ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ರೈತ ಸಂಘ ಒತ್ತಾಯ

KannadaprabhaNewsNetwork |  
Published : Jun 26, 2024, 12:34 AM IST
,ರೈತಸಂಘ ಒತ್ತಾಯ. | Kannada Prabha

ಸಾರಾಂಶ

ಬಿತ್ತನೆ ಸಂದರ್ಭದಲ್ಲಿ ಬೀಜಗಳ ದರ ಹೆಚ್ಚಿಸಲಾಗಿದ್ದು, ಇದರಿಂದ ರೈತರು ಬಳಲು ವಂತಾಗಿದೆ. ವಿಶೇಷವಾಗಿ ಮೆಕ್ಕೆಜೋಳ ಬೀಜದ ದರ ಅತಿಯಾಗಿ ಹೆಚ್ಚಿಸಲಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳು ಕಳೆದ ವಷರ್ಕ್ಕಿಂತ ೪ ಕೆಜಿ ಪ್ಯಾಕೆಟ್ ದರವನ್ನು ₹೨೦೦-೩೦೦ ಹೆಚ್ಚುಮಾಡಿದೆ.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಜನರಿಗೆ ಬೇಕಾದ ಅಗತ್ಯವಸ್ತುಗಳ ಬೆಲೆ ಹೆಚ್ಚಾಗಿದ್ದು, ಅದನ್ನು ತಕ್ಷಣ ಇಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನ ಹರಿಸಬೇಕು. ಹಾಗೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿ ರೈತರ ಕೃಷಿ ಕಾರ್ಯಕ್ಕೆ ಸಮಸ್ಯೆ ಉಂಟಾಗುತ್ತಿದ್ದು ತಕ್ಷಣ ಇಳಿಸಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟನ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಶಿರಾಳಕೊಪ್ಪ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ರೈತಸಂಘದ ಪದಾಧಿಕಾರಿಗಳು, ತೈಲ ಬೆಲೆ ತಕ್ಷಣ ಇಳಿಸಬೇಕು ಎಂದು ಆಗ್ರಹಿಸಿದ ಪುಟ್ಟನಗೌಡರು, ಬಿತ್ತನೆ ಸಂದರ್ಭದಲ್ಲಿ ಬೀಜಗಳ ದರ ಹೆಚ್ಚಿಸಲಾಗಿದ್ದು, ಇದರಿಂದ ರೈತರು ಬಳಲು ವಂತಾಗಿದೆ. ವಿಶೇಷವಾಗಿ ಮೆಕ್ಕೆಜೋಳ ಬೀಜದ ದರ ಅತಿಯಾಗಿ ಹೆಚ್ಚಿಸಲಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳು ಕಳೆದ ವಷರ್ಕ್ಕಿಂತ ೪ ಕೆಜಿ ಪ್ಯಾಕೆಟ್ ದರವನ್ನು ₹೨೦೦-೩೦೦ ಹೆಚ್ಚುಮಾಡಿದೆ. ಆದರೆ ಅದಕ್ಕೆ ತಕ್ಕಂತೆ ರೈತರು ಬೆಳೆಯುವ ಬೆಳೆಗಳ ದರವೂ ವೈಜ್ಞಾನಿಕವಾಗಿ ಹೆಚ್ಚಾಗಬೇಕು. ಸರ್ಕಾರ ಈ ಕುರಿತು ಚಿಂತಿಸಬೇಕು. ಜೊತೆಗೆ ಕಳಪೆ ಗೊಬ್ಬರ ಸರಬರಾಜು ಆಗುತ್ತಿದ್ದರಿಂದ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಬೆಳೆ ಪರಿಹಾರ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಕಾಯುವಂತಾಗಿದ್ದು, ವಿದ್ಯುತ್ ಸಮಸ್ಯೆ, ಕೊಳವೆ ಬಾವಿಗೆ ಈ ಹಿಂದೆ ಇದ್ದ ಅಕ್ರಮ ಸಕ್ರಮ ಪದ್ಧತಿ ಜಾರಿಗೊಳಸಬೇಕು ಎಂದರು.

ಜಿಲ್ಲಾ ರೈತಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿಂದ ರೈತರು ಬಳಲುತ್ತಿದ್ದಾರೆ. ಮೆಕ್ಕೆಜೋಳ ಬೆಳೆಯುವಂತಹ ಜಮೀನನ್ನು ಅಡಿಕೆ ತೋಟ ಎಂದು ಪಾಣಿಯಲ್ಲಿ ನಮೂದಿಸಲಾಗಿದ್ದು, ಇದರಿಂದ ಪರಿಹಾರ ಬಾರದಂತಾಗಿದೆ. ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳು ನಿಂತುಹೋಗುವ ಸ್ಥಿತಿ ನಿಮಾರ್ಣವಾಗಿದೆ. ಮಾಳಗೊಂಡನಕೊಪ್ಪ ಶಾಲೆ ಶಿಕ್ಷಕರು ಮಕ್ಕಳಿಗೆ ಸರ್ಕಾರ ಕೊಡುವಂತಹ ಯಾವುದೇ ಸೌಕರ್ಯ ಒದಗಿಸುತ್ತಿಲ್ಲ. ಈ ಕುರಿತು ಶಿಕ್ಷಣ ಸಚಿವರಿಗೆ ಹಾಗೂ ಹಲವಾರು ಬಾರಿ ಬಿಇಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಶಿಕಾರಿಪುರ ತಾಲೂಕು ರೈತಸಂಘದ ಅಧ್ಯಕ್ಷ ರಾಜಣ್ಣ ಮಾತನಾಡಿ, ರಾಜ್ಯ ಸರ್ಕಾರ ರೈತರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಕೃಷಿ ಉಪಕರಣದ ದರ ದುಬಾರಿ ಆಗಿದ್ದು, ಯಾವುದೇ ಸಹಾಯ ಧನ ದೊರಕುತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಇಲಾಖೆ ಲೈನ್ ಸರಿಪಡಿಸಬೇಕು. ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ತುಂಬಿಸುವ ಕಾರ್ಯ ಹಾಗೂ ಅದಕ್ಕೆ ಸಂಬಂಧಿಸಿದ ಪೈಪುಗಳನ್ನು ಈಗಲೇ ದುರಸ್ತಿ ಮಾಡಿ ಸಮಪರ್ಕವಾಗಿ ನೀರುಬರುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕು ರೈತಸಂಘದ ಕಾರ್ಯದರ್ಶಿ ರಾಜಣ್ಣ ತಾಳಗುಂದ ಸ್ವಾಗತಿಸಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ