ಬಿಎಸ್‌ಪಿಎಲ್‌ ಭದ್ರತಾ ಸಿಬ್ಬಂದಿಯಿಂದ ಕುರಿಗಾಹಿ ಮೇಲೆ ಮಾರಾಣಾಂತಿಕ ಹಲ್ಲೆ

KannadaprabhaNewsNetwork |  
Published : Jul 26, 2025, 01:30 AM IST
25ಕೆಪಿಎಲ್23 ಬಿಎಸ್ ಪಿಎಲ್ ಭದ್ರತಾ ಸಿಬ್ಬಂದಿಯಿಂದ ಹಲ್ಲೆಗೊಳಗಾದ ದೇವಪ್ಪ ಹಾಲಳ್ಳಿ 25ಕೆಪಿಎಲ್24 ಭದ್ರತಾ ಸಿಬ್ಬಂದಿಯನ್ನು ಹೋರಾಟಗಾರರು ಆಸ್ಪತ್ರೆಯಲ್ಲಿ ತರಾಟೆಗೆ ತೆಗೆದುಕೊಂಡಿರುವುದು. | Kannada Prabha

ಸಾರಾಂಶ

ಬಿಎಸ್‌ಪಿಎಲ್ ಕಾರ್ಖಾನೆಯ ನಿಗದಿತ ಭೂಮಿಯ ಕಾಂಪೌಂಡ್ ಒಳಗೆ ಇರುವ ಬಸಾಪುರ ಕೆರೆಯಲ್ಲಿ ನೀರು ಕುಡಿಸಲು ಮುಂದಾದಾಗ ಅಟ್ಟಿಸಿಕೊಂಡು ಬಂದ ಭದ್ರತಾ ಸಿಬ್ಬಂದಿ ಕುರಿಗಾಹಿ ಹಾಗೂ ದನಗಾಹಿಗಳ ಮೇಲೆ ದಾಳಿ ಮಾಡಿದ್ದಾರೆ.

ಕೊಪ್ಪಳ:

ಬಸಾಪುರ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋದಾಗ ಬಿಎಸ್‌ಪಿಎಲ್ ಭದ್ರತಾ ಸಿಬ್ಬಂದಿ ಕುರಿಗಾಹಿ ದೇವಪ್ಪ ಹಾಲಳ್ಳಿ ಮೇಲೆ ಶುಕ್ರವಾರ ಮಾರಾಣಾಂತಿಕ ಹಲ್ಲೆ ನಡೆಸಿದ್ದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಎಸ್‌ಪಿಎಲ್ ಕಾರ್ಖಾನೆಯ ನಿಗದಿತ ಭೂಮಿಯ ಕಾಂಪೌಂಡ್ ಒಳಗೆ ಇರುವ ಬಸಾಪುರ ಕೆರೆಯಲ್ಲಿ ನೀರು ಕುಡಿಸಲು ಮುಂದಾದಾಗ ಅಟ್ಟಿಸಿಕೊಂಡು ಬಂದ ಭದ್ರತಾ ಸಿಬ್ಬಂದಿ ಕುರಿಗಾಹಿ ಹಾಗೂ ದನಗಾಹಿಗಳ ಮೇಲೆ ದಾಳಿ ಮಾಡಿದ್ದಾರೆ.

ದೇವಪ್ಪ ಹಾಲಳ್ಳಿ ಅವರನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದು ಕಾಲು, ಹೊಟ್ಟೆ, ಎದೆ ಹಾಗೂ ತಲೆಗೆ ಬಲವಾದ ಪೆಟ್ಟುಬಿದ್ದಿದೆ. ಇದರಿಂದ ನಿತ್ರಾಣಗೊಂಡ ಅವರನ್ನು ಭದ್ರತಾ ಸಿಬ್ಬಂದಿಯೇ ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ದಾರಿ ಮಧ್ಯೆದಲ್ಲಿಯೇ ಇಳಿಸಿ ಹೋಗಲು ಮುಂದಾಗಿದ್ದ ಭದ್ರತಾ ಸಿಬ್ಬಂದಿ ವಿರುದ್ಧ ಕುರಿಗಾಹಿಗಳು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಆಸ್ಪತ್ರೆಗೆ ತಂದುಬಿಟ್ಟಿದ್ದಾರೆ.

ಸೆಕ್ಯೂರಿಟಿ ಪೊಲೀಸ್‌ ವಶ:

ಆಸ್ಪತ್ರೆಗೆ ಬಂದಿದ್ದ ಭದ್ರತಾ ಸಿಬ್ಬಂದಿ ಸುರೇಶ ಬಾದಾಮಿ ಅವರನ್ನು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹೋರಾಟಗಾರರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕುರಿಗಾಹಿಯನ್ನು ಮನಬಂದಂತೆ ಥಳಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಬಸಾಪುರ ಕೆರೆಯಲ್ಲಿ ನೀರು ಕುಡಿಯಲು ಬಿಟ್ಟರೇ ನಿಮಗೇನು ತೊಂದರೆ. ಸುಪ್ರೀಂಕೋರ್ಟ್ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿರುವಂತೆ ಹೇಳಿದ್ದರೂ ಅದನ್ನು ಅತಿಕ್ರಮಿಸಿಕೊಂಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಸುರೇಶ ಬಾದಾಮಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.

ಚಾಲಕ ಪರಾರಿ:

ಆಸ್ಪತ್ರೆಗೆ ಕುರಿಗಾಹಿ ಸೇರಿಸಲು ತಂದಿದ್ದ ವಾಹನದ ಚಾಲಕ ಪರಾರಿಯಾಗಿದ್ದಾನೆ. ಆಸ್ಪತ್ರೆಯಲ್ಲಿ ಹೋರಾಟಗಾರರು ಸೇರಿದಂತೆ ಮತ್ತಿತರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಭಯಗೊಂಡ ಚಾಲಕ ವಾಹನ ನಿಲ್ಲಿಸಿ ಓಡಿ ಹೋಗಿದ್ದಾನೆ.

ಪ್ರಾಣಾಪಾಯದಿಂದ ಪಾರು:

ದೇವಪ್ಪ ಹಾಲಳ್ಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಆತನಿಗೆ ಬಲವಾದ ಪೆಟ್ಟುಬಿದ್ದಿರುವುದರಿಂದ ಇನ್ನಷ್ಟು ಚಿಕಿತ್ಸೆಯ ಅಗತ್ಯವಿದೆ. ಸದ್ಯಕ್ಕೆ ಈಗಲೇ ಎಲ್ಲವನ್ನು ಹೇಳಲು ಆಗುವುದಿಲ್ಲ, ವೈದ್ಯಕೀಯ ತಪಾಸಣೆ ಬಳಿಕ ವಿವರವಾಗಿ ಹೇಳಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಸೆಕ್ಯೂರಿಟಿ ವಿರುದ್ಧ ದೂರು:

ಕೊಪ್ಪಳ ಬಚಾವೋ ಆಂದೋಲನ ಸಮಿತಿ ಕುರಿಗಾಹಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಅವರ ಕುಟುಂಬದ ಮೂಲಕ ದೂರು ಕೊಡಿಸುವುದಾಗಿ ಹೇಳಿದ್ದಾರೆ.

ನಾವು ಏನು ಮಾಡದಿದ್ದರೂ ನಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ. ಈಗ ಅವರು ಮಾರಣಾಂತಿಕ ಹಲ್ಲೆ ಮಾಡಿರುವುದರಿಂದ ಬಿಎಸ್‌ಪಿಎಲ್ ಭದ್ರತಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಹೋರಾಟಗಾರ ಕೆ.ಬಿ. ಗೋನಾಳ ತಿಳಿಸಿದ್ದಾರೆ.

ಈ ವೇಳೆ ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮುದಕಪ್ಪ, ಭೀಮಸೇನ ಕಲಿಕೇರಿ ಸೇರಿದಂತೆ ಅನೇಕರು ಇದ್ದರು.ಸಭೆ ಮೊಟಕು

ಒಂಭತ್ತು ಹೋರಾಟಗಾರರ ಮೇಲೆ ಬಿಎಸ್‌ಪಿಎಲ್ ಕಂಪನಿ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಲು ಪ್ರವಾಸಿ ಮಂದಿರದಲ್ಲಿ ಕಂಪನಿ ವಿರುದ್ಧದ ಹೋರಾಟಗಾರರ ಸಭೆಯನ್ನು ಶುಕ್ರವಾರ ಕರೆಯಲಾಗಿತ್ತು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಕುರಿಗಾಹಿ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದರಿಂದ ಸಭೆ ಮೊಟಕುಗೊಳಿಸಿ ಆಸ್ಪತ್ರೆಗೆ ಎಲ್ಲರೂ ದೌಡಾಯಿಸಿದರು.ನಾನು ನಾಲ್ಕಾರು ದಿನ ಊರಲ್ಲಿ ಇರಲಿಲ್ಲ. ಬಿಎಸ್‌ಪಿಎಲ್ ಕಾರ್ಖಾನೆಯ ಬಳಿ ಗಲಾಟೆಯ ಬಗ್ಗೆ ಮಾಹಿತಿ ಪಡೆಯುತ್ತೇನೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ನಂತರ ಅಗತ್ಯ ಕ್ರಮವಹಿಸುತ್ತೇನೆ.

ರಾಘವೇಂದ್ರ ಹಿಟ್ನಾಳ ಶಾಸಕ

ಕಾರ್ಖಾನೆ ಸ್ಥಾಪನೆ ಮುನ್ನವೇ ಈ ರೀತಿ ಬಿಎಸ್‌ಪಿಎಲ್‌ ಕಾರ್ಖಾನೆಯಿಂದ ದಬ್ಬಾಳಿಕೆ ಶುರುವಾಗಿದೆ. ಒಂದು ವೇಳೆ ಕಾರ್ಖಾನೆ ಶುರುವಾದರೆ ಇಲ್ಲಿ ಜನರ ಪರಿಸ್ಥಿತಿ ಊಹಿಸುವುದು ಕಷ್ಟವಾಗಲಿದೆ. ಈಗ ಕುರಿಗಾಹಿ, ದನಗಾಹಿಗಳ ಮೇಲೆ ಹಲ್ಲೆ ಮಾಡುತ್ತಾರೆ. ಆಗ ಎಲ್ಲರ ಮೇಲೆಯೂ ಹಲ್ಲೆ ಮಾಡುತ್ತಾರೆ.

ಅಲ್ಲಪ್ರಭು ಬೆಟ್ಟದೂರು, ಹೋರಾಟಗಾರಕುರಿಗಾಹಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಅಮಾನವೀಯ. ಕಾರ್ಖಾನೆ ಸ್ಥಾಪಿಸುವ ಮುನ್ನವೇ ಗೂಂಡಾಗಿರಿ ಮಾಡುತ್ತಿದ್ದಾರೆ. ಬಿಎಸ್‌ಪಿಎಲ್ ಕಾರ್ಖಾನೆ ತೊಲಗಿಸಲೇಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ.

ಬಸವರಾಜ ಶೀಲವಂತರ, ಹೋರಾಟಗಾರ

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ