ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ, ಜಿಲ್ಲೆಯ ನಾಲ್ಕು ವಲಯ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಕಾಡಿನಿಂದ ಹೊರ ಬಂದು ಜನ- ಜಾನುವಾರುಗಳನ್ನು ಬಲಿ ಪಡೆಯುತ್ತಿವೆ, ಇದರಿಂದ ರೈತರು ಭಯಭೀತರಾಗಿದ್ದಾರೆ ಎಂದರು.ಸಮಸ್ಯೆಗಳನ್ನು ಹೇಳಿಕೊಳ್ಳೋಣ ಎಂದರೆ ಕೇಂದ್ರ ಸ್ಥಾನದಲ್ಲಿ ಸಿಸಿಎಫ್ ಅವರೇ ಇಲ್ಲ, ಜೊತೆಗೆ ಸಿಬ್ಬಂದಿ ಹಾಗೂ ಪರಿಕರಗಳ ಕೊರತೆ ಇದ್ದು, ಬೋನ್ ಇಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ, ಕೂಡಲೇ ಸಿಸಿಎಫ್ ನೇಮಿಸಬೇಕು, ಸಿಬ್ಬಂದಿಯನ್ನು ನೇಮಿಸಿ ಜನ- ಜಾನುವಾರುಗಳನ್ನು ರಕ್ಷಿಸಬೇಕು, ಇಲ್ಲದಿದ್ದರೆ ಉಸ್ತುವಾರಿ ಸಚಿವರ, ಜನಪ್ರತಿನಿಧಿಗಳ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಜಯ್ ಕುಮಾರ್ ಮಾತನಾಡಿ, ಹೆಗ್ಗೋಠಾರ ಗ್ರಾಮದ ಬೆಟ್ಟದ ಹತ್ತಿರ ಕಾಡು ಪ್ರಾಣಿ ದಾಳಿಗೆ ಹಸು ಬಲಿಯಾಗಿದೆ, ಜೀವನೋಪಾಯಕ್ಕಾಗಿ ಸಾಕಿರುವ ಹಸು ಕಳೆದುಕೊಂಡು ಬಡ ರೈತನ ಕುಟುಂಬ ಕಂಗಾಲಾಗಿದೆ, , 2-3 ತಿಂಗಳಿಂದ ಇದು 6ನೇ ಬಲಿಯಾಗಿದೆ, ಜನ ಪ್ರಾಣ ಭಯದಿಂದ ಜೀವಿಸುವಂತಾಗಿದೆ. ಹೆಗ್ಗೋಠಾರ, ಕಲ್ಪುರ ವ್ಯಾಪ್ತಿಯಲ್ಲಿ 2 ತಿಂಗಳ ಅಂತರದಲ್ಲಿ 7- 8 ಹಸುಗಳು ಕಾಡು ಪ್ರಾಣಿ ದಾಳಿಗೆ ಬಲಿಯಾಗಿವೆ, ಅರಣ್ಯ ಇಲಾಖೆಯವರು ಹುಲಿ, ಚಿರತೆ ಸೆರೆ ಹಿಡಿದು ರೈತರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದು. ಸಿಬ್ಬಂದಿ ಕೊರತೆ ಎಂದು ಅಸಹಾಯಕರಾಗಿದ್ದಾರೆ. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮೇಲಾಜಿಪುರ, ರಘು ಕಲ್ಪುರ, ಮಹೇಶ್, ಮುರುಗೇದ್ರಸ್ವಾಮಿ, ಲೋಕೇಶ್ ಹಳೇಪುರ, ಮಹೇಶ್, ತಮಯಪ್ಪ, ದೊರೆಸ್ವಾಮಿ, ಸಂಜಯ್ ಇತರರು ಭಾಗವಹಿಸಿದ್ದರು.