ಸಂದೀಪ್ ವಾಗ್ಲೆ
ಈ ಕಾಲದಲ್ಲಿ ಒಂದೆರಡು ಹಸು ಸಾಕುವುದೇ ಕಷ್ಟ. ಅಂಥದ್ದರಲ್ಲಿ ಯಾವುದೇ ವಾಣಿಜ್ಯ ರೂಪದ ಲಾಭವಿಲ್ಲದೆ, ಕಷ್ಟ- ನಷ್ಟವಾದರೂ ಗೋವಿನ ಮೇಲಿನ ಪ್ರೀತಿಯಿಂದ ಕೇವಲ ಊರಿನ (ಮಲೆನಾಡ ಗಿಡ್ಡ) ತಳಿಯ 38ಕ್ಕೂ ಅಧಿಕ ಹಸು, ಕರು, ಹೋರಿಗಳನ್ನು ಸಾಕುತ್ತಿರುವ ಅತ್ಯಂತ ಅಪರೂಪದ ಕುಟುಂಬ ಇದು. ಇಡೀ ಕರಾವಳಿಯಲ್ಲೇ ಕಮರ್ಶಿಯಲ್ ಅಲ್ಲದ ಇಷ್ಟು ದೊಡ್ಡ ಮಟ್ಟದ ಗೋಸಾಕಣೆ ತೀರ ಅಪರೂಪ.
ಅಳಿವಿನ ಅಂಚಿನಲ್ಲಿರುವ ಊರಿನ ಗೋ ತಳಿಯನ್ನು ಉಳಿಸುತ್ತಿರುವ, ನಿಸ್ಪೃಹತೆಯಿಂದ ಗೋ ಸಾಕಣೆಯಲ್ಲಿ ನಿರತರಾಗಿರುವವರು ಸುಳ್ಯದ ಐವರ್ನಾಡಿನ ವಿಕ್ರಮ್ ಪೈ ಹಾಗೂ ಅವರ ತಂದೆ ವಿಶ್ವನಾಥ ಪೈ. ಊರಿನ ತಳಿ (ಮಲೆನಾಡು ಗಿಡ್ಡ) ಬಿಟ್ಟರೆ ಬೇರೆ ಹಸುಗಳನ್ನೇ ಅವರು ಸಾಕಿಲ್ಲ ಎನ್ನುವುದು ವಿಶೇಷ.ವಿಕ್ರಮ್ ಪೈ ಅವರ ತಂದೆ ವಿಶ್ವನಾಥ ಪೈ ಅವರಿಗೆ ಈಗ 80ರ ಇಳಿ ವಯಸ್ಸು. ಗೋಸಾಕಣೆಯನ್ನು ಈಗ ಮಗ ವಿಕ್ರಂ ಪೈ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 1969ರಲ್ಲಿ ಕುಟುಂಬದ ಪಾಲಿನಲ್ಲಿ ವಿಶ್ವನಾಥ ಪೈ ಅವರಿಗೆ ಕೇವಲ 2 ಮಲೆನಾಡ ಗಿಡ್ಡ ಹಸುಗಳು ಸಿಕ್ಕಿದ್ದವು. ಬರೋಬ್ಬರಿ 55 ವರ್ಷ ಕಳೆದು, ಈಗ ಇರುವ ಎಲ್ಲ ಅವರ ಹಸು, ಕರು, ಹೋರಿಗಳು ಆ ಹಸುಗಳ ಸಂತತಿಯದ್ದೇ ಆಗಿರುವುದು ವಿಶೇಷ. 2 ದನಗಳನ್ನು ದೇವಾಲಯಕ್ಕೆ ಶಿವಾಭಿಷೇಕಕ್ಕೆ ದಾನ ಮಾಡಿದ್ದು ಬಿಟ್ಟರೆ ಇಷ್ಟೂ ವರ್ಷಗಳ ಕಾಲ ಒಂದೇ ಒಂದು ಹಸು, ಕರುವನ್ನೂ ಅವರು ಮಾರಾಟ ಮಾಡಿದ್ದೇ ಇಲ್ಲ.
ಕೇವಲ 3-4 ತಿಂಗಳ ಹಿಂದೆ ವಿಕ್ರಮ್ ಪೈ ಅವರ ಕೊಟ್ಟಿಗೆಯಲ್ಲಿ ಬರೋಬ್ಬರಿ 98 ಊರಿನ ತಳಿಯದ್ದೇ ಹಸುಗಳು ಇದ್ದವು. ನೋಡಿಕೊಳ್ಳಲು ಜನರಿಲ್ಲದೆ 4 ತಿಂಗಳ ಹಿಂದೆ ಅನಿವಾರ್ಯವಾಗಿ 50ಕ್ಕೂ ಅಧಿಕ ಹಸು, ಕರು ಹೋರಿಗಳನ್ನು ಸಿದ್ದಗಂಗಾ ಮಠಕ್ಕೆ ದಾನವಾಗಿ ನೀಡಿದ್ದಾರೆ. ಉಳಿದ 38 ಗೋವುಗಳನ್ನು ಈಗ ಸಾಕುತ್ತಿದ್ದಾರೆ. ಇವುಗಳ ಪೈಕಿ 10 ಹಾಲು ಕೊಡುತ್ತಿದ್ದರೆ, 20ಕ್ಕೂ ಅಧಿಕ ಕರುಗಳು, ಏಳೆಂಟು ಹೋರಿಗಳಿವೆ.
ವಿಶೇಷವೆಂದರೆ ಇವರು 55 ವರ್ಷಗಳಿಂದ ಕೃತಕ ವಿಧಾನಗಳ ಮೂಲಕ (ಇಂಜೆಕ್ಷನ್ ಇತ್ಯಾದಿ) ಗರ್ಭಧಾರಣೆ ಮಾಡಿದ್ದೇ ಇಲ್ಲ. ಬೆಳಗ್ಗೆದ್ದು ಗುಡ್ಡೆಗೆ ಎಲ್ಲ ಗೋವುಗಳನ್ನು ಬಿಡುತ್ತಾರೆ. ಜತೆಗೆ ಹೋರಿಗಳೂ ಇರುವುದರಿಂದ ನೈಸರ್ಗಿಕ ಲೈಂಗಿಕ ವಿಧಾನದಲ್ಲೇ ಹಸುಗಳು ಗರ್ಭ ಧರಿಸುತ್ತವೆ. ಹೀಗಾಗಿ ಅತ್ಯಂತ ಶುದ್ಧ ರೀತಿಯ ಮಲೆನಾಡು ಗಿಡ್ಡ ತಳಿಯನ್ನು ಈ ಮೂಲಕ ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ಬೆಳಗ್ಗೆ ಬಿಟ್ಟ ದನಗಳು ಸಂಜೆ ವೇಳೆಗೆ ಹುಲ್ಲು ಮೇಯ್ದು ಮನೆಗೆ ಮರಳುತ್ತವೆ.
ಊರಿನ ದನ ಸಹಜವಾಗಿ ಹಾಲು ಕೊಡುವುದು ಕಡಿಮೆ. 98 ಹಸುಗಳಿದ್ದಾಗ 2-3 ಲೀಟರ್ ಅಷ್ಟೇ ಮಾರಾಟ ಮಾಡುತ್ತಿದ್ದರು. ಈಗ 10 ಹಾಲು ಕೊಡುವ ದನಗಳಿದ್ದರೂ ಮನೆ ಉಪಯೋಗಕ್ಕೆ ಮಾತ್ರ ಹಾಲು ಕರೆಯುವುದು ಬಿಟ್ಟರೆ ಮಾರಾಟ ಮಾಡುತ್ತಿಲ್ಲ. ಎಲ್ಲ ಹಾಲು ಕರುಗಳಿಗೇ ಮೀಸಲು.
ವಿಶೇಷವೆಂದರೆ ಅವರ ಊರಿನಲ್ಲಿ ಎದೆ ಹಾಲು ಸಿಗದ ಮಕ್ಕಳ ಪೋಷಕರಿಗೆ ದನವನ್ನು ನೀಡಿ ಅದು ಹಾಲು ನಿಲ್ಲಿಸಿದ ನಂತರ ವಾಪಸ್ ದನ ಪಡೆದುಕೊಳ್ಳುತ್ತಿದ್ದರು. ಈಗಲೂ ಈ ಕಾಯಕ ಮುಂದುವರಿದಿದೆ.