ಕೈಕೊಟ್ಟ ಮುಂಗಾರು ಹಿಂಗಾರು ಮೇವಿಗಾಗಿ ರೈತರ ಅಲೆದಾಟ

KannadaprabhaNewsNetwork | Published : Apr 2, 2024 1:03 AM

ಸಾರಾಂಶ

ಒಂದು ಎತ್ತಿನಬಂಡಿಗೆ ₹5 ಸಾವಿರ, ಟ್ರಾಕ್ಟರ್‌ಗೆ ₹10-15 ಸಾವಿರ ಕೊಟ್ಟು ಮೇವು ತರಬೇಕು. ಇನ್ನು ಕೆಲವೆಡೆ ಮಾಲಕರು ಹೇಳಿದ ದರ ಕೊಟ್ಟು ಮೇವು ತರುವ ಪರಿಸ್ಥಿತಿ ಇದೆ.

ಸಿ.ಕೆ. ನಾಗರಾಜ ದೇವನಕೊಂಡ

ಮರಿಯಮ್ಮನಹಳ್ಳಿ: ಮುಂಗಾರು ಹಾಗೂ ಹಿಂಗಾರು ಕೈಕೊಟ್ಟಿರುವುದರಿಂದ ರೈತರ ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ತೀವ್ರ ಬರ ಆವರಿಸಿದೆ. ಇದರಿಂದ ರೈತರು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಬರಗಾಲದ ಪರಿಣಾಮ ಈಗ ದನಕರುಗಳಿಗೆ ಮೇವಿನ ಕೊರತೆ ಎದುರಾಗಿದೆ.

ತಾಲೂಕಿನ ಕೆಲ ಹೋಬಳಿಗಳಲ್ಲಿ ಬರದ ತೀವ್ರತೆ ಎಷ್ಟಿದೆ ಎಂದರೆ ದನಕರುಗಳ ಸಂಕಷ್ಟ ನೋಡಲಾಗದ ರೈತರು ಭತ್ತದ ಹುಲ್ಲು, ಒಣಕಲು ಮೆಕ್ಕಿಜೋಳದ ದಂಟು, ಶೇಂಗಾ ಬಳ್ಳಿ ಸೇರಿದಂತೆ ಇತರೆ ಮೇವನ್ನು ಹತ್ತಾರು ಕಿ.ಮೀ. ದೂರದಿಂದ ಎತ್ತಿನ ಬಂಡಿ, ಟ್ರಾಕ್ಟರ್‌ಗಳಲ್ಲಿ ಖರೀದಿಸಿ ತರುತ್ತಿದ್ದಾರೆ.

ಒಂದು ಎತ್ತಿನಬಂಡಿಗೆ ₹5 ಸಾವಿರ, ಟ್ರಾಕ್ಟರ್‌ಗೆ ₹10-15 ಸಾವಿರ ಕೊಟ್ಟು ಮೇವು ತರಬೇಕು. ಇನ್ನು ಕೆಲವೆಡೆ ಮಾಲಕರು ಹೇಳಿದ ದರ ಕೊಟ್ಟು ಮೇವು ತರುವ ಪರಿಸ್ಥಿತಿ ಇದೆ. ಹೀಗೆ ಕೊಂಡ ಮೇವನ್ನು ಟ್ರಾಕ್ಟರ್‌ ಲೋಡ್‌, ಅನ್‌ಲೋಡ್‌ ಮಾಡಲು, ಹಳ್ಳಿಗಳಿಗೆ ವಾಹನದಲ್ಲಿ ಸಾಗಣೆ ಮಾಡಲು ಹೆಚ್ಚುವರಿ ₹10- 15 ಸಾವಿರ ಖರ್ಚು ತಗುಲುತ್ತದೆ. ಇದಲ್ಲದೇ ಮೇವನ್ನು ಲೋಡ್‌ ಅನ್‌ಲೋಡ್‌ ಮಾಡುವ ಕಾರ್ಮಿಕರಿಗೆ ಪ್ರತ್ಯೇಕ ವೇತನ, ಊಟ, ತಿಂಡಿಯ ಖರ್ಚು ಸೇರಿ 40-42 ಸಾವಿರ ವೆಚ್ಚವಾಗುತ್ತದೆ ಎಂದು ಜಾನುವಾರುಗಳನ್ನು ಹೊಂದಿರುವ ರೈತರು ವ್ಯಥೆ ಪಡುತ್ತಿದ್ದಾರೆ. ಅಷ್ಟು ಹಣ ನೀಡುತ್ತೇವೆ ಎಂದರೂ ಮೇವು ಮಾತ್ರ ಸಿಗುತ್ತಿಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ಇನ್ನು ಎರಡು ತಿಂಗಳು ಬೇಸಿಗೆ ಇರಲಿದೆ. ಈ ವೇಳೆಯಲ್ಲಿ ದನಕರುಗಳ ಗತಿ ಏನು ಎಂಬ ಚಿಂತೆ ರೈತರನ್ನು ಕಾಡುತ್ತದೆ. ದನಕರುಗಳು, ಎಮ್ಮೆ, ಎತ್ತು ಹೊಂದಿರುವ ರೈತರು ಮೇವು ಖರೀದಿಗಾಗಿ ಎಲ್ಲೆಡೆ ಅಲೆದಾಟ ನಡೆಸಿದ್ದಾರೆ. ಬಹುತೇಕ ಎಲ್ಲೆಡೆ ಮೇವಿನ ಬರ ಕಂಡು ಬರುತ್ತಿದ್ದು, ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದು ಜನರಿಗೆ ತೀವ್ರ ತೊಂದರೆಯಾಗಿದೆ.

ದುಬಾರಿ ಮೇವು ಖರೀದಿಸಲು ಬಡ ರೈತರು ಪರದಾಡುತ್ತಿದ್ದಾರೆ. ಭೂಮಿ ಇದ್ದವರು ದನಕರುಗಳಿಗೆ ಮೇವು ಸಾಲುತ್ತಿಲ್ಲ ನಾವು ಮಾರಾಟ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಭೂಮಿ ಇಲ್ಲದವರು ಮೇವು ಖರೀದಿಸಲು ಆಗದೇ ದನಕರುಗಳನ್ನು ಮಾರಾಟ ಮಾಡಲು ಆಗದೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

ಸತತ ಬರಗಾಲದಿಂದ ತತ್ತರಿಸಿದ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ದನಕರುಗಳಿಗೆ ಮೇವು ಹೊಂದಿಸುವುದೇ ದೊಡ್ಡ ಸಮಸ್ಯೆಯಾಗಿದೆ.

ಸರ್ಕಾರ ಮೇವು ಸಂಗ್ರಹ ಮಾಡಿ ಸಹಾಯಧನದ ರೂಪದಲ್ಲಿ ರೈತರಿಗೆ ನೆರವಾಗಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವುದು ರೈತರ ಆಗ್ರಹ.

ಎರಡು ಎತ್ತುಗಳು ಮನೆಯಲ್ಲಿ ಇದ್ದರೆ ಅವುಗಳಿಗೆ ಒಂದು ವರ್ಷಕ್ಕೆ ಕನಿಷ್ಠ 8-10 ಬಂಡಿ ಮೇವು ಬೇಕಾಗುತ್ತದೆ. ಕನಿಷ್ಠ ₹40-50 ಸಾವಿರ ಮೊತ್ತದ ಮೇವು ಖರೀದಿಸಬೇಕಾಗುತ್ತದೆ. ಮೇವು ಅಷ್ಟೇ ಅಲ್ಲ ಎತ್ತುಗಳಿಗೆ ಕಾಳು ಹಾಕಬೇಕು. ಶೇಂಗಾ ಬಳ್ಳಿ, ಮೆಕ್ಕಿಜೋಳ ನುಚ್ಚಿಗಾಗಿ ₹15 ಸಾವಿರ ಖರ್ಚು ಮಾಡಲಾಗುತ್ತದೆ. ವರ್ಷಕ್ಕೆ ಎರಡು ಎತ್ತುಗಳಿಗೆ ಕನಿಷ್ಠ ₹75-90 ಸಾವಿರ ಖರ್ಚು ಆಗಲಿದೆ ಎನ್ನುತ್ತಾರೆ ಮರಿಯಮ್ಮನಹಳ್ಳಿ ರೈತ ಸೋಮೇಶ್‌.

Share this article