ಸರ್ಕಾರ,ಜಿಲ್ಲಾಡಳಿತವನ್ನು ಎಚ್ಚರಿಸಲು ರೈತಸಂಘದಿಂದ ಬಾರ್ ಕೋಲ್ ಚಳವಳಿ

KannadaprabhaNewsNetwork |  
Published : Nov 13, 2025, 12:30 AM IST
ಸರ್ಕಾರ,ಜಿಲ್ಲಾಡಳಿತ ಎಚ್ಚರಿಸಲು ರೈತಸಂಘ ಬಾರ್ ಕೋಲ್ ಚಳುವಳಿ | Kannada Prabha

ಸಾರಾಂಶ

ರೈತರ ಹಲವು ಬೇಡಿಕೆಗಾಗಿ ರೈತಸಂಘ ಕಳೆದ ಮೂವತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದೆ. ಆದರೆ ಸರ್ಕಾರದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ್ದರೂ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ.

ಗುಂಡ್ಲುಪೇಟೆ: ಕೆರೆಗಳಿಗೆ ನೀರು ತುಂಬಿಸಲು ಹಾಗೂ ಸಾಗುವಳಿ ಚೀಟಿಗಾಗಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಮೂವತ್ತು ದಿನ ತುಂಬಿದರೂ ಸರ್ಕಾರ, ಜಿಲ್ಲಾಡಳಿತ ಕ್ರಮ ವಹಿಸದ ಹಿನ್ನೆಲೆ ಬಾರ್ ಕೋಲ್ ಚಳವಳಿಯನ್ನು ಬುಧವಾರ ರೈತಸಂಘ ನಡೆಸಿತು.

ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹಾಗೂ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್ ನೇತೃತ್ವದಲ್ಲಿ ರೈತಸಂಘದ ಕಾರ್ಯಕರ್ತರು ಬಾರ್ ಕೋಲ್ ಹಿಡಿದು ಹೆದ್ದಾರಿಯಲ್ಲಿ ಪ್ರತಿಭಟಿಸುವ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತ, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.

ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ರೈತರ ಹಲವು ಬೇಡಿಕೆಗಾಗಿ ರೈತಸಂಘ ಕಳೆದ ಮೂವತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದೆ. ಆದರೆ ಸರ್ಕಾರದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ್ದರೂ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ ಎಂದು ಅಬ್ಬರಿಸಿದರು.

ಸರ್ಕಾರ, ಜಿಲ್ಲಾಡಳಿತ ರೈತರ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲವಾದ ಹಿನ್ನೆಲೆ ರೈತರು ಬಾರ್ ಕೋಲ್ ಮೂಲಕ ನಿದ್ರೆಯಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ. ಇನ್ನೂ ಎಚ್ಚೆತ್ತುಕೊಳ್ಳ‌ದಿದ್ದಲ್ಲಿ ನಾಳೆ(ಗುರುವಾರ) ಪೊರಕೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

೧೮ಕ್ಕೆ ಬಹಿರಂಗ ಸಭೆ: ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸ್ಪಷ್ಟ ಉತ್ತರ ನೀಡದ ಕಾರಣ ಬರುವ ನ.೧೮ ರಂದು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರೈತರ ಬಹಿರಂಗ ಸಭೆ ನಡೆಸಲು ತಾಲೂಕು ರೈತಸಂಘ ತೀರ್ಮಾನಿಸಿದೆ ಎಂದರು.

ಬಾರ್ ಕೋಲ್ ಪ್ರತಿಭಟನೆಯಲ್ಲಿ ರೈತರಾದ ಲೋಕೇಶ್, ಶಿವಣ್ಣ, ನಾಗರಾಜು, ಮಹದೇವಸ್ವಾಮಿ, ನಾಗರಾಜು, ಸುರೇಶ್, ಶಿವಪ್ರಕಾಶ್, ಪ್ರಸಾದ್ ಸೇರಿದಂತೆ ಹಲವರಿದ್ದರು.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ