಿಹಾರ ಕೂಡಲೇ ಬಿಡುಗಡೆಗೊಳಿಸಬೇಕು. 2024- 25ರಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ತುಂಬಿದ ರೈತರಿಗೆ ವಿಮಾ ಕಂಪನಿಯವರು ಈವರೆಗೂ ಬಿಡಿಗಾಸು ಕೊಟ್ಟಿಲ್ಲ. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾವೇರಿ ತಾಲೂಕು ಸಂಪೂರ್ಣ ನೀರಾವರಿ ಆಗಲು ಬೇಡ್ತಿ ವರದಾ ನದಿ ಜೋಡಣೆ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

PREV

Recommended Stories

ಬಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಶ್ರೀಕಾಂತ ಸ್ಪರ್ಧೆ
ಮೂಡಲಗಿ ಬ್ಯಾಂಕ್‌ನ 3 ಶಾಖೆಗಳು ಪ್ರಗತಿ ಪಥದತ್ತ