ಎಂ. ಪ್ರಹ್ಲಾದ್ ಕನಕಗಿರಿ
ಹೌದು, ಹಗಲು ರಾತ್ರಿ ಎನ್ನದೆ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದರಿಂದ ರೈತ ಕಂಗಾಲಾಗಿದ್ದಾನೆ. ತಾಲೂಕಿನ ನವಲಿ, ಕನಕಗಿರಿ ಹಾಗೂ ಹುಲಿಹೈದರ ಹೋಬಳಿ ಕೇಂದ್ರಗಳಲ್ಲಿ ಅತಿಯಾದ ಮಳೆಯಿಂದ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಬೆಳೆಗಳು ಕೊಳೆಯುತ್ತಿವೆ. ತಾಲೂಕಿನಲ್ಲಿ ತೊಗರಿ ಬೆಳೆ ಯಥೇಚ್ಛವಾಗಿ ಬೆಳೆದಿದ್ದು, ಹೊಲದಲ್ಲಿ ನೀರು ನಿಂತು ಬೆಳೆ ಹಾಳಾಗಿದೆ.
ಇನ್ನೂ ತೊಗರಿ ಬೆಳೆಯ ಹೂವು ಉದುರುತ್ತಿದ್ದರಿಂದ ರೈತ ಚಿಂತೆಗೀಡಾಗಿದ್ದಾನೆ. ಇದರ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಿಸಿದರೂ ಹೂವು ಉದುರುವಿಕೆ ನಿಲ್ಲುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಪ್ರತಿ ಹೆಕ್ಟೇರ್‌ಗೆ ಲಕ್ಷಾಂತರ ಖರ್ಚು ಮಾಡಿರುವ ಅನ್ನದಾತ ಕೈ ಸುಟ್ಟುಕೊಂಡು ಕೊರಗುತ್ತಿದ್ದಾನೆ.ಹತ್ತಿಗೂ ಇಲ್ಲ ಪರಿಹಾರ:ಒಂದೂವರೆ ತಿಂಗಳ ಹಿಂದೆ ಮಳೆ ಸಹಿತ ಗಾಳಿಗೆ ಹತ್ತಿ ಬೆಳೆಯ ಕಾಯಿಗಳು ಗಿಡದಲ್ಲಿಯೆ ಕೊಳೆತು ಹೋಗಿದ್ದವು. ಈ ಬಗ್ಗೆ ರೈತರು ಮೇಲಧಿಕಾರಿಗಳ ಗಮನಕ್ಕೆ ತಂದಾಗ ಪರಿಶೀಲಿಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿತ್ತು. ಅದಾಗ್ಯೂ ಹಾನಿಗೊಳಗಾದ ರೈತರಿಗೆ ನಯಾಪೈಸೆ ಪರಿಹಾರ ಬಂದಿಲ್ಲ.
ಎರಡ್ಮೂರು ತಿಂಗಳಿಂದ ಮೂರು ಬಾರಿ ಭತ್ತದ ಬೆಳೆ ನೆಲಕಚ್ಚಿದೆ. ಅಧಿಕಾರಿಗಳು ಗದ್ದೆಗೆ ಬಂದು ಜಿಪಿಎಸ್ ಮಾಡಿಕೊಂಡು ಹೋಗಿದ್ದಾರೆ. ಆದರೆ ಇದುವರೆಗೂ ಪರಿಹಾರ ಬಂದಿಲ್ಲ. ಈ ಬಗ್ಗೆ ಮೇಲಧಿಕಾರಿಗಳನ್ನು ಕೇಳಿದರೆ ಪರಿಹಾರದ ಮೊತ್ತ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಬೆಳೆ ನಷ್ಟ ಪರಿಹಾರದ ಒಂದು ರು. ಬಂದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ರೈತರಿಗೆ ಪರಿಹಾರ ನೀಡಿ ನೆರವಾಗಬೇಕು ಎಂದು ರೈತ ಶರಣಬಸವ ತಿಳಿಸಿದ್ದಾರೆ.