ಕನ್ನಡಪ್ರಭ ವಾರ್ತೆ ಕನಕಪುರ
ಚುಂಚಿ ಕಾಲೋನಿಯಲ್ಲಿರುವ ಶ್ರೀ ಸಾಯಿ ವಿದ್ಯುತ್ ಉತ್ಪಾದನಾ ಘಟಕದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದಾಗಿ ಹೇಳಿ ಮೋಸದಿಂದ ದಲಿತರ ಭೂಮಿಯನ್ನು ಕಬಳಿಸಿ ಪವರ್ ಹೌಸ್ ನಿರ್ಮಾಣ ಮಾಡಲಾಗಿದೆ. ಅವರಿಗೆ ಯಾವುದೇ ಪರಿಹಾರ ನೀಡದೇ ಅನ್ಯಾಯ ಮಾಡಿದ್ದಾರೆ. ವಿದ್ಯುತ್ ಘಟಕ ಸ್ಥಾಪನೆ ವೇಳೆ ರೈತರಿಂದ ಭೂಮಿ ಬರೆಸಿಕೊಂಡು ಅವರಿಗೆ ಹಣ ನೀಡದೆ ವಂಚಿಸಿರುವುದರಿಂದ ದಲಿತರ ಬದುಕು ಬೀದಿಗೆ ಬಿದ್ದಿದೆ. ರೈತರು ತಮ್ಮ ಜಮೀನಿಗೆ ಹೋಗಲು ಸಾಧ್ಯವಾಗದೆ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂಮಿ ಕಳೆದುಕೊಂಡ ರೈತ ಪುಟ್ಟಮರೀಗೌಡ ಮಾತನಾಡಿ, ನಮ್ಮ ಜಮೀನಿನಲ್ಲಿ ನಾಲೆ ಹಾದು ಹೋಗಿದ್ದು ಯಾವುದೇ ಪರಿಹಾರವನ್ನೂ ನೀಡಿಲ್ಲ, ನಾಳೆಯ ಕೆಳಗಡೆ ಇರುವ ಜಮೀನುಗಳಿಗೆ ಹೋಗಲು ಸೇತುವೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದಾಗಿ ಹೇಳಿ ಪರಿಹಾರವನ್ನೂ ನೀಡಿಲ್ಲ. ನಾಲೆಗೆ ತಡೆಗೋಡೆ ನಿರ್ಮಾಣ ಮಾಡದೇ ದನ ಕರುಗಳು ಪ್ರವಾಸಿಗರ ಕಾರುಗಳು ಬಿದ್ದು ಅನಾಹುತಗಳು ಸಂಭವಿಸಿವೆ. ಸೇತುವೆ ಇಲ್ಲದೆ ನಾಲೆ ಕೆಳಗೆ ಇರುವ ಜಮೀನಿನಲ್ಲಿ ವ್ಯವಸಾಯ ಮಾಡದೆ ರೈತರು ಕಂಗಾಲಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ನಮ್ಮ ಜಮೀನಿನ ಮೇಲೆ ಅರವತ್ತಾರು ಕೆ ವಿ ವಿದ್ಯುತ್ ಕಂಬಗಳು ಹಾದು ಹೋಗಿದ್ದು, ಅದರ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ಬಾಳೆ ಗಿಡಗಳಿಗೆ ವಿದ್ಯುತ್ ಪ್ರಸರಿಸುವ ಸಾಧ್ಯತೆ ಇದೆ. ಜಮೀನಿನಲ್ಲಿ ಮೂರು ಸಾವಿರದ ಐನೂರು ಬಾಳೆ ಗಿಡಗಳನ್ನು ಹಾಕಿದ್ದು, ಸುಮಾರು ಹದಿನೈದು ದಿನಗಳಿಂದ ಬಾಳೆ ಗಿಡಗಳು ನೀರಿಲ್ಲದೆ ಸೊರಗುತ್ತಿವೆ. ಎಷ್ಟೇ ಮನವಿ ಮಾಡಿದರೂ ಯಾರೂ ಕೂಡ ಗಮನ ಹರಿಸಿಲ್ಲ ಎಂದು ಪ್ರಕಾಶ್ ಹಾಗೂ ದೇವೇಗೌಡ ಅಳಲು ತೋಡಿಕೊಂಡರು.