ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

KannadaprabhaNewsNetwork |  
Published : Nov 13, 2024, 12:46 AM IST
ರಿಯಾಜ್ ತಹಶೀಲ್ದಾರ್ | Kannada Prabha

ಸಾರಾಂಶ

ಬೆಳಗಾವಿಯಲ್ಲಿ ತಡರಾತ್ರಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಆಟೋ ಚಾಲಕನ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ಬೆಳಗಾವಿ ಮಾರುತಿ ನಗರದ ಬಳಿಯ ಎಸ್‌ಸಿ ಮೋಟರ್ಸ್ ಬಳಿ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ತಡರಾತ್ರಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಆಟೋ ಚಾಲಕನ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ಬೆಳಗಾವಿ ಮಾರುತಿ ನಗರದ ಬಳಿಯ ಎಸ್‌ಸಿ ಮೋಟರ್ಸ್ ಬಳಿ ಘಟನೆ ನಡೆದಿದೆ. ಈ ಕುರಿತು ಈಗಾಗಲೇ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ನಿವಾಸಿ, ಆಟೋ ಚಾಲಕ ರಿಯಾಜ್ ತಹಶೀಲ್ದಾರ್ (53) ಗಂಭೀರಗೊಂಡಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ಬಸ್ ತಂಗುದಾಣದಿಂದ ಅಲಾರವಾಡ ಕ್ರಾಸ್‌ವರೆಗೆ ಹೊರಟಾಗ, ಪ್ರಯಾಣಿಕ ಮತ್ತು ಚಾಲಕನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪ್ರಯಾಣಿಕ ಚಾಕುವಿನಿಂದ ಆಟೋ ಚಾಲಕನ ಕತ್ತು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ರಿಯಾಜ್‌ ಅದೇ ಪರಿಸ್ಥಿತಿಯಲ್ಲಿ ಬಸ್ ನಿಲ್ದಾಣದವರೆಗೂ ಬಂದಿದ್ದಾನೆ. ನಂತರ ಸ್ಥಳೀಯ ಆಟೋ ಚಾಲಕರೇ ಸೇರಿಕೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಈಗ ಕೆಎಲ್ಇ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾನೆ.

ಗಾಂಜಾ ಘಮಲು ಕಾರಣ‍‍‍‍ವೇ?:

ಗಾಂಜಾ ಮತ್ತಿನಲ್ಲಿದ್ದ ಪ್ರಯಾಣಿಕನೇ ಆಟೋ ಚಾಲಕ ರಿಯಾಜ್‌ ಕುತ್ತಿಗೆಗೆ ಚಾಕು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ, ಆರೋಪಿ ಯಾರು ಎಂಬುವುದರ ಕುರಿತು ಪೊಲೀಸರು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಗಾಂಜಾ ಮತ್ತಿನಲ್ಲಿ ಚಾಕುವಿನಿಂದ ಕತ್ತುಸೀಳಿ ಕೊಲೆಗೆ ಯತ್ನಿಸಲಾಗಿದೆ ಎಂದು ಆಟೋ ಚಾಲಕನ ಕುಟುಂಬಸ್ಥರು ಕೂಡ ಆರೋಪಿಸಿದ್ದಾರೆ.

ಆಟೋ ಚಾಲಕನ ಬಳಿ ಇದ್ದ ಹಣವನ್ನು ಕೂಡ ಆರೋಪಿ ದೋಚಿದ್ದಾನೆ. ಬಾಡಿಗೆಗೆ ಆಟೋ ಚಲಾಯಿಸಿ ಜೀವನ ನಡೆಸುತ್ತಿದ್ದ ರಿಯಾಜ್, ಇದರಿಂದ ಬಂದ ಹಣದಿಂದಲೇ ಕುಟುಂಬ ನಡೆಸಬೇಕಿತ್ತು. ಆದರೆ, ಈಗ ಆತನ ಮೇಲೆಯೇ ಹಲ್ಲೆ ನಡೆದಿದ್ದು, ಕೂಡ ಕುಟುಂಬ ಸದಸ್ಯರು ಕೂಡ ಆಘಾತಗೊಂಡಿದ್ದಾರೆ.

ಇದರ ನಡುವೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಳಮಾರುತಿ ಪೊಲೀಸ್ ಠಾಣೆ ಬಳಿ ಸಂಬಂಧಿಕರು, ಆಟೋ ಚಾಲಕರ ಜಮಾವಣೆಯಾಗಿದ್ದರು. ಈ ಕುರಿತು ಮಾಳಮಾರುತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಮಾಳಮಾರುತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕನ ಕುತ್ತಿಗೆಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ಮಾಡುತ್ತಿದ್ದೇವೆ. ಜತೆಗೆ ಆರೋಪಿ ಕ್ಷಣಕ್ಕೊಂದು ಮಾಹಿತಿ ನೀಡುತ್ತಿರುವುದರಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೇವೆ. ವೈದ್ಯರು ಏನು ವರದಿ ನೀಡುತ್ತಾರೆ ನೋಡೋಣ. ಜತೆಗೆ ಆರೋಪಿ ಮತ್ತು ಆಟೋ ಚಾಲಕ ನಡುವೆ ನಡೆದಿರುವ ವಾಗ್ವಾದ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಕೂಡ ವಶಪಡಿಸಿಕೊಂಡಿದ್ದೇವೆ.

- ರೋಹನ ಜಗದೀಶ, ಡಿಸಿಪಿ, ಬೆಳಗಾವಿ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ