ತಪ್ಪಾದ ಉಪವಾಸ ಕ್ರಮಗಳಿಂದ ಹಾನಿ । ಉಪವಾಸದ ಆಚರಣೆಗೆ ಸರಿಯಾದ ಮಾರ್ಗದರ್ಶನ ಅಗತ್ಯಕನ್ನಡಪ್ರಭ ವಾರ್ತೆ ಗೋಕರ್ಣ
ಅಶೋಕೆಯ ಮೂಲಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಮಂಗಳವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಉಪವಾಸದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಉಪವಾಸದಲ್ಲಿ ಹಲವಾರು ವಿಧಗಳಿದ್ದು, ನಾವು ಯಾವುದಾದರೂ ವಿಷಯದಲ್ಲಿ ತಲ್ಲೀನರಾದಾಗ ನಡೆಯುವ ಉಪವಾಸ ಒಂದು ರೀತಿಯಾದರೆ, ಧರ್ಮಶಾಸ್ತ್ರದ ಪ್ರಕಾರ ಮೂರು ರೀತಿಯ ಉಪವಾಸಗಳಿದ್ದು, ದಿನದಲ್ಲಿ ಎರಡು ಹೊತ್ತು ಮಾತ್ರ ಊಟ ಮಾಡಿ, ನಡುವೆ ಯಾವುದೇ ಆಹಾರ ಸ್ವೀಕರಿಸದಿರುವುದು ನಿತ್ಯೋಪವಾಸ ಎನಿಸಿಕೊಂಡರೆ, ಏಕಾದಶಿ, ಶಿವರಾತ್ರಿಗಳಲ್ಲಿ ಮಾಡುವ ಉಪವಾಸವು ವ್ರತೋಪವಾಸ ಹಾಗೂ ಕೃಚ್ಛ್ರ ಎಂಬ ಉಪವಾಸ ವಿಧಿಯು ಪಾಪವನ್ನು ತೊಳೆದುಕೊಳ್ಳುವ ವಿಧವಾಗಿದ್ದು, ಶಾಸ್ತ್ರಗಳಲ್ಲಿ ಅನೇಕ ವಿಧವಾದ ಕೃಚ್ಛ್ರ ಉಪವಾಸವನ್ನು ಸೂಚಿಸಲಾಗಿದ್ದು, ಬೇರೆಬೇರೆ ಪಾಪಗಳನ್ನು ತೊಳೆದುಕೊಳ್ಳಲು ಇರುವ ಪ್ರಾಯಶ್ಚಿತ್ತ ಉಪವಾಸಗಳು ಇವಾಗಿವೆ ಎಂದರು.
ಆಯುರ್ವೇದ ಶಾಸ್ತ್ರವೂ ಉಪವಾಸವನ್ನು ಹೇಳಿದ್ದು, ಊಟವನ್ನು ಸರಿಯಾಗಿ ಮಾಡಿದರೆ ಹಲವು ರೋಗಗಳ ಪರಿಹಾರ. ಊಟದಿಂದ ಪರಿಹಾರವಾಗದಿರುವುದು ಉಪವಾಸದಿಂದ ಪರಿಹಾರ ಮಾಡಿಕೊಳ್ಳಲು ಸಾಧ್ಯ ಮತ್ತು ಊಟ ಹಾಗೂ ಉಪವಾಸ ಎರಡರಲ್ಲಿಯೂ ಪರಿಹಾರವಾಗದಿರುವುದಕ್ಕೆ ಮಾತ್ರ ಆಯುರ್ವೇದ ಔಷಧವನ್ನು ಸೂಚಿಸುತ್ತದೆ ಎಂದರು.ತಪ್ಪಾದ ರೀತಿಯಲ್ಲಿ ಅಥವಾ ಅತಿಯಾಗಿ ಉಪವಾಸ ಮಾಡಿದರೆ ಸಂಧಿನೋವು, ದೇಹದ ದುರ್ಬಲತೆ, ಬಾಯಾರಿಕೆ, ಹಸಿವಿನ ನಾಶ, ರುಚಿ ಕಡಿಮೆಯಾಗುವುದು, ಮಾನಸಿಕ ಅಸಮತೋಲನ ಮುಂತಾದ ಸಮಸ್ಯೆ ಉಂಟಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಚಿಕಿತ್ಸೆಯ ಉದ್ದೇಶದಿಂದ ಉಪವಾಸ ಮಾಡಬಾರದು ಹಾಗೂ ಧಾರ್ಮಿಕ ಉಪವಾಸಗಳನ್ನೂ ಕೂಡ ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು. ಗರ್ಭಿಣಿಯರು, ಮಕ್ಕಳು, ವೃದ್ಧರು, ದುರ್ಬಲರು, ಅತಿಹಸಿವು ಅಥವಾ ಬಾಯಾರಿಕೆ ಇರುವವರು ಮತ್ತು ಕೆಲವು ಕಾಯಿಲೆಗಳಿರುವವರು ಸ್ವಯಂಪ್ರೇರಿತವಾಗಿ ಉಪವಾಸ ಮಾಡಬಾರದು ಎಂದು ಎಚ್ಚರಿಸಿದರು.
ಖ್ಯಾತ ಉದ್ಯಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯ ಸಂಕೇಶ್ವರ ದಂಪತಿ ಶ್ರೀಕರಾರ್ಚಿತ ರಾಮಪೂಜೆ, ಗೋಪೂಜೆಗಳಲ್ಲಿ ಭಾಗವಹಿಸಿ, ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಸಿದ್ದಾಪುರ ಹವ್ಯಕ ಮಂಡಲದ ಭಾನ್ಕುಳಿ, ಇಟಗಿ, ದೊಡ್ಮನೆ, ಚಪ್ಪರಮನೆ, ತಾಳಗುಪ್ಪ ಇಡುವಾಣಿ ವಲಯಗಳ ಪರವಾಗಿ ಬಿ.ಎಸ್.ಮಂಜುನಾಥ ಶರ್ಮಾ ದಂಪತಿ ಗುರುಭಿಕ್ಷಾ ಸೇವೆ ನೆರವೇರಿಸಿದರು. ಕೆ.ಎನ್. ಮಂಜುನಾಥ ಭಟ್, ಶಾಂತಾರಾಮ ಹಿರೇಮನೆ, ಜಯಂತಿ ಹೆಗಡೆ, ರಾಘವೇಂದ್ರ ಹೆಗಡೆ ಮುಸವಳ್ಳಿ, ದಿನ ಪ್ರಧಾನರಾಗಿ ರಾಧಾಕೃಷ್ಣ ಭಟ್ ದಂಪತಿ ಉಪಸ್ಥಿತರಿದ್ದರು.