ರಾಮನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಕರಾಳವಾಗಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ರೈತರ ಪರವಾಗಿ ಬಜೆಟ್ ರೂಪಿಸಿ ಮಂಡಿಸಬೇಕು ಎಂದು ಒತ್ತಾಯಿಸಿ ಫೆ.10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಕ್ಕೊತ್ತಾಯ ಮಂಡನೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪೂಣಚ್ಚ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಪೂರ್ವಭಾವಿಯಾಗಿ ರೈತ ಸಂಘದ ಆರು ಜಿಲ್ಲೆಗಳ ವ್ಯಾಪ್ತಿಯ ಬೆಂಗಳೂರು ವಿಭಾಗೀಯ ಪದಾಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಲಾಗುತ್ತಿದೆ. ಅಂದು ರೈತರು ಟ್ರಾಕ್ಟರ್ ಮತ್ತು ಇನ್ನಿತರ ಕೃಷಿ ವಾಹನಗಳ ಪೆರೇಡ್ ಮಾಡಲಿದ್ದಾರೆ ಎಂದರು.ಕೇಂದ್ರ ಸರ್ಕಾರ ಜಾರಿಗೆ ತಂದು ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆದ ಐತಿಹಾಸಿ ಹೋರಾಟಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಗಳನ್ನು ವಾಪಸ್ ಪಡೆಯುವ ಭರವಸೆ ನೀಡಿದ್ದರು. ಜೊತೆಗೆ, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವ, ಹೋರಾಟದಲ್ಲಿ ಹುತಾತ್ಮರಾದ ರೈತರ ಕುಟುಂಬಗಳಿಗೆ ಪರಿಹಾರದ ಭರವಸೆ ನೀಡಿದ್ದರು.
ಪ್ರಧಾನಿ ಮಾತಿಗೆ ಗೌರವ ಕೊಟ್ಟ ರೈತರು ಹೋರಾಟ ಅಂತ್ಯಗೊಳಿಸಿದರು. ಆದರೆ, ಪ್ರಧಾನಿ ಮಾತ್ರ ಭರವಸೆ ಈಡೇರಿಸದೆ ಮಾತು ತಪ್ಪಿದರು. ರೈತರ ಮೇಲೆ ವಾಹನ ಹರಿಸಿ ಕೊಂದ ಕೇಂದ್ರ ಸಚಿವನ ಪುತ್ರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೆ, ಜಿ–20 ಶೃಂಗಸಭೆಯಲ್ಲಿ ಕೃಷಿ ಕಾಯ್ದೆಗಳ ಜಾರಿ ಕುರಿತು ಮತ್ತೆ ಸರ್ಕಾರ ಪ್ರತಿಪಾದನೆ ಮಾಡಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಕಿಡಿಕಾರಿದರು.ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ನೀರಾವರಿ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಕೊಟ್ಟಿಲ್ಲ. ಜಿಎಸ್‌ಟಿ ಪಾಲು ಕೊಡುವಲ್ಲೂ ವಿಳಂಬ ಮಾಡುತ್ತಿದೆ. ಇದೆಲ್ಲದರ ಕುರಿತು ಹಕ್ಕೋತ್ತಾಯ ಮಂಡಿಸಿ, ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರವಿಕಿರಣ ಪೂಣಚ್ಚ ಹೇಳಿದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹ:ವಿಭಾಗೀಯ ಉಪಾಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಗಾಗಿ ಪಾದಯಾತ್ರೆ ಮಾಡಿದ ಕಾಂಗ್ರೆಸ್ ನಾಯಕರು, ಅಧಿಕಾರಕ್ಕೇರುತ್ತಿದ್ದಂತೆ ಯೋಜನೆಯನ್ನು ಮರೆತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಯೋಜನೆಗೆ ರಾಜ್ಯ ಸರ್ಕಾರದ ಆದಷ್ಟು ಬೇಗ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ರೇಷ್ಮೆ ಗೂಡಿನ ಮಾರುಕಟ್ಟೆ ಕಿರಿದಾಗಿದೆ. ಅಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ. ಹಾಗಾಗಿ, ಹೊಸ ಮಾರುಕಟ್ಟೆ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಇಲ್ಲಿನ ಮಾರಕಟ್ಟಯನ್ನು ಅಲ್ಲಿಗೆ ಸ್ಥಳಾಂತರ ಮಾಡಬೇಕು. ಸರ್ಕಾರದ ಬರದ ಬೆಳೆ ಹಾನಿ ಪರಿಹಾರವನ್ನು ಭಿಕ್ಷೆ ರೂಪದಲ್ಲಿ ಕೇವಲ 2 ಸಾವಿರ ನೀಡುತ್ತಿದೆ. ಇದರ ಬದಲು ಹಾನಿ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್ ಮಾದೇಗೌಡ, ವಿವಿಧ ಜಿಲ್ಲೆಗಳ ಮುಖಂಡರಾದ ರಮ್ಯ ರಾಮಣ್ಣ, ಚಂದ್ರಶೇಖರ್, ಲಕ್ಷ್ಮೀನಾರಾಯಣ ರೆಡ್ಡಿ, ಶಂಕರಪ್ಪ, ನಾರಾಯಣ ಸ್ವಾಮಿ, ಮುನಿರಾಜು, ನಾಗರತ್ನಮ್ಮ, ರಾಮೇಗೌಡ, ಲೋಕೇಶ್, ಶಿವಲಿಂಗಯ್ಯ, ಎಸ್.ಪಿ. ಮಠ ಇತರರಿದ್ದರು.
20ಕೆಆರ್ ಎಂಎನ್ 5.ಜೆಪಿಜಿಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪೂಣಚ್ಚ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.