ಕೃಷಿ ಕಾಯಕ ನೆಮ್ಮದಿ ಬದುಕಿಗೆ ಪ್ರೇರಣೆ: ಡಾ.ಸುರೇಶ

KannadaprabhaNewsNetwork | Published : Jan 15, 2024 1:47 AM

ಸಾರಾಂಶ

ವ್ಯವಸಾಯದಲ್ಲಿ ಬೆಳವಣಿಗೆಯಾಗದ ಹೊರತು ದೇಶಾಭಿವೃದ್ಧಿ ಆಗಲಾರದು ಎಂದು ನಿವೃತ್ತ ಡೀನ್‌ ಡಾ. ಸುರೇಶ್‌ ಪಾಟೀಲ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಬೀದರ್‌ನ ವಿಟಿಎಸ್‌ ಸಭಾಂಗಣದಲ್ಲಿ ಒಕ್ಕಲಿಗ ಮುದ್ದಣ್ಣನವರ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ಶರಣರು ಕಾಯಕಕ್ಕೆ ಎಲ್ಲಿಲ್ಲದ ಮಹತ್ವ ನೀಡಿ ಕಾಯಕವೇ ಕೈಲಾಸ ಎಂಬ ತತ್ವ ಕೊಟ್ಟಿದ್ದು ರೋಮಾಂಚಕಾರಿ ಸಂಗತಿಯಾಗಿದೆ. ಶರಣ ಒಕ್ಕಲಿಗ ಮುದ್ದಣ್ಣ ತನ್ನ ಕೃಷಿ ಕಾಯಕ ಮಾಡುತ್ತ 12 ವಚನಗಳನ್ನು ನಮಗೆ ನೀಡಿರುವುದು ನಮ್ಮ ಭಾಗ್ಯ ಎಂದು ನಿವೃತ್ತ ಡೀನ್‌ (ಕೃಷಿ ವಿಶ್ವವಿದ್ಯಾಲಯ ರಾಯಚೂರು) ಡಾ. ಸುರೇಶ ಪಾಟೀಲ್‌ ನುಡಿದರು.

ವಿಟಿಎಸ್‌ ಸಭಾಂಗಣದಲ್ಲಿ ವಚನ ಚಾರಿಟೇಬಲ್‌ ಸೊಸೈಟಿ ಹಮ್ಮಿಕೊಂಡಿದ್ದ ಒಕ್ಕಲಿಗ ಮುದ್ದಣ್ಣನವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಅನಿವಾರ್ಯ. ಕೃಷಿ ಬೆಳವಣಿಗೆಯಾಗದ ಹೊರತು ದೇಶಾಭಿವೃದ್ಧಿ ಆಗಲಾರದು ನನ್ನ ಎಲ್ಲಾ ಚಟುವಟಿಕೆಗಳಿಗಿಂತ ಕೃಷಿ ಕಾಯಕ ಮುಖ್ಯವೆಂದು ನುಡಿದರು.

ಬೀದರ್‌ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಮಾತನಾಡಿ, ಒಕ್ಕಲಿಗ ಮುದ್ದಣ್ಣ ಬಿಜಾಪೂರ ಜಿಲ್ಲೆಯ ಜೋಳದ ಹಾಳಿಯವರು. ಬೆಳೆದ ಬೆಳೆಗೆ ರಾಜರಿಗೆ ಕರ ಕೊಡುವುದು ಸಹಜ. ಹೆಚ್ಚಿಗೆ ಬೆಳೆದ ಬೆಳೆಗೆ ಕರ ನಿರಾಕರಿಸಿ ದಾಸೋಹ ಕೊಡಮಾಡಿದ ಎದೆಗಾರಿಕೆಯ ಶರಣರಿವರು. ಲೌಕಿಕ-ಪಾರಮಾರ್ಥಿಕದಲ್ಲಿ ಶಾಂತಿ ನೆಮ್ಮದಿ ಕಂಡ 12ನೇ ಶತಮಾನದ ಶರಣರು ಇವರಾಗಿದ್ದರು ಎಂದರು.

ಕೃಷಿ ಕಾಯಕ ಗೌರವ ಸನ್ಮಾನವನ್ನು ಸ್ವೀಕರಿಸಿದ ಮನ್ನಳ್ಳಿ ಆದರ್ಶ ಸಾವಯವ ರೈತರಾದ ಭೀಮರೆಡ್ಡಿ ಮಾಣಿಕರೆಡ್ಡಿ ಕೊತ್ತ ಮಾತನಾಡಿ, ಇಂದು ಸಾವಯವ ಕೃಷಿ ಮಾಡುವುದು ಕಷ್ಟಕರ ಕಾರ್ಯ. ಒಂದಡೆ ಪರಿಸರ ಇನ್ನೊಂದಡೆ ಮಾರುಕಟ್ಟೆ ತೊಂದರೆಯಿಂದಾಗಿ ನಮ್ಮಂಥವರ ಪರಿಸ್ಥಿತಿ ಕಗ್ಗಂಟಾಗಿದೆ. ಆದರೂ ಕೃಷಿ ಕಾಯಕ ಶ್ರೇಷ್ಠ ಕಾರ್ಯ. ಇದರಿಂದ ಆರ್ಥಿಕವಾಗಿ ಸಮೃದ್ಧವಾಗದಿದ್ದರೂ ಸಂಸಾರ ಮಾತ್ರ ಸಂತೃಪ್ತಿಯಿಂದ ಮುನ್ನಡೆಸಬಹುದಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ವಚನ ಚಾರಿಟೇಬಲ್‌ ಸೋಸೈಟಿ ಅಧ್ಯಕ್ಷರಾದ ಲಿಂಗಾರತಿ ಅಲ್ಲಮಪ್ರಭು ನವಾದಗೇರೆ ಮಾತನಾಡಿ, ಶರಣರ ವಿಚಾರ ಧಾರೆ ನಿಜ ಜೀವನಕ್ಕೆ ಪರುಷ ಇದ್ದಂತೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ವೈಚಾರಿಕತೆ ನೆಲೆಯ ವಿಚಾರ ಹಂಚಿಕೊಂಡು ಸುಂದರ ಬದುಕು ಸಾಗಿಸಲು ಇಂತಹ ಶರಣರ ಜಯಂತಿ ಅತ್ಯಂತ ಪ್ರಸ್ತುತ ಎಂದು ನುಡಿದರು. ಸಮಾರಂಭದಲ್ಲಿ ಶಿವಶಂಕರ ಟೋಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿರೂಪಾಕ್ಷ ದೇವರು ವಚನ ಪ್ರಾರ್ಥನೆ ಮಾಡಿದರೆ, ಶಂಕರೆಪ್ಪಸಜ್ಜನಶೆಟ್ಟಿ ಬೂದೆರಾ ಸ್ವಾಗತಿಸಿ ರೇವಣಪ್ಪ ಮೂಲಗೆ ನಿರೂಪಿಸಿದರೆ ವೀರಪ್ಪ ಜೀರ್ಗೆ ವಂದಿಸಿದರು.

Share this article